ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ತಗ್ಗಿದ ಟೊಮೆಟೊ ಧಾರಣೆ: ಬಹುತೇಕ ತರಕಾರಿಗಳು ಅಗ್ಗ

; ದುಬಾರಿಯಾದ ಸೇಬು, ಇಳಿಕೆ ಕಂಡ ಸೊಪ್ಪಿನ ದರ
Published 8 ಆಗಸ್ಟ್ 2023, 12:34 IST
Last Updated 8 ಆಗಸ್ಟ್ 2023, 12:34 IST
ಅಕ್ಷರ ಗಾತ್ರ

ಮೈಸೂರು: ಕಳೆದ ಎರಡು ತಿಂಗಳಿಂದ ಏರುಗತಿಯಲ್ಲಿದ್ದ ಟೊಮೆಟೊ ಧಾರಣೆ ಈ ವಾರ ತಗ್ಗಿದ್ದು, ಉಳಿದ ತರಕಾರಿಗಳ ಬೆಲೆಯಲ್ಲೂ ಇಳಿಕೆಯಾಗಿದೆ.

ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಾರದಿಂದ ಬೆಲೆ ಇಳಿಯತೊಡಗಿದೆ. ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಟೊಮೆಟೊ ಬೆಳೆಯಲು ರೈತರು ಆಸಕ್ತಿ ತೋರಿದ್ದು, ಸ್ಥಳೀಯವಾಗಿಯೂ ಉತ್ಪನ್ನ ಪೂರೈಕೆಯಾಗುತ್ತಿದೆ. ಹೀಗಾಗಿ ಪ್ರತಿ ಕೆ.ಜಿ.ಗೆ ಸರಾಸರಿ ₹20ರಷ್ಟು ಬೆಲೆ ಇಳಿದಿದ್ದು, ಇನ್ನೂ ಇಳಿಕೆ ಆಗಲಿದೆ ಎಂದು ವರ್ತಕರು ಹೇಳುತ್ತಾರೆ.

ಅಧಿಕ ಮಾಸದ ಹಿನ್ನೆಲೆಯಲ್ಲಿ ಶುಭ ಸಮಾರಂಭಗಳು ನಡೆಯದ ಕಾರಣ ತರಕಾರಿಗಳಿಗೆ ಬೇಡಿಕೆ ಕುಸಿದಿದ್ದು, ಇದರಿಂದಾಗಿ ಬೆಲೆಯೂ ಕ್ರಮೇಣ ಇಳಿಕೆಯಾಗುತ್ತಿದೆ. ನೂರರ ಗಡಿವರೆಗೆ ತಲುಪಿದ್ದ ಬೀನ್ಸ್‌ನ ಬೆಲೆ ಕಡಿಮೆಯಾಗುತ್ತಿದ್ದು, ಈ ವಾರ ಪ್ರತಿ ಕೆ.ಜಿ.ಗೆ ₹30ಕ್ಕೆ ಇಳಿಕೆಯಾಗಿದೆ. ಕ್ಯಾರೆಟ್‌, ನುಗ್ಗೆಕಾಯಿ ಸಹ ಅಗ್ಗವಾಗಿವೆ. ದಪ್ಪ ಮೆಣಸಿನಕಾಯಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ದುಬಾರಿಯಾಗಿವೆ. ಈರುಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಾಣುತ್ತಿದೆ. ಈ ತಿಂಗಳ ಅಂತ್ಯದಿಂದ ಈರುಳ್ಳಿ ಧಾರಣೆ ದುಬಾರಿ ಆಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆಯಲ್ಲಿನ ವರ್ತಕರು ಹೇಳುತ್ತಾರೆ.

ಸೊಪ್ಪು ಅಗ್ಗ: ಈ ವಾರವೂ ಸೊಪ್ಪು ಅತ್ಯಂತ ಅಗ್ಗದ ದರದಲ್ಲಿಯೇ ಮುಂದುವರಿದಿದೆ. ಕೊತ್ತಂಬರಿ ನಾಟಿ ಸಣ್ಣ ಕಟ್ಟಿಗೆ ₹10ಕ್ಕೆ 4, ಫಾರಂ ಕೊತ್ತಂಬರಿ 5, ದಂಟು, ಕೀರೆ, ಕಿಲ್‌ಕೀರೆ, ಸಬ್ಬಸ್ಸಿಗೆ, ಪಾಲಕ್‌ ₹10ಕ್ಕೆ 4 ಕಟ್ಟು ಹಾಗೂ ಮೆಂತ್ಯ ₹5ಕ್ಕೆ ಒಂದು ಸಣ್ಣ ಕಟ್ಟು ಮಾರಾಟವಾಗುತ್ತಿದೆ.

ಸೇಬು ದುಬಾರಿ: ಹಣ್ಣುಗಳ ಬೆಲೆಯು ಕ್ರಮೇಣ ಏರಿಕೆ ಆಗುತ್ತಲೇ ಇದೆ. ಅದರಲ್ಲಿಯೂ ಸೇಬು ಗ್ರಾಹಕರಿಗೆ ಬಲು ದುಬಾರಿಯಾಗಿದ್ದು, ಕೊಳ್ಳುವವರು ಬೆಲೆ ಕೇಳಿಯೇ ಹೌಹಾರುತ್ತಿದ್ದಾರೆ. ಕಿತ್ತಳೆ ಸಹ ದುಬಾರಿಯಾಗಿದೆ. ದಾಳಿಂಬೆ ಬೆಲೆ ಕೆ.ಜಿ.ಗೆ ₹20ರಷ್ಟು ಕಡಿಮೆಯಾಗಿದೆ. ಏಲಕ್ಕಿ ಬಾಳೆ ಸಹ ಬೆಲೆ ಏರಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT