ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಕ್ಕಟೆಯಿಂದ ಕೃಷಿ ಕಾರ್ಮಿಕರ ಕೊರತೆ: ಬಸವರಾಜ ಹೊರಟ್ಟಿ

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ
Published 9 ಫೆಬ್ರುವರಿ 2024, 20:59 IST
Last Updated 9 ಫೆಬ್ರುವರಿ 2024, 20:59 IST
ಅಕ್ಷರ ಗಾತ್ರ

ನಂಜನಗೂಡು: ‘ಸರ್ಕಾರಗಳು ಪುಕ್ಕಟೆ ಕೊಡುವುದರಿಂದಾಗಿ ಕೃಷಿ ಕೆಲಸಕ್ಕೆ ಕಾರ್ಮಿಕರು ಸಿಗದಂತಾಗಿದೆ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ತಾಲ್ಲೂಕಿನ ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ನಡೆದ ಕೃಷಿ ವಿಚಾರಸಂಕಿರಣ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪುಕ್ಕಟೆಗೆ ಬಳಸುವ ಹಣವನ್ನು ರೈತರಿಗೆ ಸಹಾಯಧನವಾಗಿ ನೀಡಿದರೆ ಕೃಷಿ ಕ್ಷೇತ್ರ ಉಳಿಯುತ್ತದೆ’ ಎಂದು ಸಲಹೆ ನೀಡಿದರು.

‘ಕೃಷಿ ರಂಗ ನಶಿಸಿದರೆ ನಮಗೆ ಅನ್ನ ಸಿಗುವುದು ಕಷ್ಟವಾಗುತ್ತದೆ. ಕೃಷಿ ಜಮೀನುಗಳು ಬಡಾವಣೆಗಳಾಗುತ್ತಿವೆ. ರೈತರ ಆತ್ಮಹತ್ಯೆ ತಡೆಗೆ ಯಾವ ಸರ್ಕಾರಗಳೂ ಪ್ರಯತ್ನಿಸಿಲ್ಲ. ಕೃಷಿಕರನ್ನು ಬದುಕಿಸಲು ಸರ್ಕಾರಗಳು ಏನು ಮಾಡಿವೆ? ಅವರಿಗೆ ತೊಂದರೆ ಕೊಡುತ್ತಿವೆಯಷ್ಟೆ’ ಎಂದರು.

‘ರೈತರು ಮಕ್ಕಳಿಗೆ ವಿದ್ಯೆಯ ಜೊತೆಗೆ ಬೇಸಾಯವನ್ನು ಕಲಿಸಿದರೆ ಮಾತ್ರ ಕೃಷಿ ಕ್ಷೇತ್ರ ಉಳಿಯುತ್ತದೆ. ನಾನೂ ಬೇಸಾಯ ಮಾಡುತ್ತೇನೆ. ಮೂರು ವರ್ಷಗಳಿಂದ ಲಾಭ ಬಂದಿಲ್ಲ; ಬಂಡವಾಳ ಸಿಗುತ್ತಿದೆಯಷ್ಟೆ’ ಎಂದು ತಿಳಿಸಿದರು.

ಸಂಸದ ಡಿ.ವಿ.ಸದಾನಂದ ಗೌಡ ಮಾತನಾಡಿ, ‘ಸುತ್ತೂರು ಮಠವು ಯುವಕರಲ್ಲಿ ಆತ್ಮವಿಶ್ವಾಸ ಹಾಗೂ ನಮ್ಮ ಕಲೆ–ಪರಂಪರೆಗಳ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಮಾತನಾಡಿ, ‘ಯಾವುದೇ ದೇಶದ ಶಕ್ತಿ ವೃದ್ಧಿಯು ಕೃಷಿಯ ಅಭಿವೃದ್ಧಿಯಿಂದ ಮಾತ್ರ ಸಾಧ್ಯ’ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ ಖಾದರ್‌, ‘ದೇಶದ ಸಂಸ್ಕೃತಿಯ ಸಾರವನ್ನು ಸುತ್ತೂರಿನಲ್ಲಿ ಕಾಣಬಹುದು. ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ ಆಧರಿಸಿ ಶ್ರೀಮಠ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಈ ಜಾತ್ರಾ ಮಹೋತ್ಸವದಿಂದ ಸಂಸ್ಕೃತಿ, ಸೋದರತ್ವ ಬೆಳೆಯಲು ಅವಕಾಶವಾಗಿದೆ’ ಎಂದು ಹೇಳಿದರು.

ಚಲನಚಿತ್ರ ನಟ ಡಾಲಿ ಧನಂಜಯ್‌, ‘ಬೆಳೆಸಿದ್ದಲ್ಲ, ಬೆಳೆದಿದ್ದೇವೆ. ನುಗ್ಗಿದ್ದು ನಾವು, ಹೊಡೆದಿದ್ದು ನಾವು. ಬಡವರ ಮಕ್ಕಳು ಬೆಳೆಯಬೇಕು’ ಎಂಬ ಡೈಲಾಗ್ ಹೇಳಿ ನೆರೆದಿದ್ದವರನ್ನು ರಂಜಿಸಿದರು.

‘ರೈತರು ಸಂಕಷ್ಟಗಳ ನಡುವೆಯೂ ಬೆಳೆ ಬೆಳೆಯುವುದನ್ನು ಬಿಟ್ಟಿಲ್ಲ. ಯಾವುದೇ ಕ್ಷೇತ್ರವಿರಲಿ ಶ್ರದ್ಧೆಯಿಂದ ದುಡಿದರೆ ಮಾತ್ರ ಸಾಧನೆ ಸಾಧ್ಯವಾಗುತ್ತದೆ. ರೈತರಿಗೆ ಹೆಣ್ಣು ಕೊಡುವುದಿಲ್ಲ ಎನ್ನುವ ಮಾತಿದೆ. ಆದರೆ, ಯುವಕರು ಕೃಷಿಯಲ್ಲಿ ಸಾಧನೆ ತೋರಿ ಹೆಣ್ಣನ್ನು ಒಲಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ‘ಶ್ರೀಮಠ ಅನ್ನ, ಅಕ್ಷರ ದಾಸೋಹದಲ್ಲಿ ಮುಂಚೂಣಿಯಲ್ಲಿದೆ. ಮೈಸೂರಿನಲ್ಲಿ ದೊಡ್ಡ ಆಸ್ಪತ್ರೆ ಸ್ಥಾಪಿಸಿ ಸುತ್ತಮುತ್ತಲ ಜಿಲ್ಲೆಗಳ ಜನರ ಆರೋಗ್ಯ ಕಾಪಾಡುತ್ತಿದೆ. ಜಾತ್ರೆಯಲ್ಲಿ ಕೃಷಿಗೆ ಒತ್ತು ಕೊಡುವ ಕಾರ್ಯಕ್ರಮಗಳನ್ನು ರೂಪಿಸಿ, ರೈತರನ್ನು ಸಮಗ್ರ ಕೃಷಿಯತ್ತ ಆಕರ್ಷಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ಬಾಲಕನಾಗಿದ್ದಾಗ ನಗರ್ಲೆ ಗ್ರಾಮದಿಂದ ಸುತ್ತೂರು ಜಾತ್ರೆಗೆ ಬರುತ್ತಿದ್ದ ದಿನಗಳನ್ನು ಚಲನಚಿತ್ರ ನಟ ನಾಗಭೂಷಣ್‌ ನೆನೆದರು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಕೆ.ಹರೀಶ್‌ ಗೌಡ, ಗಣಿಗ ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ವಿಧಾನಪರಿಷತ್‌ ಸದಸ್ಯರಾದ ಎಚ್‌.ವಿಶ್ವನಾಥ್, ಮರಿತಿಬ್ಬೇಗೌಡ ಉಪಸ್ಥಿತರಿದ್ದರು.

ಚಿತ್ರರಂಗದಲ್ಲಿ ಒಂದು ಯುನಿಟ್‌ ಸಂಭಾಳಿಸಲು ನಾವು ಪರದಾಡುತ್ತೇವೆ. ಹೀಗಿರುವಾ‌ಗ ಶ್ರೀಮಠ ಬಹಳಷ್ಟು ಶಾಲಾ ಕಾಲೇಜು ತೆರೆದು ಸಾವಿರಾರು ಜನರ ಬದುಕಿಗೆ ಬೆಳಕಾಗಿದೆ

ಧನಂಜಯ ಚಲನಚಿತ್ರ ನಟ

ಅಭಿಮಾನಿಗಳ ಕ್ರೇಜ್‌ ಮುಜುಗರ!

ವೀರಪ್ಪ ಮೊಯಿಲಿ ಮಾತನಾಡುವಾಗ ನಟ ಧನಂಜಯ್‌ ಅಭಿಮಾನಿಗಳು ‘ಡಾಲಿ ಡಾಲಿ ಡಾಲಿ’ ಎಂದು ಕೂಗಿ ಗದ್ದಲ ಎಬ್ಬಿಸಿದರು. ಇದರಿಂದ ಮುಜುಗರ ಅನುಭವಿಸಿದ ಮೊಯಿಲಿ ಭಾಷಣ ಮೊಟಕುಗೊಳಿಸಿದರು. ಭಾಷಣ ಮುಗಿಸಿ ಹೊರಡುತ್ತಿದ್ದ ಧನಂಜಯ್‌ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿ ಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT