ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಲ್ಪಕಲೆಯಿಂದ ನಾಡಿನ ಚರಿತ್ರೆ ಜೀವಂತ: ಸಚಿವ ಮಹದೇವಪ್ಪ

ರಾಜ್ಯಮಟ್ಟದ ಶಿಲ್ಪಕಲಾ ಶಿಬಿರ ಉದ್ಘಾಟಿಸಿದ ಸಚಿವ ಮಹದೇವಪ್ಪ
Published : 24 ಸೆಪ್ಟೆಂಬರ್ 2024, 4:12 IST
Last Updated : 24 ಸೆಪ್ಟೆಂಬರ್ 2024, 4:12 IST
ಫಾಲೋ ಮಾಡಿ
Comments

ಮೈಸೂರು: ‘ಶಿಲ್ಪಕಲೆ ನಾಡಿನ ಚರಿತ್ರೆಯನ್ನು ಜೀವಂತವಾಗಿರಿಸುತ್ತದೆ. ಹೀಗಾಗಿ ಕಲಾವಿದರು ಸತ್ಯವಾದ ವಿಚಾರಗಳನ್ನು ತಮ್ಮ ಕಲೆಯ ಮೂಲಕ ಜನರಿಗೆ ತಲುಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಚಾಮರಾಜೇಂದ್ರ ಸರ್ಕರಿ ದೃಶ್ಯ ಕಲಾ ಕಾಲೇಜು (ಕಾವಾ) ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಕಲೆ ಉಪ ಸಮಿತಿ ಹಾಗೂ ಶಿಲ್ಪಕಲಾ ಶಿಬಿರ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಶಿಲ್ಪಕಲಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿನ ಇತಿಹಾಸವನ್ನು ಕಲೆಗಳ ಮೂಲಕ ಚಿತ್ರಿಸಿ ಜನರಿಗೆ ತಿಳಿಸುವ ಸಂಪ್ರದಾಯ ನಡೆದು ಬಂದಿದೆ. ಪ್ರತಿಯೊಂದು ಶಿಲ್ಪಕಲೆಯು ಒಂದೊಂದು ಕಥೆ ಹೇಳುತ್ತವೆ. ಇತಿಹಾಸವನ್ನು ಕರಾರುವಕ್ಕಾಗಿ ಜನರಿಗೆ ತಿಳಿಸುವ ಕಲೆಯನ್ನು ಮತ್ತಷ್ಟು ಬೆಳೆಸುವ ಅವಶ್ಯವಿದೆ. ಸಿಂಧೂ ನಾಗರಿಕತೆಗಿಂತ ಹಿಂದಿನ ಮನುಷ್ಯನ ಜೀವನ ಕ್ರಮ, ಮೌಲ್ಯಗಳು, ಬದುಕಿನ ವಿಧಾನಗಳನ್ನು ಕಲಾವಿದರು ಗ್ರಹಿಸಬೇಕು. ಅಲ್ಲಿ ದೇವರು- ಧರ್ಮದ ಪರಿಕಲ್ಪನೆ ಇರಲಿಲ್ಲ ಮತ್ತು ಪ್ರಕೃತಿ ಪೂಜಿಸುತ್ತಿದ್ದರು’ ಎಂದರು.

‘ಸುಳ್ಳಿನ ಚರಿತ್ರೆಯನ್ನು ಜನರಿಗೆ ತಿಳಿಸಿದರೆ ಸಮಾಜ ಹಾದಿ ತಪ್ಪುತ್ತದೆ. ಕಲಾವಿದರು ಇತಿಹಾಸವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆಸಕ್ತಿ ವಹಿಸಿ ಅಧ್ಯಯನ ನಡೆಸಬೇಕು. ನೈಜ ಇತಿಹಾಸ ಅರಿತು ದೇಶದ ನಾಗರಿಕತೆ, ಜನ ಜೀವನ, ಸಂಸ್ಕೃತಿ, ಪರಂಪರೆ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಪ್ರಸ್ತುತ ಧರ್ಮವನ್ನು ಸಂಸ್ಕೃತಿ ಎಂದು ಬಿಂಬಿಸಲಾಗುತ್ತಿದೆ. ಆದರೆ ಸಂಸ್ಕೃತಿಯ ತಳಹದಿಯ ಮೇಲೆ ಧರ್ಮವಿದೆ’ ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ‘ಲಲಿತ ಕಲೆ ಮತ್ತು ಕರಕುಶಲಕ್ಕೆ ಮೈಸೂರಿನಲ್ಲಿ ವಿಶೇಷ ಸ್ಥಾನಮಾನವಿದೆ. ಹೀಗಾಗಿ ರಾಜ್ಯದಲ್ಲಿ ಕರಕುಶಲಕ್ಕಾಗಿ ವಿಶ್ವವಿದ್ಯಾಲಯ ನಿರ್ಮಿಸಬೇಕು. ಕಾವಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಬೇಕು. ಈ ಬಗ್ಗೆ ಸಚಿವರು, ಸರ್ಕಾರದ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

‘ದಸರಾ ಕಾರ್ಯಕ್ರಮದ ಅತಿಥಿಗಳಿಗೆ ಆನೆಗಳ, ಜಂಬೂ ಸವಾರಿಯ ಕುರಿತ ಉಡುಗೊರೆ ನೀಡಲಾಗುತ್ತಿದೆ. ಇದರ ಬದಲಾಗಿ ಕಾವಾ ಕಾಲೇಜಿನ ಕಲಾವಿದರ ಆಲೋಚನೆಯಿಂದ ನಿರ್ಮಾಣವಾದ ನೆನಪಿನ ಕಾಣಿಕೆಗಳನ್ನು ಅತಿಥಿಗಳಿಗೆ ನೀಡಲು ಕ್ರಮವಹಿಸಬೇಕು’ ಎಂದು ಸಲಹೆ ನೀಡಿದರು.

ಕಾವಾ ಕಾಲೇಜಿನ ಡೀನ್ ಎ.ದೇವರಾಜು, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಸಿ.ರಮೇಶ್, ಶಿಬಿರದ ಕಾರ್ಯಾಧ್ಯಕ್ಷ ಬಿಂದುರಾಯ್ ಬಿರಾದಾರ್ ಇದ್ದರು.

ಹತ್ತು ಶಿಲ್ಪ ಕಲಾವಿದರು ಭಾಗಿ

ಶಿಲ್ಪಕಲಾ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 10 ಕಲಾವಿದರು ಭಾಗವಹಿಸಿದ್ದಾರೆ. ಬಾಗಲಕೋಟೆಯ ದಾನಯ್ಯ ಎಸ್.ಚೌಕಿ ಮಠ ಉಡುಪಿಯ ನರೇಶ್‌ ನಾಯ್ಕ ಬೆಂಗಳೂರಿನ ಪಿ.ಜ್ಯೋತಿ ಭಾರತಿ ವಿಜಯನಗರ ಜಿಲ್ಲೆಯ ಪ್ರಮೋದ್‌ ಆಚಾರ್‌ ಯಾದಗಿರಿಯ ಪ್ರಶಾಂತ್‌ ಕುಮಾರ್‌ ವಿಜಯಪುರದ ಎಂ.ಮಹಾಂತೇಶ್‌ ಲದಿನ್ನಿ ಚಿಕ್ಕಮಗಳೂರಿನ ಬಿ.ಸಿ.ಸುಕೇಶ್‌ ಬೆಂಗಳೂರು ಗ್ರಾಮಾಂತರದ ಗಿರೀಶ್‌ ಮೈಸೂರಿನ ಎಲ್‌.ಬಸವರಾಜ್‌ ತಿ.ನರಸೀಪುರದ ಆರ್‌.ಸಂಗೀತಾ ಭಾಗವಹಿಸಿದ್ದು ಸ್ವಾತಂತ್ರ್ಯ ಚಳುವಳಿ ಹೋರಾಟ ಸಂವಿಧಾನ ಮಹತ್ವ ವಿಷಯದ ಕುರಿತು ಕಲಾಕೃತಿ ನಿರ್ಮಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT