ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು| ಪಕ್ಷೇತರರಾಗಿ ಸ್ಪರ್ಧೆಗೆ ಬೆಂಬಲಿಗರ ಒತ್ತಡ: ರಾಮದಾಸ್

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತಿಳಿಸುವೆ: ರಾಮದಾಸ್
Last Updated 18 ಏಪ್ರಿಲ್ 2023, 7:01 IST
ಅಕ್ಷರ ಗಾತ್ರ

ಮೈಸೂರು: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದ್ದಕ್ಕೆ ತೀವ್ರ ಬೇಸರಗೊಂಡಿರುವ ಶಾಸಕ ಎಸ್.ಎ.ರಾಮದಾಸ್ ತಮ್ಮ ಮನೆಗೆ ಬಂದಿದ್ದ ಮುಖಂಡರನ್ನು ಭೇಟಿಯಾಗದೆ ವಾಪಸ್ ಕಳುಹಿಸಿದರು.

ಪಕ್ಷದ ಟಿಕೆಟ್ ಪಡೆದಿರುವ ಟಿ.ಎಸ್.‌ಶ್ರೀವತ್ಸ, ಸಂಸದ ಪ್ರತಾಪ ಸಿಂಹ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ ಹಾಗೂ ಮುಖಂಡ ಮೈ.ವಿ.ರವಿಶಂಕರ್‌ ಮೊದಲಾದವರನ್ನು ಭೇಟಿಯಾಗಲಿಲ್ಲ. ಇಪ್ಪತ್ತು ನಿಮಿಷದವರೆಗೂ ಕೊಠಡಿಯಲ್ಲಿ ಕಾದಿದ್ದ ಅವರು, ಬರಿಗೈಲಿ ವಾಪಸಾದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಾಮದಾಸ್, ‘30 ವರ್ಷಗಳಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಈ ಮನೆಯಲ್ಲಿ ಇರಬೇಕಾ ಅಥವಾ ಬೇಡವಾ ಎಂಬುದನ್ನು ಮಂಗಳವಾರ ತಿಳಿಸುತ್ತೇನೆ. ನಾನು ಪಕ್ಷದ ಯಾರನ್ನೂ ಭೇಟಿ ಮಾಡುವುದಿಲ್ಲ; ಮಾತುಕತೆ ನಡೆಸಲ್ಲ. ನನ್ನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಪಕ್ಷದಲ್ಲಿ ಮುಂದುವರೆಯಬೇಕೇ ಅಥವಾ ಮುಂದಿನ ನಿರ್ಧಾರ ಏನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇನೆ’ ಎಂದು ಭಾವುಕರಾಗಿ ನುಡಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ‘30 ವರ್ಷಗಳಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಹಿರಿಯ ನಾಯಕರವರು. ಕ್ಷೇತ್ರದಲ್ಲಿ ಹಲವಾರು ಯೋಜನೆ, ಕನಸುಗಳನ್ನು ಕಂಡಿದ್ದರು. ಬೇರೆಯವರಿಗೆ ಟಿಕೆಟ್ ದೊರೆತಿದ್ದಕ್ಕೆ ಸಹಜವಾಗಿಯೇ ನೋವುಂಟಾಗಿದೆ’ ಎಂದರು.

‘ನಿಮ್ಮನ್ನು ಮಂಗಳವಾರ ಭೇಟಿ ಮಾಡುತ್ತೇನೆ. ಪಕ್ಷದ ಜೊತೆ ಇರುತ್ತೇನೆ ಎಂದು ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ. ಪಕ್ಷವನ್ನು ತಾಯಿ ಎಂದು ಭಾವಿಸಿದ್ದಾರೆ. ತಾಯಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಸಹೋದರ ಶ್ರೀವತ್ಸ ಗೆಲುವಿಗಾಗಿ ಅವರು ಮುಂದೆ ನಿಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.

ಟಿ.ಎಸ್.ಶ್ರೀವತ್ಸ ಮಾತನಾಡಿ, ‘ಟಿಕೆಟ್ ಸಿಗುವಲ್ಲಿ ಯಡಿಯೂರಪ್ಪ ಅವರ ಪಾತ್ರವೂ ಇದೆ. ಪಕ್ಷದ ಹೈಕಮಾಂಡ್ ಇನ್ನೊಂದು ಹೆಸರು ಸೂಚಿಸುವಂತೆ ಕೇಳಿದಾಗ ರಾಮದಾಸ್ ಅವರು ನನ್ನ ಹೆಸರು ಹೇಳಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಖುಷಿ ತಂದಿದೆ. ಇದಕ್ಕಾಗಿ ಅವರಿಗೆ ಧನ್ಯವಾದ ಸಲ್ಲಿಸಲು ಬಂದಿದ್ದೆ. ಅವರು ನನ್ನೊಂದಿಗೆ ಬೆಂಬಲವಾಗಿ ನಿಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭಿಮಾನಿಗಳ ಆಕ್ರೋಶ: ರಾಮದಾಸ್ ಮನೆ ಮುಂದೆ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ‘ಅವರು ಪಕ್ಷಕ್ಕಾಗಿ ದುಡಿದಿದ್ದರೂ ಟಿಕೆಟ್‌ ಸಿಗಲಿಲ್ಲವೆಂದರೆ, ಬಿಜೆಪಿ ಕಾರ್ಯಸೂಚಿ, ಆರ್‌ಎಸ್ಎಸ್‌ ಮಾನದಂಡ ಎಲ್ಲಿ ಹೋಯಿತು?’ ಎಂದು ಕೂಗುತ್ತಾ ಆಕ್ರೋಶ ಹೊರ ಹಾಕಿದರು.

ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ರಾಮದಾಸ್‌ ಮನೆಯಲ್ಲಿಯೇ ಸಭೆ ನಡೆಸಿದರು. ‘ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಗೆದ್ದು ಬರುತ್ತಾರೆ. ಸ್ಪರ್ಧಿಸುವಂತೆ ಒತ್ತಾಯ ಹೇರೋಣ. ಗೆಲ್ಲುವುದರಲ್ಲಿ ಸಂಶಯವೇ ಬೇಡ’ ಎಂದು ಬೆಂಬಲಿಗರು ಅಭಿಪ್ರಾಯ ವ್ಯಕ್ತಪಡಿಸಿದರು.

ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್‌.ವಿ.ರಾಜೀವ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ಶ್ರೀವತ್ಸಗೆ ಟಿಕೆಟ್: ಸಂಭ್ರಮ

ಶ್ರೀವತ್ಸಗೆ ಟಿಕೆಟ್ ಘೋಷಣೆಯಾಗಿದ್ದಕ್ಕೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮ ಆಚರಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, ‘ಪಕ್ಷವು ಸಾಮಾನ್ಯ ಕಾರ್ಯಕರ್ತನಿಗೆ ಮಣೆ ಹಾಕಿದೆ. ನಮಗೆ ಕಾರ್ಯಕರ್ತರ ಬಹುದೊಡ್ಡ ಪಡೆಯೇ ಇದೆ’ ಎಂದರು.

ಶ್ರೀವತ್ಸ ಮಾತನಾಡಿ, ‘ನನ್ನನ್ನು ಗುರುತಿಸಿ ಕೃಷ್ಣರಾಜ ಕ್ಷೇತ್ರದಲ್ಲಿ ಟಿಕೆಟ್ ನೀಡಿರುವುದು ಖುಷಿ ತಂದಿದೆ. ಕೃಷ್ಣರಾಜ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಮನೋಭಾವ ನಮ್ಮ ಕಾರ್ಯಕರ್ತರಲ್ಲಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಶ್ರಮಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT