ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾಡಿನಲ್ಲಿ ಮರಳು ಆವರಿಸಲು ವಾಯುಗುಣ ಪ್ರಕೋಪ ಕಾರಣ

ಇತಿಹಾಸ ತಜ್ಞ ಎಂ.ಎಸ್. ಕೃಷ್ಣಮೂರ್ತಿ ಅಭಿಮತ
Published 30 ಸೆಪ್ಟೆಂಬರ್ 2023, 13:31 IST
Last Updated 30 ಸೆಪ್ಟೆಂಬರ್ 2023, 13:31 IST
ಅಕ್ಷರ ಗಾತ್ರ

ಮೈಸೂರು: ‘17ನೇ ಶತಮಾನದ ಮಧ್ಯಭಾಗದಲ್ಲಿ ಸಂಭವಿಸಿದ್ದ ಒಂದು ವಿಚಿತ್ರವಾದ ವಾಯುಗುಣ ಪ್ರಕೋಪಕ್ಕೆ ಸಿಲುಕಿ, ತಲಕಾಡಿನ ದಕ್ಷಿಣ ಭಾಗ ಮರಳಿನಿಂದ ಮುಚ್ಚಿ ಹೋಯಿತು ಎಂಬ ಅಂಶ ಉತ್ಖನನದಿಂದ ಖಚಿತವಾಗಿದೆ’ ಎಂದು ಇತಿಹಾಸ ತಜ್ಞ ಎಂ.ಎಸ್. ಕೃಷ್ಣಮೂರ್ತಿ ಹೇಳಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ತಲಕಾಡು ಉತ್ಖನನದ ಮುಖ್ಯ ಅಂಶಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.

‘ತಲಕಾಡು ಮರಳಿನಿಂದ ಮುಚ್ಚಿ ಹೋಗಲು ‌ಅಲಮೇಲಮ್ಮನ ಶಾಪವೇ ಕಾರಣವೆಂದು ನಂಬಲಾಗಿದೆ. ಆದರೆ, ನಾವು 1992ರಲ್ಲಿ 6 ತಿಂಗಳ ಕಾಲ ನಡೆಸಿದ್ದ ಉತ್ಖನನ ನಿಜವಾದ ಕಾರಣವನ್ನು ಪತ್ತೆ ಮಾಡಿದೆ. ಉತ್ಖನನದ ವಿವರಗಳನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. ಬೆಂಗಳೂರಿನ ಭೂಗರ್ಭಶಾಸ್ತ್ರಜ್ಞರು 15 ಅಡಿ ಆಳದವರೆಗೆ ಇಳಿದು ಉತ್ಖನನದ ಸ್ಥಳ ಮತ್ತು ಸ್ತರವನ್ನು ಪರಿಶೀಲಿಸಿ ಉತ್ಖನನದ ಅಂಶಗಳನ್ನು ಒಪ್ಪಿಕೊಂಡಿದ್ದಾರೆ’ ಎಂದರು.

‘ಮೈಸೂರಿನ ದಕ್ಷಿಣ ಭಾಗದಲ್ಲಿ ಕಾವೇರಿ ಉತ್ತರ ತಟದಲ್ಲಿ ಮರಳು ಗುಡ್ಡೆಗಳು ಹೇಗೆ ಬಂದ್ದವು ಎಂಬ ಜಿಜ್ಞಾಸೆಗೆ ಕಾರಣ ಹುಡುಕಲಾಗಿದೆ. ಗಾಳಿ ಮರಳಿನ ಪ್ರವಾಹ ಮರಳು ತಂದು ಸುರಿಯಲು ಆರಂಭಿಸಿದ ನಂತರ ಗಾಳಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. 2.5 ಮೀಟರ್ ಆಧಾರದ (ಬೇಸ್‌) ಮೇಲೆ ಸುಮಾರು 7 ಅಡಿ ಅಗಲ, 20 ಅಡಿ ಎತ್ತರದ ಗಾಳಿ ತಡೆಗೋಡೆ ಇದ್ದ ಬಗ್ಗೆ ಕುರುಹು ಸಿಕ್ಕಿದೆ’ ಎಂದು ತಿಳಿಸಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹೆರಿಟೇಜ್ ವಿಭಾಗದ ಉಪ ನಿರ್ದೇಶಕಿ ಮಂಜುಳಾ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಅಧ್ಯಕ್ಷ ಡಾ.ಶಲ್ವ ಪಿಳ್ಳೆ ಅಯ್ಯಂಗಾರ್, ಪುರಾತತ್ವ ಸಂರಕ್ಷಣಾ ಎಂಜಿನಿಯರ್‌ಗಳಾದ ತಾರಕೇಶ್‌, ಮಮತಾ, ಮಹಾರಾಣಿ ಕಾಲೇಜಿನ ಉಪನ್ಯಾಸಕ ದೇವೇಗೌಡ ಇದ್ದರು.

ಉತ್ಖನನ ಕಾರ್ಯಕ್ಕೆ ದೂರ ಸಂವೇದಿ ತಂತ್ರಜ್ಞಾನವನ್ನು ಬಳಸಲು ಇರುವ ಅವಕಾಶವನ್ನು ಬಳಸಿಕೊಳ್ಳಬೇಕು

–ಎಂ.ಎಸ್. ಕೃಷ್ಣಮೂರ್ತಿ ಇತಿಹಾಸ ತಜ್ಞ

‘ಗಂಗರ ಬಗ್ಗೆ ಅಪಪ್ರಚಾರ’

‘ತಲಕಾಡಿನ ಗಂಗರು ಬಹಳ ಮಡಿವಂತರಾಗಿದ್ದು ಬೇರೆ ಧರ್ಮಗಳಿಗೆ ಅವಕಾಶ ನೀಡಲಿಲ್ಲ. ಜೈನರನ್ನು ಹೊರಗಿಟ್ಟಿದ್ದರು ಎಂದು ಅಪಪ್ರಚಾರ ಮಾಡಲಾಗಿದೆ. ಆದರೆ ಜೈನ ಹಾಗೂ ಬೌದ್ಧ ಧರ್ಮ ಆಗ ಪ್ರಚಲಿತದಲ್ಲಿದ್ದವು ಎಂಬುದಕ್ಕೆ ಸಹ ಆಧಾರಗಳಿವೆ. ರೋಮನ್‌ ನಾಣ್ಯದ ಅಚ್ಚು ಆ ಸ್ಥಳದಲ್ಲಿ ಸಿಕ್ಕಿದೆ. ಕೆಲವರು ರೋಮನ್ ನಾಣ್ಯವನ್ನು ಕರಗಿಸಿ ನಕಲು ಮಾಡುತ್ತಿದ್ದರು ಎಂಬುದಕ್ಕೆ ಪುರಾವೆ ಇದೆ. ವಜ್ರ ಲಾಂಛನ ತ್ರಿಶೂಲ ಲಾಂಛನ ಸಹ ಸಿಕ್ಕಿವೆ. ಅಶೋಕ ಮಹಿಷಮಂಡಲಕ್ಕೆ ಬೌದ್ಧ ಧರ್ಮ ಪ್ರಚಾರಕರನ್ನು ಕಳುಹಿಸಿದ ಉಲ್ಲೇಖ ದೀಪವಂಶ ಮಹಾವಂಶ ಗ್ರಂಥದಲ್ಲಿದೆ’ ಎಂದು ಎಂ.ಎಸ್. ಕೃಷ್ಣಮೂರ್ತಿ ತಿಳಿಸಿದರು. ‘ತಲಕಾಡಿನಲ್ಲಿ ಜೈನ ಬಸದಿಯ ತಳಪಾಯ ಮತ್ತು ಜಿನ ಪಾರ್ಶ್ವನಾಥನ ವಿಗ್ರಹ ಸಿಕ್ಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT