ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು ಚುಣಾವಣಾ ರಾಯಭಾರಿಗಳಾಗಿ: ಡಾ.ಕೆ.ವಿ.ರಾಜೇಂದ್ರ

Last Updated 24 ನವೆಂಬರ್ 2022, 12:33 IST
ಅಕ್ಷರ ಗಾತ್ರ

ಮೈಸೂರು: ‘ವಿದ್ಯಾರ್ಥಿಗಳು ಚುನಾವಣಾ ರಾಯಭಾರಿಗಳಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಇಲ್ಲಿನ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ಆಯೋಗ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘‍ಪ್ರಜಾಪ್ರಭುತ್ವಕ್ಕಾಗಿ ಒಂದು ಗಂಟೆ’–ಯುವ ಮತದಾರರ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅರ್ಹರೆಲ್ಲರೂ ಪಟ್ಟಿಯಲ್ಲಿ ಹೆಸರನ್ನು ನೋಂದಣಿ ಮಾಡಿಸಬೇಕು. ನೆರೆಹೊರೆಯವರನ್ನೂ ನೋಂದಣಿ ಮಾಡಿಸಿ ಜಾಗೃತ ಮತದಾರರಾಗಬೇಕು’ ಎಂದರು.

‘ಈ ಹಿಂದೆ 2023ರ ಜ.1ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಬೇಕಾಗಿತ್ತು. ಆದರೆ, ಈಗ 17+ ವರ್ಷ ತುಂಬಿದವರು ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ. ನವ ಮತದಾರರು ಇದನ್ನು ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಅರ್ಹ ನವ ಮತದಾರರಿದ್ದು, ಇವರಲ್ಲಿ 17ಸಾವಿರ ಮಾತ್ರ ನೋಂದಾಯಿಸಿದ್ದಾರೆ. ಉಳಿದವರ ನೋಂದಣಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಮೊಬೈಲ್ ಫೋನ್ ಆ್ಯಪ್‌ನಲ್ಲಿ:‘ಮತಗಟ್ಟೆ ಅಧಿಕಾರಿಗಳ ಬಳಿ ಅಥವಾ ವೋಟರ್ ಹೆಲ್ಪ್‌ಲೈನ್‌ ಆ್ಯಪ್‌ನಲ್ಲಿ ನೋಂದಾಯಿಸಬಹುದು. ತಮ್ಮ ಮೊಬೈಲ್‌ ಫೋನ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ತಿದ್ದುಪಡಿ ಮಾಡಬಹುದಾಗಿದೆ. ಅಲ್ಲದೇ ಮರಣ ಹೊಂದಿದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಅವಕಾಶ ಕಲ್ಪಿಸಲಾಗಿದೆ. ಒಬ್ಬರು ಕನಿಷ್ಠ 20 ನವ ಮತದಾರರನ್ನು ಪಟ್ಟಿಗೆ ಸೇರ್ಪಡೆ ಮಾಡುವ ಹಾಗೂ ಮರಣ ಹೊಂದಿರುವ ಕನಿಷ್ಠ ಐವರು ಮತದಾರರನ್ನು ಪಟ್ಟಿಯಿಂದ ತೆಗೆಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಭಾನುವಾರ ಮಿಂಚಿನ ನೋಂದಣಿ:‘ಪ್ರತಿ ಭಾನುವಾರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಕ್ರಮ ವಹಿಸುವರು. ಮರಣ ಹೊಂದಿದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವರು. ಮತಗಟ್ಟೆ ಅಧಿಕಾರಿಗಳ ಬಳಿ ಕರಡು ಮತದಾರರ ಪಟ್ಟಿ ಇದ್ದು, ಹೆಸರು ಇದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು’ ಎಂದು ಹೇಳಿದರು.

‘ಶೇ 40ಕ್ಕಿಂತ ಹೆಚ್ಚಿನ ವಿಕಲತೆ ಹೊಂದಿದವರ ಮನೆಗೇ ಹೋಗಿ ಮತದಾನ ಮಾಡಿಸುವ ವ್ಯವಸ್ಥೆ ಬರಲಿರುವುದರಿಂದ ವಿಕಲತೆಯ ಮಾಹಿತಿಯನ್ನು ಸಮರ್ಪಕವಾಗಿ ನೋಂದಣಿ ಮಾಡಿಸಬೇಕು’ ಎಂದು ತಿಳಿಸಿದರು.

‘ನನ್ನದೊಂದು ಮತದಿಂದ ಬದಲಾವಣೆ ಅಸಾಧ್ಯ ಎಂಬ ಭಾವನೆ ಇರಬಾರದು. ಒಂದೊಂದು ಮತವೂ ಅತ್ಯಮೂಲ್ಯವಾದುದು. ರಾಜ್ಯ ಹಾಗೂ ದೇಶ ಸದೃಢವಾಗಲು ಕಡ್ಡಾಯವಾಗಿ ಮತದಾನ ಮಾಡಬೇಕು. ಜನಪ್ರತಿನಿಧಿಗಳು ಚೆನ್ನಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ಮೊದಲು ಒಳ್ಳೆಯವರನ್ನು ನಾವು ಆಯ್ಕೆ ಮಾಡಬೇಕು. ಒಂದು ಮತವೂ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT