ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕರೂಪ ನಾಗರಿಕ ಸಂಹಿತೆ ಆದಿವಾಸಿಗಳಿಗೆ ಮಾರಕ: ಆದಿವಾಸಿ ಪಾರ್ಲಿಮೆಂಟ್ ಸಮಿತಿ

Published 13 ಜುಲೈ 2023, 14:10 IST
Last Updated 13 ಜುಲೈ 2023, 14:10 IST
ಅಕ್ಷರ ಗಾತ್ರ

ಹುಣಸೂರು: ‘ಭಾರತ ಸರ್ಕಾರ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕಿದ್ದು, ಈ ಕಾಯ್ದೆಯನ್ನು ಆದಿವಾಸಿ ಸಮುದಾಯ ವಿರೋಧಿಸುತ್ತದೆ’ ಎಂದು ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ಹೇಳಿದರು.

ನಗರದ ಡೀಡ್ ಸಂಸ್ಥೆಯಲ್ಲಿ ಗುರುವಾರ ನಡೆದ ಆದಿವಾಸಿ ಜನತಾ ಪಾರ್ಲಿಮೆಂಟ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಭಾರತ ಹಲವು ಧರ್ಮ, ಜಾತಿ ಸಂಸ್ಕಾರ ಮತ್ತು ಸಂಪ್ರದಾಯದಿಂದ ಕೂಡಿದೆ. ಈ ದೇಶ ಪ್ರಜಾಪ್ರಭುತ್ವ ತಳಹದಿಯಲ್ಲಿ ಸಂವಿಧಾನ ರೂಪಿಸಿಕೊಂಡು ಒಕ್ಕೂಟದ ವ್ಯವಸ್ಥೆಯಲ್ಲಿ ಆಡಳಿತ ನಡೆಸಿ ವಿಶ್ವಕ್ಕೆ ಮಾದರಿಯಾಗಿದೆ’ ಎಂದರು.

‘ಕೇಂದ್ರ ಸರ್ಕಾರ ಏಕರೂಪ ನಾರಿಕ ಸಂಹಿತೆ ಜಾರಿಗೊಳಿಸಲು ಮುಂದಾಗಿರುವುದರಿಂದ ಕಾಯ್ದೆ 371 ಅಡಿಯಲ್ಲಿ ಆದಿವಾಸಿಗರಿಗೆ ನೀಡಿರುವ ಸಂವಿಧಾನಾತ್ಮಕ ರಕ್ಷಾ ಕವಚ ಕಿತ್ತುಕೊಂಡಂತಾಗಲಿದೆ. ಇದರಿಂದಾಗಿ ಆದಿವಾಸಿ ಸಮುದಾಯವನ್ನು ಮತ್ತಷ್ಟು ಸಾಮಾಜಿಕವಾಗಿ ದುರ್ಬಲಗೊಳಿಸಿದಂತಾಗುತ್ತದೆ’ ಎಂದು ದೂರಿದರು.

‘ಅನುಸೂಚಿತ 5 ಮತ್ತು 6ರ ಅಡಿಯ ಪೇಸ ಕಾಯ್ದೆ 1996 ಅಡಿಯಲ್ಲಿ ಆದಿವಾಸಿಗಳ ಗ್ರಾಮಸಭೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಆದಿವಾಸಿಗರು ಸ್ವಯಂ ಆಡಳಿತ ನಡೆಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನದಿಂದ ಈ ಎಲ್ಲವನ್ನು ಗಿರಿಜನರಿಂದ ಕಿತ್ತುಕೊಂಡಂತಾಗಲಿದೆ’ ಎಂದು ತಿಳಿಸಿದರು.

ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಮಾತನಾಡಿದರು. ಆದಿವಾಸಿ ಪಾರ್ಲಿಮೆಂಟ್ ಸಮಿತಿ ಸದಸ್ಯರಾದ ವಿಠಲ್ ನಾಣಚ್ಚಿ, ಬೊಮ್ಮಿ, ಜಯಪ್ಪ, ಶಿವಣ್ಣ, ಪ್ರೊ.ಸಿದ್ದೇಗೌಡ, ದಲಿತ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಹರಿಹರ ಆನಂದಸ್ವಾಮಿ, ಆದಿವಾಸಿ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು, ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ ಇದ್ದರು.

ಕಾಯ್ದೆ ಸಡಿಲ ಬೇಡ: ಪತ್ರ

‘ಏಕರೂಪ ನಾಗರಿಕ ಸಂಹಿತೆ ಸಂಬಂಧ ಈಗಾಗಲೇ ಪ್ರಧಾನಿ ಆದಿವಾಸಿ ಸಚಿವಾಲಯ ಮತ್ತು ರಾಜ್ಯಪಾಲರ ಕಚೇರಿಗೆ ಪತ್ರ ಬರೆದು ಆದಿವಾಸಿಗಳ ರಕ್ಷಾ ಕವಚವಾಗಿರುವ ಕಾಯ್ದೆ 371 ಯಾವುದೇ ಕಾರಣದಿಂದಲೂ ಸಡಿಲಗೊಳಿಸುವ ಕೆಲಸ ಮಾಡಬಾರದು. ಆದಿವಾಸಿಗಳ ಸಾಂಪ್ರದಾಯಕ ಆಡಳಿತ ಮತ್ತು ಸಂಸ್ಕೃತಿ ಉಳಿಸಿಕೊಂಡು ಹೋಗಲು ಅವಕಾಶ ನೀಡಲು ಕೋರಲಾಗಿದೆ’ ಎಂದು ಆದಿವಾಸಿ ಪಾರ್ಲಿಮೆಂಟ್ ಸಮಿತಿ ಅಧ್ಯಕ್ಷ ಹರ್ಷ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT