ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊತ್ತ ಗ್ರಾಮದ ಶಾಲಾ ಮಕ್ಕಳಿಗೆ ಗುಬ್ಬಿ ಗೂಡು ಪೆಟ್ಟಿಗೆ ವಿತರಣೆ

Last Updated 20 ಮಾರ್ಚ್ 2023, 13:08 IST
ಅಕ್ಷರ ಗಾತ್ರ

ಮೈಸೂರು: ಟಿವಿಎಸ್ ಮೋಟಾರ್‌ ಕಂಪನಿಯ ಶ್ರೀನಿವಾಸನ್ ಸರ್ವೀಸಸ್ ಟ್ರಸ್ಟ್ (ಟಿವಿಎಸ್ ಎಸ್‌ಎಸ್‌ಟಿ) ಹಾಗೂ ಮೈಸೂರಿನ ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ (ಡಬ್ಲ್ಯುಸಿಎಫ್‌) ಸಹಯೋಗದಲ್ಲಿ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ನಂಜನಗೂಡು ತಾಲ್ಲೂಕಿನ ಮೊತ್ತ ಗ್ರಾಮದ ಶಾಲಾ ಮಕ್ಕಳಿಗೆ ಗುಬ್ಬಿ ಗೂಡು ಪೆಟ್ಟಿಗೆಗಳನ್ನು ಸೋಮವಾರ ವಿತರಿಸಲಾಯಿತು.

ಡಬ್ಲ್ಯುಸಿಎಫ್‌ನ ರಾಜ್‌ಕುಮಾರ್ ಡಿ. ಮಾತನಾಡಿ, ‘ಗುಬ್ಬಿಗಳು ಮೊದಲಿನಿಂದಲೂ ಮನುಷ್ಯರ ಒಡನಾಡಿಯಾಗಿವೆ. ಮನೆಗಳು, ಜನವಸತಿ ಪ್ರದೇಶಗಳ ಸುತ್ತಮುತ್ತಲೂ ಹಾರಾಡಿಕೊಂಡು ನಮ್ಮ ಜೊತೆಯೇ ಇರುವ ಪಕ್ಷಿಗಳಾಗಿವೆ. ಹಳೆಯ ಮನೆಗಳು, ಮಂದಿರಗಳು, ಕಟ್ಟಡಗಳ ಬಿರುಕುಗಳಲ್ಲಿ ಗೂಡು ನಿರ್ಮಿಸುತ್ತಿದ್ದವು. ಮನೆಗಳಲ್ಲಿ ರಾಗಿ, ಜೋಳ, ನವಣೆ ಮುಂತಾದವುಗಳನ್ನು ಕೇರುತ್ತಿದ್ದಾಗ ಅಲ್ಲಿ ಉಳಿಯುವ, ಬೀಳುವ ಕಾಳುಗಳನ್ನು ತಿನ್ನುತ್ತಿದ್ದವು. ಒಕ್ಕಣೆ ಮಾಡುವಾಗ ಉಳಿಯುವ ಕಾಳುಗಳನ್ನು ಹೆಕ್ಕುತ್ತಿದ್ದವು. ಈಗ ಇದಕ್ಕೆ ಅವಕಾಶ ಇಲ್ಲದಾಗಿದೆ’ ಎಂದರು.

‘ಈಗ, ಧಾನ್ಯ ಒಕ್ಕಣೆಗೆ ಯಂತ್ರಗಳು ಬಂದಿವೆ. ನಮ್ಮ ಹೊಲ–ಗದ್ದೆಗಳಿಗೆ ಸಿಂಪಡಿಸುವ ಕ್ರಿಮಿನಾಶಕಗಳು ಗುಬ್ಬಿಗಳಿಗೆ ವಿಷವಾಗಿ ಅವುಗಳ ಸಂತತಿಗೆ ಮಾರಕವಾಗಿದೆ. ಆಹಾರದ ಹಾಗೂ ಆವಾಸ ಸ್ಥಾನದ ಕೊರತೆಯಿಂದ ಗುಬ್ಬಿಗಳ ಸಂತತಿ ಕ್ಷೀಣಿಸುತ್ತಿದೆ. ಈಗಲೂ ಕಾಲ ಮಿಂಚಿಲ್ಲ. ಗುಬ್ಬಿಗಳಿಗಾಗಿ ಗೂಡುಗಳನ್ನು ಇಟ್ಟು ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳಿಂದ ತೊಂದರೆಯಾಗದಂತೆ ನೋಡಿಕೊಂಡರೆ ಅವುಗಳನ್ನು ಸಂರಕ್ಷಿಸಬಹುದು’ ಎಂದು ತಿಳಿಸಿದರು.

ಟಿವಿಎಸ್‌ ಎಸ್‌ಎಸ್‌ಟಿಯ ಕ್ಷೇತ್ರ ನಿರ್ದೇಶಕ ಸುಬ್ರಹ್ಮಣ್ಯಂ, ಟ್ರಸ್ಟ್‌ ಸಿಬ್ಬಂದಿ ಆರ್.ರಮೇಶ್, ಡಬ್ಲ್ಯುಸಿಎಫ್‌ನ ರಾಜ್‌ಕುಮಾರ್ ಡಿ., ಅನಿಲ್ ಕುಮಾರ್, ಮಾರ್ಕ್ ಸ್ಟೀವ್ ಮತ್ತು ಗ್ರಾಮದ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT