ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿಗೆ ಹೆಚ್ಚುವರಿ ದರ ಕೊಡಿಸದಿದ್ದಲ್ಲಿ ಸಿಎಂ ಮನೆ ಎದುರು ಧರಣಿ: ಕುರುಬೂರು

Published 29 ಅಕ್ಟೋಬರ್ 2023, 9:14 IST
Last Updated 29 ಅಕ್ಟೋಬರ್ 2023, 9:14 IST
ಅಕ್ಷರ ಗಾತ್ರ

ಮೈಸೂರು: ‘ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಹೆಚ್ಚುವರಿ ದರವನ್ನು 10 ದಿನಗಳಲ್ಲಿ ಕೊಡಿಸಬೇಕು. ಇಲ್ಲದಿದ್ದರೆ, ಇಲ್ಲಿನ ಶಾರದಾದೇವಿ ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮುಂದೆ ನ.9ರಿಂದ ಧರಣಿ ನಡೆಸಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

ಇಲ್ಲಿ ಭಾನುವಾರ ರೈತ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು’ ಎಂದರು.

‘ರಾಜ್ಯ ಸರ್ಕಾರ ಹಿಂದಿನ ಸಾಲಿನಲ್ಲಿ ಟನ್‌ ಕಬ್ಬಿಗೆ ಹೆಚ್ಚುವರಿಯಾಗಿ ₹ 150 ನಿಗದಿಪಡಿಸಿತ್ತು. ಅದನ್ನು ಸಕ್ಕರೆ ಕಾರ್ಖಾನೆಗಳು ಈವರೆಗೂ ಪಾವತಿಸಿಲ್ಲ. ಪ್ರಸಕ್ತ ಸಾಲಿನಲ್ಲಿ ದರ ಏರಿಕೆಗೆ ಸರ್ಕಾರ ಕ್ರಮ ವಹಿಸಿಲ್ಲ’ ಎಂದು ದೂರಿದರು.

‘ಪ್ರಸಕ್ತ ಸಾಲಿನಲ್ಲಿ ಟನ್‌ ಕಬ್ಬಿನ ಉತ್ಪಾದನಾ ವೆಚ್ಚ ₹,3580 ಆಗುತ್ತದೆ. ಆದರೆ, ಸರ್ಕಾರ ₹ 3,150 ನಿಗದಿಪಡಿಸಿದೆ. ಇದರಿಂದ ಅನ್ಯಾಯವಾಗಿದೆ. ಕೂಡಲೇ ಪರಿಷ್ಕರಿಸಿ ನ್ಯಾಯಯುತ ದರ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಬರಗಾಲದಿಂದಾಗಿ ಕಬ್ಬಿನ ಇಳುವರಿ ಹಾಗೂ ಪ್ರದೇಶ ಕಡಿಮೆಯಾಗಿದೆ. ಆದ್ದರಿಂದ ರೈತರು ಕಬ್ಬು ಕಟಾವಿನ ಬಗ್ಗೆ ಆತಂಕಗೊಳ್ಳದೇ, ಹೆಚ್ಚು ದರ ನಿಗದಿಪಡಿಸುವವರೆಗೂ ಹೋರಾಟವನ್ನು ಬೆಂಬಲಿಸಬೇಕು. ಸಕ್ಕರೆ ಕಾರ್ಖಾನೆಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸದಿದ್ದರೆ, ಸರ್ಕಾರದ ಆದೇಶ ಧಿಕ್ಕರಿಸಿದ ಕಾರಣ ನೀಡಿ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಬ್ಬು ಬೆಳೆಗಾರರಿಗೆ ಬರಬೇಕಾದ ಹಣ ಕೊಡಿಸಬೇಕು. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಕಾನೂನು–ಸುವ್ಯವಸ್ಥೆ ಹದಗೆಡುವ ಮುನ್ನವೇ ರೈತರಿಗೆ ನ್ಯಾಯ ಕೊಡಿಸಬೇಕು’ ಎಂದು ಎಚ್ಚರಿಕೆ ನೀಡಿದರು.

‘ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಸುತ್ತಿಲ್ಲ. ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿರುವ ರೈತರು ಅಲ್ಪಸ್ವಲ್ಪ ಉಳಿದಿರುವ ಬೆಳೆ ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ. ಮಳೆ ಕಡಿಮೆಯಾದ್ದರಿಂದ ಪಂಪ್‌ಸೆಟ್‌ಗಳಿಗೆ ಐದು ತಾಸು ವಿದ್ಯುತ್ ಕೊಡಲಾಗುವುದು ಎಂದು ಸರ್ಕಾರ ಹೇಳುತ್ತದೆ. ಆದರೆ, ಕೈಗಾರಿಕೆಗಳಿಗೆ ಹಾಗೂ ಉದ್ಯಮಿಗಳಿಗೆ 24 ಗಂಟೆಯೂ ವಿದ್ಯುತ್ ಪೂರೈಸುತ್ತಿದೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸಿ, ರೈತರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ದಿನಕ್ಕೆ 10 ಗಂಟೆಗಳವರೆಗೆ ವಿದ್ಯುತ್ ನೀಡದಿದ್ದರೆ ಪಂಪ್‌ಸೆಟ್‌ಗಳನ್ನೇ ನಂಬಿರುವ 45 ಲಕ್ಷ ಕೃಷಿಕರು ಬೀದಿಪಾಲಾಗುತ್ತಾರೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರವು ತೀವ್ರ ಬರ‍ಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದು ಬಿಟ್ಟರೆ, ಪರಿಹಾರ ಕಾರ್ಯವನ್ನು ಈವರೆಗೂ ಆರಂಭಿಸಿಲ್ಲ. ಜಾನುವಾರುಗಳಿಗೆ ಮೇವು, ಕುಡಿಯುವ ನೀರು, ರೈತರಿಗೆ ಬೆಳೆ ನಷ್ಟ ಪರಿಹಾರವನ್ನು ತ್ವರಿತವಾಗಿ ವಿತರಿಸಬೇಕು’ ಎಂದು ಒತ್ತಾಯಿಸಿದರು.

‘ಸಂಯುಕ್ತ ಕಿಸಾನ್ ಮೋರ್ಚಾದಿಂದ ರಾಷ್ಟ್ರೀಯ ರೈತ ಸಂಸತ್ ಅಧಿವೇಶನ ನವದೆಹಲಿಯಲ್ಲಿ ನ.6 ಮತ್ತು 7ರಂದು ನಡೆಯಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತರು ಯಾರನ್ನು ಬೆಂಬಲಿಸಬೇಕು ಎಂಬುದನ್ನು ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸೋಮಶೇಖರ್, ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಫುರ ನಾಗರಾಜ್, ಹಳ್ಳಿಕರೆಹುಂಡಿ ಭಾಗ್ಯರಾಜ್, ಕಿರಗಸೂರ ಶಂಕರ, ಕುರುಬೂರು ಸಿದ್ದೇಶ್, ಹಾಡ್ಯ ರವಿ, ಪಟೇಲ್ ಶಿವಮೂರ್ತಿ, ಲಕ್ಷ್ಮಿಪುರ ವೆಂಕಟೇಶ, ಮಹದೇವಸ್ವಾಮಿ, ಸುನೀಲ್‌ ನೀಲಕಂಠಪ್ಪ, ಕಮಲಮ್ಮ, ಮಂಜುನಾಥ, ಮಹದೇವ, ಪ್ರದೀಪ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT