ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Kidney Day | ಮೈಸೂರು: ಕಿಡ್ನಿ ಸಮಸ್ಯೆ; ರೋಗಿಗಳ ಹೆಚ್ಚಳ

ಇಂದು ವಿಶ್ವ ಮೂತ್ರಪಿಂಡ ದಿನಾಚರಣೆ; ಸೂಕ್ತ ಆರೈಕೆ, ಔಷಧಿ ಅಭ್ಯಾಸಕ್ಕೆ ಕರೆ
Published 14 ಮಾರ್ಚ್ 2024, 6:17 IST
Last Updated 14 ಮಾರ್ಚ್ 2024, 6:17 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ರೋಗಿಗಳು ಹೆಚ್ಚುತ್ತಿದ್ದು, ನಿರಂತರವಾಗಿ ಚಿಕಿತ್ಸೆ ಪಡೆಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದರೆ, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುವವರು, ಒಳರೋಗಿಗಳಾಗಿರುವವರು, ಡಯಾಲಿಸಿಸ್‌ ಚಿಕಿತ್ಸೆಯನ್ನು ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಚಿಕಿತ್ಸೆಗಾಗಿ ಕಾಯುತ್ತಿರುವವರೂ ಹೆಚ್ಚಿದ್ದಾರೆ. ಶಸ್ತ್ರಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿರುವುದು ಸನ್ನಿವೇಶ ಗಂಭೀರವಾಗಿದೆ ಎಂಬುದರತ್ತ ಗಮನ ಸೆಳೆಯುತ್ತದೆ.

ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ, ನೆಫ್ರೊ ಯುರಾಲಜಿ ಘಟಕವೂ ಸೇರಿದಂತೆ 264 ಮಂದಿ ಡಯಾಲಿಸಿಸ್‌ ಸೇವೆ ಪಡೆಯುತ್ತಿದ್ದು, ಉಳಿದಂತೆ 109 ಮಂದಿ ವೇಟಿಂಗ್‌ ಲಿಸ್ಟ್‌ನಲ್ಲಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿಯೂ ಡಯಾಲಿಸಿಸ್‌ ನಡೆಯುತ್ತಿವೆ. ಉಳಿದಂತೆ ಕಿಡ್ನಿ ಸಮಸ್ಯೆಗಳೂ ಹೆಚ್ಚುತ್ತಿವೆ.

ಡಯಾಲಿಸಿಸ್‌ಗೆ ಹೆಚ್ಚಿದ ಒತ್ತಡ: ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಉಪಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ 109 ಮಂದಿ ವೇಟಿಂಗ್‌ ಲಿಸ್ಟ್‌ನಲ್ಲಿದ್ದಾರೆ. ‘ಖಾಸಗಿಯಾಗಿ ದುಬಾರಿ ವೆಚ್ಚದಲ್ಲಿ ಡಯಾಲಿಸಿಸ್‌ ಒಳಗಾಗಬೇಕಾದ ಅಗತ್ಯವಿದ್ದು, ಸೂಕ್ತ ಅನುಕೂಲಗಳನ್ನು ಸರ್ಕಾರ ಒದಗಿಸಬೇಕು’ ಎಂಬುದು ರೋಗಿಗಳ ಆಗ್ರಹ.

ಹಲವೆಡೆ ಜಾಗೃತಿ; ನಗರದ ಕೆಲ ಸಂಸ್ಥೆಗಳು ಕಿಡ್ನಿ ಸಮಸ್ಯೆ ಕುರಿತ ಜಾಗೃತಿಗೆ ಕಾರ್ಯಕ್ರಮ ಹಮ್ಮಿಕೊಂಡಿವೆ. ‘ಎಲ್ಲರಿಗೂ ಕಿಡ್ನಿ ಆರೋಗ್ಯ– ಸೂಕ್ತ ಆರೈಕೆ ಮತ್ತು ಔಷಧಿ ಅಭ್ಯಾಸಗಳನ್ನು ಅತ್ಯಾಧುನಿಕವಾಗಿ ತಲುಪಿಸುವುದು’ ಈ ಬಾರಿಯ ಧ್ಯೇಯ ವಾಕ್ಯ.

‘ಮೂತ್ರಪಿಂಡ(ಕಿಡ್ನಿ) ವಿಫಲವಾಗಿದೆ ಎಂದಾಗ ಆತಂಕಗೊಳ್ಳುವುದು ಬೇಡ. ಡಯಾಲಿಸಿಸ್‌ ಪ್ರಕ್ರಿಯೆಯಲ್ಲಿದ್ದವರೂ ದಶಕಗಳ ಕಾಲ ಯಶಸ್ವಿಯಾಗಿ ಜೀವನ ನಡೆಸುತ್ತಿದ್ದಾರೆ’ ಎನ್ನುತ್ತಾರೆ ನಗರದ ಕೆ.ಆರ್‌.ಆಸ್ಪತ್ರೆಯ ನೆಫ್ರೊ ಯುರಾಲಜಿ ಘಟಕದ ಮುಖ್ಯಸ್ಥ ಡಾ.ಜೆ.ಬಿ.ನರೇಂದ್ರ.

‘ಮೂತ್ರಪಿಂಡಗಳ ಆರೋಗ್ಯ ರಕ್ಷಣೆ ಆಧುನಿಕ ಜೀವನಶೈಲಿಯಲ್ಲಿ ಆತಂಕದ ವಿಚಾರ. ಸೂಕ್ತ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಅತ್ಯಗತ್ಯ. ವೈದ್ಯರ ಸಲಹೆಯಿಲ್ಲದೆ ಅನಗತ್ಯವಾಗಿ ಔಷಧಗಳನ್ನು ತೆಗೆದುಕೊಳ್ಳಬಾರದು’ ಎಂಬುದು ಅವರ ಎಚ್ಚರಿಕೆಯ ನುಡಿ.‌

‘ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿರ್ಲಕ್ಷವೂ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತದೆ. ಆಗಾಗ ಮೂತ್ರಪಿಂಡಗಳ ಆರೋಗ್ಯ ತಪಾಸಣೆ ಅಗತ್ಯ. ಸಮಸ್ಯೆ ಎದುರಾದರೂ ಆತಂಕ ಬೇಡ. ಇಂದು ಎಲ್ಲ ರೀತಿಯ ಸೌಲಭ್ಯಗಳಿದ್ದು, ಸಮಸ್ಯೆಯ ನಿವಾರಣೆ ಮತ್ತು ಸಮಸ್ಯೆಯೊಂದಿಗಿನ ಜೀವನ ಎರಡನ್ನು ಸುರಕ್ಷಿತವಾಗಿ ಮಾಡಬಹುದು’ ಎಂದರು.

ಮೇಲ್ದರ್ಜೆಗೇರಲಿದೆ ಘಟಕ

‘ಈ ಬಾರಿ ಬಜೆಟ್‌ನಲ್ಲಿ ಅನುದಾನ ನೀಡಿದ್ದು, ನೆಫ್ರೊ ಯುರಾಲಜಿ ಘಟಕವನ್ನು 100 ಹಾಸಿಗೆಗಳೊಂದಿಗೆ ಮೇಲ್ದರ್ಜೆ ಗೇರಿಸಲು ಉದ್ದೇಶಿಸಲಾಗಿದೆ. ಜಯದೇವ ಆಸ್ಪತ್ರೆ ಹಿಂಭಾಗ 1 ಎಕರೆ ಕೂಡ ಕಾಯ್ದಿರಿಸಲಾಗಿದ್ದು, ಈಗಿನ ಬೇಡಿಕೆ ಪೂರೈಸಲು ಸಾಧ್ಯವಾಗುತ್ತದೆ’ ಎಂದು ಡಾ.ಜೆ.ಬಿ.ನರೇಂದ್ರ ತಿಳಿಸಿದರು.

ಸಾಂಕ್ರಾಮಿಕವಲ್ಲದ ರೋಗಗಳ ನಿರ್ವಹಣೆ ವಿಭಾಗದ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಾ.ಅರ್ಚನಾ ಮಾತನಾಡಿ, ‘ಜಿಲ್ಲೆಯಲ್ಲಿ 115 ರೋಗಿಗಳು ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದು, 87 ಮಂದಿ ವೇಟಿಂಗ್‌ ಲಿಸ್ಟ್‌ನಲ್ಲಿದ್ದಾರೆ. ಸದ್ಯ 22 ಡಯಾಲಿಸಿಸ್‌ ಉಪಕರಣಗಳಿದ್ದು, 33ಕ್ಕೆ ಏರಿಸಲು ಸಿದ್ದತೆ ನಡೆಯುತ್ತಿದೆ’ ಎಂದರು.

ಕೆ ಆರ್‌ ಆಸ್ಪತ್ರೆಯಲ್ಲಿ ನೆಫ್ರೊ ಯುರಾಲಜಿ ಘಟಕದ ಅಂಕಿ ಅಂಶ

ಚಿಕಿತ್ಸೆ;2021;2022;2023

ಹೊರ ರೋಗಿಗಳು;9,846;9,318;9,790

ಒಳರೋಗಿಗಳು;1,138;1,294;1,435

ಡಯಾಲಿಸಿಸ್‌;17,080;15,251;16,503

ಶಸ್ತ್ರಚಿಕಿತ್ಸೆ;984;1,179;1,363

ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಸ್ಥಿತಿಗತಿ

ತಾಲ್ಲೂಕು;ಡಯಾಲಿಸಿಸ್‌ ಉಪಕರಣಗಳು;ಬಳಸುತ್ತಿರುವ ರೋಗಿಗಳು;ಕಾಯುತ್ತಿರುವ ರೋಗಿಗಳು

ತಿ.ನರಸೀಪುರ;4;27;27

ನಂಜನಗೂಡು;5;16;20

ಹುಣಸೂರು;3;23;20

ಎಚ್‌.ಡಿ.ಕೋಟೆ;5;23;9

ಪಿರಿಯಾಪಟ್ಟಣ;4;18;10

ಕೆ.ಆರ್‌.ನಗರ;4;7;7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT