ಹುಣಸೂರು: ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಹಲವು ಭಾಗದಲ್ಲಿ ದಾಳಿ ಇಟ್ಟಿದ್ದ ಕಾಡಾನೆ ಹಿಂಡನ್ನು ಮೈಸೂರು ತಾಲ್ಲೂಕಿನ ಹಂಪಾಪುರ ಮಾರ್ಗದ ಮೂಲಕ ಕಾವೇರಿ ಸಂರಕ್ಷಿತ ಅರಣ್ಯಕ್ಕೆ ಅಟ್ಟಲಾಗಿದೆ ಎಂದು ಮಂಡ್ಯ ಮತ್ತು ಮೈಸೂರು ಜಿಲ್ಲೆ ಎಲಿಫೆಂಟ್ ಟಾಸ್ಕ್‌ಫೋರ್ಸ್ ಹುಣಸೂರಿನ ಕೇಂದ್ರ ಕಚೇರಿಯ ಡಿಸಿಎಫ್ ಸೀಮಾ ತಿಳಿಸಿದ್ದಾರೆ.
‘ಕಳೆದ 10 ದಿನಗಳಿಂದ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ಭಾಗದಲ್ಲಿ 3 ಮರಿಯಾನೆ ಸೇರಿದಂತೆ 10 ಕಾಡಾನೆನಗಳಿದ್ದ ಹಿಂಡನ್ನು ಇಲಾಖೆ ಯಶಸ್ವಿಯಾಗಿ ಮೈಸೂರು ತಾಲ್ಲೂಕಿನ ಹಂಪಾಪುರ ಮತ್ತು ಬನ್ನೂರು ಮಾರ್ಗವಾಗಿ ಅರಣ್ಯಕ್ಕೆ ಅಟ್ಟಲಾಗಿದೆ. ದಾಳಿಯಲ್ಲಿ ಕಬ್ಬು ಮತ್ತು ಭತ್ತದ ಬೆಳೆ ನಷ್ಟವಾಗಿದ್ದು, ನಷ್ಟವನ್ನು ಅಂದಾಜಿಸಬೇಕಾಗಿದೆ’ ಎಂದರು.
ಇಲಾಖೆ ಟನ್ ಕಬ್ಬಿಗೆ ₹ 3200 ಮತ್ತು ಕ್ವಿಂಟಲ್ ಭತ್ತಕ್ಕೆ ₹ 2500 ನೀಡಲಿದ್ದು ರೈತರು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಎಂದರು.
ದಾಳಿ ಸಮಯದಲ್ಲಿ ಡ್ರೋನ್ ಬಳಸಿ ಆನೆ ಓಡಿಸಲು ಬೇಕಾದ ಯೋಜನೆ ರೂಪಿಸಿ ಜಿಲ್ಲಾ ಎಲಿಫೆಂಟ್ ಟಾಸ್ಕ್ ಫೋರ್ಸ್ ವಿಭಾಗದ ಆರ್‌ಎಫ್‌ಒ ಅನಿತ್ ರಾಜ್ ಸೇರಿದಂತೆ 4 ಡಿ.ಆರ್.ಎಫ್.ಒ, 32 ಸಿಬ್ಬಂದಿ ಭಾಗವಹಿಸಿದ್ದರು. ಸಾರ್ವಜನಿಕರು ಆನೆ ದಾಳಿ ಕಂಡು ಬಂದಲ್ಲಿ ಕಂಟ್ರೋಲ್ ರೂಂ 9481852424 ಮ್ತು ಸಹಾಯವಾಣಿ 1926 ಕರೆ ಮಾಡಲು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.