ಜೀವ ಪ್ರೀತಿ ಕಲಿಸುವ ಸಂಗೀತ ಕಲೆಗಳಿಂದ ಸಮಾಜಕ್ಕೆ ಬೆಳಕು ಟ್ರಸ್ಟ್‌ನಿಂದ ಶ್ಲಾಘನೀಯ ಕಾರ್ಯ
ಸೂರ್ಯಗಾಯತ್ರಿ ಸೃಷ್ಟಿಸಿದ ‘ಭಾವ ಗಂಗೋತ್ರಿ’
ವಿದುಷಿ ಸೂರ್ಯಗಾಯತ್ರಿ ಅವರ ಕರ್ನಾಟಕ ಸಂಗೀತ ಗಾಯನದ ‘ಭಾವಗಂಗೋತ್ರಿ’ಯಲ್ಲಿ ಸಹೃದಯರು ಮಿಂದರು. ಪೋಷಕರಾದ ಮೃದಂಗ ವಾದಕ ಪಿ.ವಿ.ಅನಿಲ್ ಕುಮಾರ್ ಹಾಗೂ ಕವಯತ್ರಿ ಪಿ.ಕೆ.ದಿವ್ಯಾ ಅವರ ಸಂಯೋಜನೆಯ ‘ಲಂಬೋದರ ಸಿದ್ಧಿಪ್ರಿಯ ಗೌರಿ ತನಯ’ ಕೃತಿ ಹಾಡುವ ಮೂಲಕ ಕಛೇರಿ ಆರಂಭಿಸಿದರು. ‘ಭೈರವಿ’ ‘ವಸಂತ ಕಲ್ಯಾಣಿ’ ‘ಸಿಂಧು ಭೈರವಿ’ ‘ಮೋಹನ’ ಸೇರಿದಂತೆ ಹಲವು ರಾಗಗಳ ಮಿಳಿತವಿತ್ತು. ಮೃದಂಗದಲ್ಲಿ ವಿದ್ವಾನ್ ಕೃಪಾಲ್ ಸಾಯಿರಾಂ ‘ತಬಲಾ’ದಲ್ಲಿ ವಿದ್ವಾನ್ ಪ್ರಶಾಂತ್ ಶಂಕರ್ ಕೇಳುಗರ ಹೃದಯ ಧಿಮಿತವನ್ನು ಹೆಚ್ಚಿಸಿದರೆ ವಯಲಿನ್‌ನಲ್ಲಿ ವಿದ್ವಾನ್ ಆದರ್ಶ ಅಜಯ ಕುಮಾರ್ ನಾದದ ಮೋಡಿಯಲ್ಲಿ ಸೆಳೆದರು. ‘ಅಭೇರಿ’ ರಾಗದ ಬ್ರಹ್ಮಾನಂದ ಅವರ ‘ಆಜ್ ಸಖಿ ಮೇರೆ ಸತ್‌ಗುರು’ ಕೀರ್ತನೆಯನ್ನು ತನ್ಮಯರಾಗಿ ಹಾಡಿದ ಪರಿಗೆ ಕೇಳುಗರು ಭಾವಪರವಶರಾದರು. ‘ಯಮನ್ ಕಲ್ಯಾಣಿ’ ರಾಗದ ಶೃಂಗೇರಿ ಭಾರತಿತೀರ್ಥ ಸ್ವಾಮೀಜಿ ಅವರ ಕೀರ್ತನೆ ‘ಗರುಡ ಗಮನ ತವ ಚರಣ ಕಮಲ ಮಿಹ’ ಗಾಯನಕ್ಕೆ ತಲೆದೂಗಿದರು. ತಬಲಾ– ಮೃದಂಗದ ಲಯದ ಮೋಡಿಗೆ ಒಳಗಾದರು. ತನಿ ಆವರ್ತನೆಯು ನೆರೆದಿದ್ದವರನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ‘ಹನುಮಾನ್ ಚಾಲಿಸಾ’ ಮೂಲಕ ಭಕ್ತಿಪರವಶರನ್ನಾಗಿ ಮಾಡಿದ ಸೂರ್ಯಗಾಯತ್ರಿ ಜಾನಪದ ಭಕ್ತಿಗೀತೆ ‘ಸೋಜುಗಾದ ಸೂಜಿ ಮಲ್ಲಿಗೆ’ ಹಾಡಿ ಎಲ್ಲರನ್ನು ಸೆಳೆದರು. ಪುರಂದರ ದಾಸರ ಕೃತಿಗಳಾದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ‘ಜಗದೋದ್ಧಾರನ ಆಡಿಸಿದಳೆಯಶೋಧೆ’ ಹಾಡಿ ‘ಭಾವಲೋಕ’ ಸೃಷ್ಟಿಸಿದರು. ಲಾಲ್ಗುಡಿ ಜಯರಾಮನ್ ಅವರ ತಿಲ್ಲಾನದೊಂದಿಗೆ ಕಛೇರಿಗೆ ಅಂತ್ಯ ಹಾಡಿದಾಗ ಸಂಗೀತಪ್ರಿಯರು ಎದ್ದು ನಿಂತು ಚಪ್ಪಾಳೆಯ ಮೆಚ್ಚುಗೆ ಸೂಚಿಸಿದರು.