ಮೈಸೂರು: ರಷ್ಯಾ–ಉಕ್ರೇನ್ ಯುದ್ಧದಿಂದಾಗಿ ಗಗನಮುಖಿ ಆಗಿದ್ದ ಅಡುಗೆ ಎಣ್ಣೆ ದರವು ನಿರಂತರವಾಗಿ ಇಳಿಕೆ ಆಗುತ್ತಿದ್ದು, ಗ್ರಾಹಕರ ಮೇಲಿನ ಹೊರೆ ತಗ್ಗಿದೆ.
ಮಾರುಕಟ್ಟೆಯಲ್ಲಿ ಸದ್ಯ ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯ ದರವು ಪ್ರತಿ ಲೀಟರ್‌ನ ಪ್ಯಾಕೆಟ್‌ಗೆ ₹115–130ರ ದರದಲ್ಲಿ ಮಾರಾಟ ನಡೆದಿದೆ. ಮಾಲ್‌ಗಳಲ್ಲಿ ಸನ್‌ಪ್ಯೂರ್, ಫ್ರೀಡಂ, ಸನ್‌ಡ್ರಾಪ್, ಫಾರ್ಚುನ್ ಮೊದಲಾದ ಬ್ರಾಂಡ್‌ಗಳ ಎಣ್ಣೆ ದರವು ಇದಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಆಗುತ್ತಿದೆ. ಪ್ಯಾಕೆಟ್ ರೂಪದ ತಾಳೆ ಎಣ್ಣೆ ದರ ಸಹ ಲೀಟರ್‌ಗೆ ₹80–90ಕ್ಕೆ ಇಳಿದಿದೆ.
ರಷ್ಯಾ ಉಕ್ರೇನ್ ಯುದ್ಧದ ಸಂದರ್ಭ ಭಾರತಕ್ಕೆ ಆಮದು ಆಗುತ್ತಿದ್ದ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಾಸ ಆಗಿತ್ತು. ಈ ಹಿನ್ನೆಲೆಯಲ್ಲಿ ರಿಫೈನ್ಡ್ ಎಣ್ಣೆ ಬೆಲೆಯೂ ಗಗನಮುಖಿ ಆಗಿದ್ದು, ಲೀಟರ್‌ಗೆ ₹180–200ರವರೆಗೂ ಏರಿಕೆ ಆಗಿತ್ತು. ಇದೀಗ ಇದರ ಬೆಲೆ ನಿಧಾನವಾಗಿ ಇಳಿಯತೊಡಗಿದೆ.
ಆದಾಗ್ಯೂ ಗಾಣದ ಮಾದರಿಯಲ್ಲಿ ತೆಗೆಯುವ ಎಣ್ಣೆಯ ಧಾರಣೆಯಲ್ಲಿ ಹೆಚ್ಚು ವ್ಯತ್ಯಾಸ ಆಗಿಲ್ಲ. ಗಾಣದಲ್ಲಿನ ಸೂರ್ಯಕಾಂತಿ ಎಣ್ಣೆ ಲೀಟರ್‌ಗೆ ₹330 ಹಾಗೂ ಕಡಲೆಕಾಯಿ ಎಣ್ಣೆ ₹280–300ರಂತೆ ಮಾರಾಟ ನಡೆದಿದೆ.
ಟೊಮೆಟೊ ದಿಢೀರ್ ತುಟ್ಟಿ: ಎರಡು ವಾರದ ಹಿಂದಷ್ಟೇ ಪ್ರತಿ ಕೆ.ಜಿ.ಗೆ ₹15–20ರಂತೆ ಮಾರಾಟ ನಡೆದಿದ್ದ ಟೊಮೆಟೊ ಧಾರಣೆಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ದಿಢೀರ್ ಏರಿಕೆಯಾಗುತ್ತಿರುವುದು ಅಚ್ಚರಿ ಉಂಟು ಮಾಡಿದೆ. ಬೆಲೆ ಕುಸಿತದಿಂದ ರೈತರು ಟೊಮೆಟೊ ಬೆಳೆಯಲು ನಿರಾಸಕ್ತಿ ತೋರಿದ್ದು, ಮಾರುಕಟ್ಟೆಗೆ ಉತ್ಪನ್ನದ ಆವಕ ತಗ್ಗಿದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.
ಕಳೆದ ವಾರವಷ್ಟೇ ಮಾರುಕಟ್ಟೆಯಲ್ಲಿ ಟೊಮೆಟೊ ₹40ರಂತೆ ಮಾರಾಟ ಆಗಿತ್ತು. ಈಗ ಎಪಿಎಂಸಿಯಲ್ಲಿನ ಸಗಟು ದರವೇ ₹50–55ಕ್ಕೆ ತಲುಪಿದೆ. ಮಳೆ ಕಡಿಮೆ ಆಗಿರುವುದು ಮತ್ತು ರೋಗ ಬಾಧೆಯ ಕಾರಣಕ್ಕೆ ಉತ್ಪನ್ನ ಕಡಿಮೆ ಆಗಿದೆ. ಮಳೆಗಾಲದಲ್ಲಿ ಟೊಮೆಟೊ ಕಳೆಯುತ್ತದೆ ಎಂಬ ಕಾರಣಕ್ಕೂ ಕೆಲ ರೈತರು ಬೆಳೆಯಲು ಮುಂದಾಗದೇ ಇರುವುದು ಇದಕ್ಕೆ ಕಾರಣ ಎಂದು ವರ್ತಕರು ಹೇಳುತ್ತಾರೆ.
ಟೊಮೆಟೊ ಜೊತೆಗೆ ಹಸಿ ಮೆಣಸಿನಕಾಯಿ ಸಹ ಈ ವಾರ ಗ್ರಾಹಕರಿಗೆ ಖಾರವಾಗಿದೆ. ಶುಂಠಿ, ಕ್ಯಾರೆಟ್ ಆದಿಯಾಗಿ ಹೆಚ್ಚಿನ ತರಕಾರಿಗಳು ಏರಿಕೆಯ ಹಾದಿಯಲ್ಲಿವೆ. ತರಕಾರಿಗೆ ಹೋಲಿಸಿದರೆ ಈ ಬಾರಿ ಸೊಪ್ಪು ಹೆಚ್ಚು ದುಬಾರಿ ಆಗಿಲ್ಲ. ಸಣ್ಣ ಕೊತ್ತಂಬರಿ ಕಟ್ಟು ₹10ಕ್ಕೆ 3, ಕೀರೆ, ಕಿಲ್‌ಕೀರೆ, ದಂಟು ₹10ಕ್ಕೆ 4ರಂತೆ ಮಾರಾಟ ನಡೆದಿದೆ. ಸಬ್ಬಸ್ಸಿಗೆ ಮತ್ತು ಮೆಂತ್ಯೆ ಮಾತ್ರ ತುಟ್ಟಿಯಾಗಿಯೇ ಉಳಿದಿವೆ. ಮಳೆ ಹೆಚ್ಚಾದಲ್ಲಿ ಸೊಪ್ಪಿನ ಬೆಲೆಯೂ ಏರುವ ಸಾಧ್ಯತೆ ಇದೆ.
undefined undefined
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.