ಮೈಸೂರು: ‘ಶಿವದಾಸ್ ಘೋಷ್ ಅವರ ವಿಚಾರಗಳು ಭಾರತದ ಸಮಾಜವಾದಿ ಕ್ರಾಂತಿಗಲ್ಲದೇ, ಜಗತ್ತಿನ ದುಡಿಯುವ ವರ್ಗದ ವಿಮೋಚನೆಗೆ ದಾರಿ ದೀಪವಾಗಿದೆ’ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಅಮಿತಾಬ್ ಚಟರ್ಜಿ ಹೇಳಿದರು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಸಂಸ್ಥಾಪಕ ಶಿವದಾಸ್ ಘೋಷ್ ಅವರ 48ನೇ ಸ್ಮರಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಶಿವದಾಸ್ ಘೋಷ್ ಬಗ್ಗೆ ಹೆಚ್ಚು ಓದಿಕೊಳ್ಳಬೇಕು. ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಚಿಂತನೆಗಳು ಇಂದಿಗೂ ಜೀವಂತವಾಗಿವೆ. ದುಡಿಯುವ ವರ್ಗದ ವಿಮುಕ್ತಿಗಾಗಿ ಎಸ್‌ಯುಸಿಐ ಹೆಸರಿನಲ್ಲಿ ಕಮ್ಯುನಿಸ್ಟ್ ಪಕ್ಷ ಸ್ಥಾಪಿಸಿದ ಮಹಾನ್ ನಾಯಕ’ ಎಂದು ಸ್ಮರಿಸಿದರು.
‘ದೇಶದಲ್ಲಿ ಊಳಿಗಮಾನ್ಯ ಪದ್ಧತಿ ಹೋಗಿ ಹೊಸ ವ್ಯವಸ್ಥೆ ರಚನೆಯಾಗಿದೆ. ಅದೇ ದೇಶದಾದ್ಯಂತ ಬೇರೂರಿರುವ ಬಂಡವಾಳಶಾಹಿ ವ್ಯವಸ್ಥೆ. ಪ್ರಸ್ತುತ ಅದು ಸಾಮ್ರಾಜ್ಯವಾದ ಹಂತಕ್ಕೆ ಬೆಳೆದಿದೆ ಎಂಬ ಸತ್ಯವನ್ನು ಶಿವದಾಸ್ ಘೋಷ್ ತೋರಿಸಿಕೊಟ್ಟಿದ್ದಾರೆ’ ಎಂದು ತಿಳಿಸಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನವಿರೋಧಿಯಾಗಿದ್ದು, ಬಂಡವಾಳಶಾಹಿಗಳ ಪರವಾದ ನೀತಿ ಜಾರಿಗೊಳಿಸುವಲ್ಲಿ ತೊಡಗಿವೆ. ದುಡಿಯುವ ಜನರು ಜಾಗೃತರಾಗಿ ಶೋಷಕ ಬಂಡವಾಳಶಾಹಿ ವ್ಯವಸ್ಥೆ ಕಿತ್ತೊಗೆಯಲು ಸಂಘಟಿತರಾಗಬೇಕು. ಜನರನ್ನು ಸಂಘಟಿಸಿ ಕ್ರಾಂತಿಯ ಕಡೆಗೆ ನಡೆಯುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
‘ಮಾರ್ಕ್ಸ್‌ವಾದ ವಿಜ್ಞಾನವಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಅನ್ವಯಿಸುವುದರಿಂದ ಮಾತ್ರ ನಿರ್ದಿಷ್ಟ ಸಮಸ್ಯೆ ಅಥವಾ ಪ್ರಶ್ನೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಹೀಗಾಗಿ ದೇಶದಲ್ಲಿ ವೇದಾಂತ, ದ್ವೈತ, ಅದ್ವೈತ ಹೀಗೆ ಹಲವಾರು ಸಿದ್ಧಾಂತಗಳಿದ್ದರೂ ಇವುಗಳನ್ನು ಬಿಟ್ಟು ಶಿವದಾಸ್ ಘೋಷ್ ಮಾರ್ಕ್ಸ್‌ವಾದ ಆಯ್ಕೆ ಮಾಡಿಕೊಂಡರು. ಇದು ಸತ್ಯಾಧಾರಿತವಾದ ತತ್ವಶಾಸ್ತ್ರವಾಗಿದ್ದು, ಇಂದಿನ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡುವ ಏಕೈಕ ಅಸ್ತ್ರವಾಗಿದೆ’ ಎಂದು ತಿಳಿಸಿದರು.
‘ಮಾರ್ಕ್ಸ್‌ವಾದ ಹೇಳುವ ಹಾಗೆ ನಾಯಕತ್ವವನ್ನು ಕುರುಡಾಗಿ ಅನುಸರಿಸಬಾರದು. ಬದಲಾಗಿ ಸೈದ್ಧಾಂತಿಕವಾಗಿ ನಿಮ್ಮನ್ನೇ ನೀವು ಗಟ್ಟಿಗೊಳಿಸಿಕೊಳ್ಳುವ ಮೂಲಕ ಪಕ್ಷವನ್ನು ಆಂತರಿಕವಾಗಿ ಬಲಪಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಎಸ್‌ಯುಸಿಐ ರಾಜ್ಯ ಸೆಕ್ರೆಟೇರಿಯೆಟ್ ಸದಸ್ಯ ಎಂ.ಎನ್.ಶ್ರೀರಾಮ್ ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದು ಬಂಡವಾಳಶಾಹಿಗಳಿಗೆ ಹೊರತು, ದುಡಿಯುವ ವರ್ಗಕ್ಕಲ್ಲ. ಸಾಮಾನ್ಯ ಜನರು, ರೈತ ಕಾರ್ಮಿಕರ ಮೇಲಿನ ಶೋಷಣೆಯು ಮುಂದುವರಿಯುತ್ತಿದೆ. ಯಾವ ಪಕ್ಷದವರೂ ಇದರ ವಿರುದ್ಧ ಧ್ವನಿ ಎತ್ತದೆ, ತಾವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ನೀಟ್ ಪರೀಕ್ಷೆ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ದೊಡ್ಡ ಹಗರಣ ನಡೆದಿದೆ. ಮುಡಾ ಹಗರಣದಲ್ಲಿಯೂ ಎಲ್ಲ ಪಕ್ಷದವರು ಭಾಗಿದಾರರಾಗಿದ್ದಾರೆ’ ಎಂದು ಟೀಕಿಸಿದರು.
ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಸಮಿತಿ ಸದಸ್ಯ ಬಿ.ರವಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರಾದ ವಿ.ಜ್ಞಾನಮೂರ್ತಿ, ವಿ.ಎನ್.ರಾಜಶೇಖರ್, ಜಿ.ಶಶಿಕುಮಾರ್ ಇದ್ದರು.
ಸಮಾಜವಾದಿ ಕ್ರಾಂತಿ ನೆರವೇರಿಸಲು ಶಿವದಾಸ್ ಘೋಷ್ ಅವರ ವಿಚಾರಗಳ ಆಧಾರದ ಮೇಲೆ ಚಳವಳಿಯನ್ನು ಬೆಳೆಸಬೇಕಿದೆ.ಎಂ.ಎನ್ ಶ್ರೀರಾಮ್, ಎಸ್‌ಯುಸಿಐ, ರಾಜ್ಯ ಸೆಕ್ರೆಟೇರಿಯೆಟ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.