ಮೈಸೂರು: ‘ಜಿಲ್ಲೆಯ 12 ಸಾವಿರ ಬುಡಕಟ್ಟು ಕುಟುಂಬಗಳಿಗೆ ಅರಣ್ಯ ಭೂಮಿ ಹಕ್ಕು ಪತ್ರ ನೀಡಬೇಕು. ಪ್ರೊ.ಮುಜಾಫರ್ ಅಸ್ಸಾದಿ ವರದಿಯಲ್ಲಿ ಉಲ್ಲೇಖಿತವಾಗಿರುವ 3,418 ಆದಿವಾಸಿ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಬೇಕು’ ಎಂದು ಆಗ್ರಹಿಸಿ ಹಾಡಿ ನಿವಾಸಿಗಳು ಹಾಗೂ ಮುಖಂಡರು ‘ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ’ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಹುಣಸೂರು, ಪಿರಿಯಾಪಟ್ಟಣ ಹಾಗೂ ಎಚ್.ಡಿ.ಕೋಟೆ ಹಾಡಿ ನಿವಾಸಿಗಳು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಘೋಷಣೆ ಕೂಗಿದರು.
ವೇದಿಕೆ ಮುಖಂಡ ಬಂಗವಾದಿ ನಾರಾಯಣಪ್ಪ ಮಾತನಾಡಿ, ‘ಅರಣ್ಯ ವಿಸ್ತರಣೆ ನೆಪದಲ್ಲಿ ಜಿಲ್ಲೆಯ ಕಾಡಂಚಿನ ಗ್ರಾಮಗಳು ಹಾಗೂ ಹಾಡಿ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆ–2006ರ ಅನ್ವಯ ಬುಡಕಟ್ಟು ಕುಟುಂಬಗಳಿಗೆ ಸಾಗುವಳಿ ಭೂಮಿಯ ಹಕ್ಕು ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.
‘ಸುಪ್ರೀಂ ಕೋರ್ಟ್ ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಮಾಡಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್) ಅಡಿ ದಾಖಲಾದ ಪ್ರಕರಣಗಳು ವಜಾಗೊಳ್ಳುತ್ತಿವೆ. ಕಾಲಮಿತಿ ತೆಗೆದು ಹಾಕಲು ಶಾಸಕಾಂಗ ಕಾನೂನು ರೂಪಿಸಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲೆಯ 164 ಜೇನು ಕುರುಬ ಹಾಡಿಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲ. 219 ಹಾಡಿಗಳಿಗೆ ಅರಣ್ಯ ಹಕ್ಕು ಪತ್ರ ನೀಡಬೇಕು. ಹುಣಸೂರು ತಾಲ್ಲೂಕಿನ ಗೋವಿಂದನಹಳ್ಳಿ ಸರ್ವೆ ನಂ 21ರ 108 ಎಕರೆಯಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾಗಿದ್ದ 39 ಎಕರೆ ಜಮೀನು ಬೇರೊಬ್ಬರ ಪಾಲಾಗಿದ್ದು, ಮರಳಿ ವಶಕ್ಕೆ ಪಡೆಯಬೇಕು. ಹುಣಸೂರಿನ 83 ಅಕ್ರಮ ಬಡಾವಣೆಗಳನ್ನು ಸಕ್ರಮಗೊಳಿಸಬೇಕು’ ಎಂದು ಒತ್ತಾಯಿಸಿದರು.
ವೇದಿಕೆಯ ನಂಜುಂಡಸ್ವಾಮಿ, ಪ್ರಸನ್ನಕುಮಾರ್, ಡಾ.ಪ್ರಶಾಂತ್, ಆದಿವಾಸಿ ಮುಖಂಡ ಟಿ.ಕೆ.ರಾಮು, ದರ್ಶನ್, ಚೌಕೂರು ಹಾಡಿಯ ಸಂಜೀವಮ್ಮ, ಮಂಜುಳಾ, ಸಾಕಮ್ಮ, ಸಣ್ಣಮ್ಮ, ಕಾವ್ಯಾ, ಪಿರಿಯಾಪಟ್ಟಣದ ಟಿ.ಈರಯ್ಯ, ವಿಜಯಕುಮಾರ್, ಜಿ.ಸ್ವಾಮಿ, ಎನ್.ಎಸ್.ಗೋವಿಂದ ರಾಜ್, ಎಂ.ಕೆ.ಜವರೇಗೌಡ, ರುದ್ರೇಗೌಡ ಇದ್ದರು.
‘ನದಿಗಳು ಕಲುಷಿತ: ಕ್ರಮವಹಿಸಿ’: ‘ಜಿಲ್ಲೆಯ ಕಪಿಲಾ, ಕಾವೇರಿ, ಲಕ್ಷ್ಮಣತೀರ್ಥ ನದಿಗಳು ಕಲುಷಿತವಾಗುತ್ತಿದ್ದು, ಜಿಲ್ಲಾಡಳಿತ ಕ್ರಮವಹಿಸಲು ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ವೇದಿಕೆಯ ಹರಿಹರ ಆನಂದಸ್ವಾಮಿ ಒತ್ತಾಯಿಸಿದರು.
‘ನದಿ ಪ್ರದೇಶಗಳು ಒತ್ತುವರಿಯಾಗಿವೆ. ಚರಂಡಿ ನೀರು ನೇರವಾಗಿ ಸೇರುತ್ತಿದೆ. ಲಕ್ಷ್ಮಣತೀರ್ಥ ನದಿ ಸಂಪೂರ್ಣ ಕಲುಷಿತಗೊಂಡಿದೆ. ಇದೇ ನೀರಿನಿಂದ ಹುಣಸೂರು ತಾಲ್ಲೂಕಿನ 40 ಕೆರೆ ತುಂಬಿಸಲಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.