ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಲ್ಲಿ ‘ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ’: ಕಾ.ತ. ಚಿಕ್ಕಣ್ಣ

Published 10 ಆಗಸ್ಟ್ 2024, 13:46 IST
Last Updated 10 ಆಗಸ್ಟ್ 2024, 13:46 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರಿನಲ್ಲಿ ‘ಶ್ರಮಣಧಾರೆಗಳ ಸಂಸ್ಕೃತಿ ಉತ್ಸವ’ವನ್ನು ಆಯೋಜಿಸಲಾಗುವುದು’ ಎಂದು ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ತಿಳಿಸಿದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಿಂದ ಇಲ್ಲಿನ ರಂಗಾಯಣದ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ‘ಕನಕದಾಸ ಮತ್ತು ತತ್ತಪದ ಅಧ್ಯಯನ: ಮುನ್ನೋಟ’ ಕುರಿತು ವಿದ್ವಾಂಸರೊಂದಿಗೆ ಶನಿವಾರ ಏರ್ಪಡಿಸಿದ್ದ ಸಮಾಲೋಚನಾ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎರಡು ದಿನಗಳ ಉತ್ಸವದಲ್ಲಿ ಸಂವಾದ, ಉಪನ್ಯಾಸ, ಮೂಲಧಾಟಿಯ ಪದಗಳ ಗಾಯನ ಇರಲಿದೆ. ಇದಕ್ಕಾಗಿ ವಿಶ್ವವಿದ್ಯಾಲಯಗಳ ಸಹಯೋಗ ಕೋರಲಾಗುವುದು. ವಿದ್ಯಾರ್ಥಿಗಳನ್ನು ಒಳಗೊಳಿಸಿಕೊಳ್ಳಲಾಗುವುದು. ಕೇಂದ್ರದಿಂದ ಆರ್ಥಿಕ ಮಿತಿಯಲ್ಲಿ ಕಾರ್ಯಸಾಧ್ಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ತಿಳಿಸಲು:

‘ಯುವಜನರು ವಿದ್ಯಾರ್ಥಿಗಳು ಹಾಗೂ ಮಕ್ಕಳನ್ನು ‌ಗುರಿಯಾಗಿಟ್ಟುಕೊಂಡು ಕಾರ್ಯಕ್ರಮ ‌ಆಯೋಜಿಸಲಿದ್ದೇವೆ. ಹಿಂದೆ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ ಉತ್ತಮ ಪ್ರಬಂಧಗಳನ್ನು ಪುಸ್ತಕವಾಗಿ ಮಾಡಿ ಉಚಿತವಾಗಿ ಶಾಲೆಗಳಿಗೆ ಹಂಚಿದ್ದೆವು. ಸಚಿತ್ರದ ಮೂಲಕ‌ ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮ ಮಾಡಿದ್ದೆವು’ ಎಂದು ಮಾಹಿತಿ ನೀಡಿದರು.

‘ಕೇಂದ್ರವು 13 ವರ್ಷಗಳಿಂದ ಕನಕದಾಸರ ಸಾಹಿತ್ಯವನ್ನು ಪ್ರಚುರಪಡಿಸಲು ವಿಚಾರಸಂಕಿರಣ, ಸಂವಾದ, ಪುಸ್ತಕಗಳ ಪ್ರಕಟಣೆ ಮೊದಲಾದ ಕಾರ್ಯದಲ್ಲಿ ತೊಡಗಿದೆ. ಈವರೆಗೆ 50 ಸಂಪುಟಗಳನ್ನು ಹೊರತಂದಿದ್ದು, ಕನಕರ ಸಾಹಿತ್ಯವನ್ನು 15 ಭಾಷೆಗಳಿಗೆ ಅನುವಾದಿಸಲಾಗಿದೆ. ಸಂಶೋಧಕರ ಅಧ್ಯಯನಕ್ಕೆ ಒಂದು ₹ 1 ಲಕ್ಷ ಅನುದಾನ ನೀಡುವ ಮೂಲಕ 18 ಗ್ರಂಥಗಳನ್ನು ಪ್ರಕಟಿಸಿದೆ. ಕಮ್ಮಟ, ಶಿಬಿರ ಸೇರಿದಂತೆ 250ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈವರೆಗೆ 50ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳ ಪ್ರಯೋಜನ ಪಡೆದಿದ್ದಾರೆ’ ಎಂದರು.

‘ತತ್ವಪದ, ದಾಸರ ಅಧ್ಯಯನ, ಭಕ್ತಿ ಪರಂಪರೆ ಕುರಿತ ಕಾರ್ಯಕ್ರಮಗಳನ್ನು ವಿಸ್ತರಿಸಿಕೊಂಡು ಕೆಲಸ ಮಾಡುವ ಉದ್ದೇಶವಿದೆ. ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ರಾಯಚೂರು ಮತ್ತು ಬೆಂಗಳೂರಿನಲ್ಲೂ ಸಮಾಲೋಚನಾ ಗೋಷ್ಠಿ ನಡೆಸಿ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಹೇಳಿದರು.

ಸಲಹೆಗಳೇನು?:

‘ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಬೇಕು. ಅರ್ಜಿ ಆಹ್ವಾನಿಸುವ ಜೊತೆಗೆ, ಅರ್ಜಿ ಸಲ್ಲಿಸದ ಅರ್ಹ ವಿದ್ವಾಂಸರಿಗೆ ಗೌರವ ದೊರೆಯುವಂತೆ ನೋಡಿಕೊಳ್ಳಬೇಕು. ‌ಚರ್ಚಾ ಕಾರ್ಯಕ್ರಮಗಳನ್ನು ಪುಸ್ತಕಗಳಾಗಿ ಪ್ರಕಟಿಸಬೇಕು’ ಎಂದು ಲೇಖಕ ಜಿ.ಪಿ. ಬಸವರಾಜು ಸಲಹೆ ನೀಡಿದರು.

‘ಕನಕದಾಸರು ಒಂಟಿ ಅಲ್ಲವೇ ಅಲ್ಲ. ಅವರನ್ನು ಹೊಸದಾಗಿ ಕಟ್ಟಿಕೊಡಬೇಕು. ಕನಕದಾಸರನ್ನು ಅನುಸರಿಸಬೇಕು. ಅವರೊಂದಿಗೆ ಅವರಂತೆಯೇ ಇರುವವರನ್ನು ಜೋಡಿಸಿಕೊಂಡು ಹೋಗಬೇಕು’ ಎಂದು ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಹೇಳಿದರು.

‘ಕನಕರ ವಿಚಾರಗಳನ್ನು ಮುಟ್ಟಿಸಲು ರಂಗಭೂಮಿ ಹಾಗೂ ಜನಪದ ಕಲಾವಿದರನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಯುವಜನರಿಗೆ ತಲುಪಿಸಬೇಕು:

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಚಿಕ್ಕಮಗಳೂರು ಗಣೇಶ್ ಮಾತನಾಡಿ, ‘ಕನಕ ಸಾಹಿತ್ಯವನ್ನು ಯುವಜನರಿಗೆ ತಲುಪಿಸಬೇಕು. ಮಂಟೇಸ್ವಾಮಿ, ಜುಂಜಪ್ಪ, ಯಲಮ್ಮ ಅವರನ್ನು ಸಾಂಸ್ಕೃತಿಕವಾಗಿ ಪರಿಚಯಿಸಬೇಕು’ ಎಂದರು.

ರಂಗಕರ್ಮಿ ಸಿ.ಬಸವಲಿಂಗಯ್ಯ ಮಾತನಾಡಿ, ‘ಅರ್ಥವಿಲ್ಲದ ತತ್ವಜ್ಞಾನ ಹೇಳುತ್ತಾ ಹೋದರೆ ಯಜಮಾನನ ಪರಂಪರೆಗೇ ಮತ್ತೆ ಹೋಗುತ್ತೇವೆ. ಆಗ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ. ಭಕ್ತಿ ಹಾಗೂ ಧ್ಯಾನ ಬೇಕು ನಿಜ. ಅದಕ್ಕೆ ಮಧ್ಯವರ್ತಿಗಳ ತತ್ವಜ್ಞಾನ ಯಾಕೆ ಬೇಕು? ವೈಜ್ಞಾನಿಕ ನೆಲೆಯಲ್ಲಿ ತತ್ವಜ್ಞಾನವನ್ನು ನೋಡಬೇಕು’ ಎಂದು ಹೇಳಿದರು.

ಸಾಹಿತಿ ಪ್ರೊ.ಕೆ.ಎಸ್. ಭಗವಾನ್‌, ಸಂಶೋಧಕಿ ಟಿ.ಎನ್‌. ನಾಗರತ್ನಾ, ಅಧ್ಯಾಪಕ ಸದೋಬೋಸ್‌, ಪ್ರಾಂಶುಪಾಲ ಮಹೇಶ್‌ ಹರವೆ, ಹೋರಾಟಗಾರ ಉಗ್ರನರಸಿಂಹೇಗೌಡ, ಪ್ರಾಧ್ಯಾಪಕರಾದ ಎ.ಎಂ. ಶಿವಸ್ವಾಮಿ ಹಾಗೂ ಡಿ. ಪುರುಷೋತ್ತಮ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್‌. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶಶ್, ಕೇಂದ್ರದ ಸದಸ್ಯ ಸಂಚಾಲಕ ಚಕ್ಕರೆ ಶಿವಶಂಕರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT