ಭಾನುವಾರ, ಡಿಸೆಂಬರ್ 4, 2022
19 °C
ವಸ್ತು ಪ್ರದರ್ಶನ ಪ್ರಾಧಿಕಾರ ಪ್ರವಾಸಿಗರಿಗೆ ಮುಕ್ತ; ಸ್ಯಾಂಡ್‌ ಆರ್ಟ್‌ನಲ್ಲಿ ‘ಪುನೀತ್‌’ ಸಿನಿಮಾ ಪಯಣ

ಮಳಿಗೆಗಳು ಖಾಲಿ; ಪ್ರವಾಸಿಗರಿಗೆ ನಿರಾಸೆ

ಬಾಲಚಂದ್ರ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ತರಾತುರಿಯಲ್ಲಿ ಉದ್ಘಾಟನೆ ಮಾಡಿದ ಸಚಿವರು, ವೇದಿಕೆ ತುಂಬಾ ರಾರಾಜಿಸಿದ ಬಿಜೆಪಿ ಕಾರ್ಯಕರ್ತರು.. ಮೊದಲ ದಿನವೇ ತೆರೆಯದ ಬಹುತೇಕ ಮಳಿಗೆಗಳು...!

ಸೋಮವಾರ ಸಂಜೆ ದಸರಾ ವಸ್ತುಪ್ರದರ್ಶನ ಆರಂಭವಾದರೂ, ಭಾರಿ ನಿರೀಕ್ಷೆಯಿಂದ ಬಂದವರಿಗೆ ನಿರಾಸೆ ಕಾದಿತ್ತು. ಬಟ್ಟೆ, ಆಹಾರ ಮಳಿಗೆ, ಬೆರಳೆಣಿಕೆ ಮಳಿಗೆಗಳು ಬಿಟ್ಟರೆ ಎಲ್ಲವೂ ಖಾಲಿ ಉಳಿದಿವೆ.

‌‘ದಸರಾ ಹಬ್ಬ ವಸ್ತು ಪ್ರದರ್ಶನ ವೀಕ್ಷಿಸಲು ಮಕ್ಕಳ ಜೊತೆ ಬಂದಿದ್ದೇನೆ. ಬಹಳಷ್ಟು ಮಳಿಗೆಗಳು ತೆರೆಯದ ಕಾರಣ ಎಲ್ಲರಿಗೂ ತೀವ್ರ ನಿರಾಸೆಯಾಗಿದೆ. ಆದಷ್ಟು ಬೇಗ ಎಲ್ಲ ಮಳಿಗೆಗಳನ್ನು ತೆರೆಯಬೇಕು’ ಎಂದು ಬೆಂಗಳೂರಿನಿಂದ ಶ್ರೀಕಾಂತ್‌ ಜೈನ್‌ ಬೇಸರ ಹೊರಹಾಕಿದರು.

ಸ್ಯಾಂಡ್‌ ಆರ್ಟ್‌ನಲ್ಲಿ ‘ಪುನೀತ್‌’ ಸಿನಿಮಾ ಪಯಣ: ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬಾಲ್ಯ, ಸಿನಿಮಾ ಜೀವನವನ್ನು ಬಿಂಬಿಸುವ ಕಲಾಕೃತಿಗಳನ್ನು ಕಲಾವಿದೆ ಗೌರಿ ‘ಫೈನ್ ಸ್ಯಾಂಡ್‌’ ಮೂಲಕ ರಚಿಸಿದ್ದು, ವಸ್ತು ಪ‍್ರದರ್ಶನದ ಪ್ರವೇಶದ್ವಾರದ ಎಡಭಾಗದಲ್ಲಿ ಗಮನ ಸೆಳೆಯುತ್ತದೆ.

ಕಲಾಕೃತಿಗಳ ನಿರ್ಮಾಣಕ್ಕೆ 330 ಟನ್‌ ಸ್ಯಾಂಡ್‌ ಬಳಸಿ, 50x20 ಅಡಿ ಶೆಡ್‌ನಲ್ಲಿ ನಿರ್ಮಿಸಿದ್ದು, 10 ಅಡಿ ಎತ್ತರ, 20 ಅಡಿ ಅಗಲದ ಮೂರ್ತಿ ರಚಿಸಲಾಗಿದೆ. 

ಪುನೀತ್‌ ಬಾಲ್ಯ, ಹಾಡುಗಾರಿಕೆ, ಎರಡು ನಕ್ಷತ್ರ, ಭಕ್ತ ಪ್ರಹ್ಲಾದ, ರಾಜಕುಮಾರ ಹಾಗೂ ಕೊನೆಯ ಸಿನಿಮಾದ ‘ಜೇಮ್ಸ್‌’ ಸಿನಿಮಾದ ಸೈನಿಕನ ಪಾತ್ರದ ಆರು ಪುತ್ಥಳಿ, ಡಾ. ರಾಜ್‌ಕುಮಾರ್‌, ಪಾರ್ವತಮ್ಮ ಕಲಾಕೃತಿಗಳಿವೆ. 10 ದಿನದಲ್ಲಿ ಈ ಕಲಾಕೃತಿಗಳನ್ನು ರಚಿಸಲಾಗಿದ್ದು, ಸಂಪೂರ್ಣ ವೆಚ್ಚವನ್ನು ವಸ್ತುಪ್ರದರ್ಶನ ಪ್ರಾಧಿಕಾರವೇ ವಹಿಸಿಕೊಂಡಿದೆ. 

ಸ್ವಾತಂತ್ರ್ಯದ ನೆನಪು: ಸ್ವಾತಂತ್ರ್ಯದ ಅಮೃತಮಹೋತ್ಸವ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿಯೂ ಗಮನ ಸೆಳೆಯುತ್ತಿದೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಸುಭಾಷ್‌ ಚಂದ್ರ ಭೋಸ್‌, ಭಾರತದ ಭೂಪಟ, ಮಹಾತ್ಮ ಗಾಂಧೀಜಿ, ಅಂಬೇಡ್ಕರ್‌ ಹಾಗೂ ವಿ.ಡಿ.ಸಾವರ್ಕರ್‌ ಪ್ರತಿಮೆಗಳಿವೆ. ಮಧ್ಯಭಾಗದಲ್ಲಿ ಭಾರತದ ಭೂಪ‍ಟವನ್ನು ಬಿಡಿಸಲಾಗಿದೆ.

ಅಂಜನಾದ್ರಿ ಬೆಟ್ಟ: ಪ್ರವಾಸೋದ್ಯಮ ಇಲಾಖೆಯಿಂದ ‘ಅಂಜನಾದ್ರಿ ಬೆಟ್ಟ’ದ ಪ್ರತಿರೂಪ ನಿರ್ಮಿಸಿದ್ದು, ಗುಹಾಂತರ ಪ್ರತಿಕೃತಿ ಒಳಭಾಗದಲ್ಲಿ ರಾಜ್ಯದ ವಿವಿಧ ಪ್ರವಾಸಿತಾಣ, ಅವುಗಳ ವಿವರ, ಜಂಗಲ್‌ ಲಾಡ್ಜಸ್‌ ಆ್ಯಂಡ್‌ ರೆಸಾರ್ಟ್‌ನ ಅತಿಥಿಗೃಹಗಳ ಮಾಹಿತಿಯಿದೆ. ಅದೇ ರೀತಿ, ವಾರ್ತಾ ಇಲಾಖೆಯ ಮಳಿಗೆಯಲ್ಲಿ ಸರ್ಕಾರದ ಕಾರ್ಯಕ್ರಮಗಳು, ಸಾಧನೆಗಳ ವಿವರ ಮಾಹಿತಿ ಕಾಣಬಹುದು.

ಅಂತಿಮ ಹಂತ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಮಳಿಗೆಗಳು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ, ಕೈಗಾರಿಕಾ ಇಲಾಖೆಯ ಮಳಿಗೆಗಳು ಅಂತಿಮ ಹಂತದಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು