ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲದಿಂದ ಸರ್ವತೋಮುಖ ವಿಕಾಸ: ಸುತ್ತೂರು ಶ್ರೀ

Published 22 ಫೆಬ್ರುವರಿ 2024, 12:54 IST
Last Updated 22 ಫೆಬ್ರುವರಿ 2024, 12:54 IST
ಅಕ್ಷರ ಗಾತ್ರ

ಮೈಸೂರು: ‘ಯಾರೊಂದಿಗೂ ಹಂಚಿಕೊಳ್ಳಲಾಗದ್ದನ್ನು ಹೇಳಿಕೊಳ್ಳಬಹುದಾದ ಸ್ಥಾನಗಳೇ ದೇವಸ್ಥಾನಗಳು. ಅವು ಮಾನವನ ಸರ್ವತೋಮುಖ ‌ವಿಕಾಸ ಮತ್ತು ಮೋಕ್ಷ ಸಾಧನೆಗೆ ಅವಕಾಶ ಕಲ್ಪಿಸುವ ಕೇಂದ್ರಗಳೂ ಹೌದು’ ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಹಂಚ್ಯಾ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ದೇವಮ್ಮನವರ ಹಾಗೂ ಆಂಜನೇಯಸ್ವಾಮಿ ದೇವಾಲಯಗಳ‌ ಲೋಕಾರ್ಪಣೆ,‌ ಬ್ರಹ್ಮಕಲಶೋತ್ಸವ ಮತ್ತು ಗ್ರಾಮದ ಅಂಕ ಪ್ರತಿಷ್ಠಾಪನೆ ಕಾರ್ಯಕ್ರಮದ ಬಳಿಕ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದೇವಸ್ಥಾನಗಳು ಮನುಷ್ಯನ ಅಂತರಂಗದಲ್ಲಿರುವ ಧಾರ್ಮಿಕ ಶಕ್ತಿಯ ವಿಕಾಸಕ್ಕೆ ಅನುವು ಮಾಡಿಕೊಡುತ್ತವೆ. ದೇಗುಲಗಳಿಗೆ ಹೋದಾಗ ಮನುಷ್ಯನ ಭಾವನೆಗಳು ಬದಲಾಗುತ್ತವೆ. ಸದ್ವಿಚಾರ ಹಾಗೂ ಉತ್ತಮ ಚಿಂತನೆಗಳು ಅಲ್ಲಿ ಬರುತ್ತವೆ’ ಎಂದರು.

ಗ್ರಾಮೀಣ ಸೊಗಡು ಕಳೆದುಕೊಂಡಿಲ್ಲ:

‘ಹಂಚ್ಯಾ ಗ್ರಾಮವು ನಗರಕ್ಕೆ ‌ಹೊಂದಿಕೊಂಡಂತೆಯೇ ಇದ್ದರೂ ಗ್ರಾಮೀಣ ಹಾಗೂ ಜಾನಪದ ಸಂಸ್ಕೃತಿ ಇಂದಿಗೂ‌ ಇದೆ. ಸಾಮಾನ್ಯವಾಗಿ ನಗರ ಬೆಳೆದಂತೆಲ್ಲಾ ಸಂಸ್ಕೃತಿ ಮರೆತು ನಾಗರಿಕತೆಯತ್ತ ಹಾಗೂ ಯೋಗವನ್ನು ಮರೆತು ಭೋಗದ ಕಡೆಗೆ ಹೋಗುವುದು ಕಂಡುಬರುತ್ತದೆ.‌ ಆದರೆ ಹಂಚ್ಯಾ ಇದ್ಯಾವುದನ್ನೂ ಕಳೆದುಕೊಂಡಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನದಿ, ಅರಣ್ಯ ಮೊದಲಾದ ಪ್ರಕೃತಿಯ ಮಡಿಲಲ್ಲೆಲ್ಲಾ ದೇವಾಲಯಗಳು ಇರುವುದನ್ನು ಕಾಣಬಹುದು. ಅವು ಮನುಷ್ಯನಿಗೆ ವಿಶೇಷ ಶಕ್ತಿ ತುಂಬುವ ಮೂಲಕ ಸಮಾಜದ ಏಳಿಗೆಗೆ ಕಾರಣವಾಗುತ್ತವೆ’ ಎಂದರು.

‘ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದಲೂ ದೇವಾಲಯದ ಸಂಸ್ಕೃತಿ ಬೆಳೆದುಬಂದಿದೆ. ಹೀಗಾಗಿ, ಎಲ್ಲೆಡೆಯೂ ದೇಗುಲಗಳು ನಿರ್ಮಾಣ ಆಗಿರುವುದನ್ನು ಕಾಣಬಹುದು. ನಮ್ಮ ಆಂಜನೇಯಸ್ವಾಮಿ ಜಗತ್ತಿನ ಎಲ್ಲ ಕಡೆಯೂ ಪೂಜೆಗೆ ಒಳಗಾಗುತ್ತಿದ್ದಾನೆ’ ಎಂದು ಹೇಳಿದರು.‌

ಅಧ್ಯಕ್ಷತೆ ವಹಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ‘ಗ್ರಾಮದೊಂದಿಗೆ ನನಗೆ 40 ವರ್ಷಗಳಿಂದ ಬಾಂಧವ್ಯವಿದೆ. ಮುಖಂಡ ನಂದೀಶ್ ಹಂಚ್ಯಾ ಶಾಸಕನಿಗಿಂತಲೂ ಹೆಚ್ಚಿನ ಅಭಿವೃದ್ಧಿ ಕೆಲಸವನ್ನು ಇಲ್ಲಿ ಮಾಡಿದ್ದಾರೆ. ರಮ್ಮನಹಳ್ಳಿ, ಸಾತಗಳ್ಳಿ ಅಭಿವೃದ್ಧಿಗೂ ಮುಂದಾಗಲಿ’ ಎಂದು ಆಶಿಸಿದರು.

‘ನಾನು ಸಚಿವನಾಗಿದ್ದ ವೇಳೆ ಹಳೆಉಂಡುವಾಡಿ ಯೋಜನೆ ರೂಪಿಸಿದ್ದೆವು. ಮುಂದಿನ ಒಂದು ವರ್ಷದಲ್ಲಿ ಅದು ಪೂರ್ಣಗೊಂಡು ಕ್ಷೇತ್ರದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ತಿಳಿಸಿದರು.

ವಿಜಯೇಂದ್ರ ಕಾರಣದಿಂದ:

ಗ್ರಾಮದ ಮುಖಂಡ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚ್ಯಾ ಮಾತನಾಡಿ, ‘ಬಿಜೆಪಿ ಸರ್ಕಾರವಿದ್ದಾಗ ಸುತ್ತೂರು ಶ್ರೀಗಳ ಪ್ರೇರಣೆ, ಬಿ.ವೈ.ವಿಜಯೇಂದ್ರ ಅವರ ನೆರವು ಹಾಗೂ ಜಿ.ಟಿ. ದೇವೇಗೌಡರ ಸಹಕಾರದಿಂದ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಸಾಧ್ಯವಾಯಿತು. ನಾನು ಕೇಳಿದ್ದೆಲ್ಲವನ್ನೂ ವಿಜಯೇಂದ್ರ ಮಾಡಿಸಿಕೊಟ್ಟರು. ಈಗ, ನಾನು ಹಣ ಹಾಕಿ ದೇವಾಲಯಗಳನ್ನು ಕಟ್ಟಿಸಿರಬಹುದು. ಅದಕ್ಕೆ ಗ್ರಾಮಸ್ಥರ ಸಹಕಾರ ದೊಡ್ಡದು. ಹುಟ್ಟೂರಿನ ಋಣ ತೀರಿಸುವ ಕೆಲಸ ಮಾಡಿದ್ದೇನೆ’ ಎಂದು ಭಾವುಕವಾಗಿ ನುಡಿದರು.

ಧಾರ್ಮಿಕ ಕಾರ್ಯಕ್ರಮ ಸಂಪನ್ನ:

ದೇವಾಲಯಗಳ ಲೋಕಾರ್ಪಣೆ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಸಂಭ್ರಮ ಮನೆ ಮಾಡಿತ್ತು. ಸಾತಗಳ್ಳಿ ಹಾಗೂ ರಮ್ಮನಹಳ್ಳಿ ಮೊದಲಾದ ಕಡೆಗಳಿಂದಲೂ ಜನರು ಬಂದಿದ್ದರು. ಮುಖಂಡರ ಕೌಟ್‌ಟ್‌ಗಳು ರಾರಾಜಿಸಿದವು.

ಗ್ರಾಮದಲ್ಲಿ 5 ದಿನಗಳಿಂದ ನಡೆದ ಧಾರ್ಮಿಕ ಕಾರ್ಯಗಳು ಗುರುವಾರ ಸಂಪನ್ನಗೊಂಡವು. ಬಿ.ವೈ.ವಿಜಯೇಂದ್ರ ದಂಪತಿ ಸಹಿತ ಸಂಕಲ್ಪ ಪೂಜೆ ನೆರವೇರಿಸಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೋಮ–ಹವನದಲ್ಲಿ ಪಾಲ್ಗೊಂಡಿದ್ದರು. ಕಳಸ ಪ್ರತಿಷ್ಠಾಪನೆ, ಅಂಕ ಪೂಜೆ ಮೊದಲಾದ ಧಾರ್ಮಿಕ ಕಾರ್ಯ ನೆರವೇರಿಸಿದರು.

ಕಾವೇರಿ ಆಸ್ಪತ್ರೆಯ ಮುಖ್ಯಸ್ಥ ಡಾ.ಚಂದ್ರಶೇಖರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಆರ್. ಕೌಟಿಲ್ಯ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಡಾ.ಅನಿಲ್ ಥಾಮಸ್, ಬಿಜೆಪಿ ಮುಖಂಡರಾದ ಕೃಷ್ಣಪ್ಪ ಗೌಡ, ಪಣೀಶ್, ಹೇಮಂತ್‌ಕುಮಾರ್ ಗೌಡ, ನಿರಂಜನ್‌ಕುಮಾರ್‌, ಲಕ್ಷ್ಮೀದೇವಿ, ಹಂಚ್ಯಾ ಗ್ರಾಮದ ಮುಖಂಡರಾದ ಕೆ.ಎಸ್.ಸಣ್ಣಸ್ವಾಮಿ, ರಮೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT