ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲುಷಿತ ನೀರು ಕುಡಿದು ಯುವಕನ ಸಾವು: ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಯಿತೇ?

ಅರ್ಧಕ್ಕೆ ನಿಂತ ಒಳಚರಂಡಿ ಕಾಮಗಾರಿ: ಚರಂಡಿಯಲ್ಲೇ ಇದೆ ಕುಡಿಯುವ ನೀರಿನ ಕೊಳವೆಬಾವಿ!
Published 23 ಮೇ 2024, 7:19 IST
Last Updated 23 ಮೇ 2024, 7:19 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಒಬ್ಬರು ಮೃತಪಟ್ಟು, ಹಲವರು ಅಸ್ವಸ್ಥರಾಗಲು, ಮಳೆನೀರು ಕಾಲುವೆಯಲ್ಲಿ ಕೊಳವೆಬಾವಿ ಕೊರೆದ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯೇ ಕಾರಣವಾಯಿತೇ ಎಂಬ ಚರ್ಚೆ ನಡೆದಿದೆ.

ಗ್ರಾಮದಲ್ಲಿ ಮಳೆನೀರು ಕಾಲುವೆಯಲ್ಲಿ ಒಳಚರಂಡಿ ನೀರೂ ಹರಿಯುತ್ತಿದೆ. ಇದೇ ಕಾಲುವೆಯಲ್ಲಿ ಗ್ರಾಮಸ್ಥರಿಗೆ ನೀರು ಒದಗಿಸುವುದಕ್ಕಾಗಿ ಹತ್ತು ಮೀಟರ್‌ ಅಂತರದಲ್ಲಿ ಮೂರು ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಅವುಗಳ ಕೇಸಿಂಗ್‌ ಪೈಪ್‌ ಭೂಮಿಯ ಮಟ್ಟದಲ್ಲೇ ಇದ್ದು, ಸುಲಭವಾಗಿ ಹೊರಗಿನ ನೀರು ಕೊಳವೆಬಾವಿಗೆ ಇಳಿಯುವಂತಿದೆ.

‘ಗ್ರಾಮದಲ್ಲಿ ಮುಡಾ ಒಳಚರಂಡಿ ಕಾಮಗಾರಿ ನಡೆಸಿದ್ದು, ಕಾಲುವೆಯ ಇನ್ನೊಂದು ಭಾಗದಲ್ಲಿರುವ ‘ಸಪ್ಟಿಕ್‌ ಟ್ಯಾಂಕ್‌’ಗೆ ಅದರ ಸಂಪರ್ಕ ನೀಡದೆ ಒಳಚರಂಡಿ ನೀರನ್ನೂ ಬಿಡಲಾಗುತ್ತಿದೆ. ಅದೇ ನೀರು ಕಾಲುವೆಯಲ್ಲಿ ಶೇಖರಣೆಯಾಗಿದ್ದು, ಮಳೆ ಬಂದಾಗ ಅಲ್ಲೇ ಇರುವ ಕೊಳವೆಬಾವಿಗೆ ಇಳಿದು, ಕುಡಿಯುವ ನೀರು ಕಲುಷಿತವಾಗಿದೆ’ ಎಂಬುದು ಗ್ರಾಮಸ್ಥರ ಆರೋಪ.

ಇಲ್ಲೇ ಮುಡಾ ಬಡಾವಣೆಯೊಂದು ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿಯ ವೇಳೆ ಕಾಲುವೆಗೆ ಮಣ್ಣು ಬಿದ್ದಿರುವುದರಿಂದ ಮಳೆ ನೀರು ಅಥವಾ ಯುಡಿಜಿಯ ನೀರು ಹರಿದು ಹೋಗದೆ, ಅಲ್ಲೇ ಶೇಖರಣೆಯಾಗುತ್ತಿದೆ. ಕಾಲುವೆ ಪಕ್ಕದಲ್ಲೇ ಕಲುಷಿತ ನೀರು ತುಂಬಿದ್ದ ಗುಂಡಿಯೊಂದಿದ್ದು, ಅದರ ಪಕ್ಕದಲ್ಲೇ ಕುಡಿಯುವ ನೀರಿನ ಕೊಳವೆಬಾವಿ ಇದೆ.

‘ಮೊದ್ಲ ಮಳೆಯಾದಾಗ ಒಂದು ವಾರ ನೀರು ಕೊಡ್ಸೋದು ನಿಲ್ಸಿದ್ರ. ಮತ್ತೆ ನೀರು ಬಿಡುವಾಗ ಮಣ್ಣು ಮಿಶ್ರಿತ ನೀರು ಬರುತ್ತಿತ್ತು. ಮೀನು ಸತ್ತಾಂಗ ವಾಸನೆ ಬರ್ತಿತ್ತು. ಮನೆಯ ಮುಂದೆ ನಾಲ್ಕೈದು ಬೀದಿಗೊಂದರಂತೆ ಟ್ಯಾಂಕ್‌ ಅಳವಡಿಸಿದ್ದಾರೆ. ಅದನ್ನು ಸ್ವಚ್ಛ ಮಾಡಿಲ್ಲಾ ಸಾರ್‌’ ಎಂದು ಗ್ರಾಮದ ಲಕ್ಷ್ಮಿ ಅಲವತ್ತುಕೊಂಡರು. ಗ್ರಾಮದಲ್ಲೂ ಚರಂಡಿ ವ್ಯವಸ್ಥೆಗಳು ಸರಿಯಿಲ್ಲದೆ ಅಲ್ಲಲ್ಲಿ ನೀರು ನಿಂತಿದೆ.

‘ಒಳಚರಂಡಿ ಕೆಲಸ ಅಪೂರ್ಣವಾಗಿರುವುದು, ಮಳೆನೀರು ಕಾಲುವೆಯಲ್ಲೇ ಕೊಳವೆಬಾವಿ ಕೊರೆದಿರುವುದು, ಮುಡಾ ಕಾಮಗಾರಿಯಿಂದಾಗಿ ಚರಂಡಿ ಮುಚ್ಚಿರುವುದರಿಂದ ಕಲುಷಿತ ನೀರು ಕೊಳವೆಬಾವಿ ಸೇರಿದೆ’ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಇವೆಲ್ಲ ಸಮಸ್ಯೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಗಂಭೀರ ಆರೋಪವೂ ಇದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಸೂಚಿಸಿದ್ದು, ಸಮಸ್ಯೆ ಪರಿಹಾರಕ್ಕಾಗಿ ಗ್ರಾಮಸ್ಥರು ಕಾಯುತ್ತಿದ್ದಾರೆ.

ಮಳೆನೀರು ಕಾಲುವೆಯಲ್ಲಿ ಕಲುಷಿತ ನೀರು ಶೇಖರಣೆಯಾಗಿರುವುದು
ಮಳೆನೀರು ಕಾಲುವೆಯಲ್ಲಿ ಕಲುಷಿತ ನೀರು ಶೇಖರಣೆಯಾಗಿರುವುದು
ಕೆ.ಸಾಲುಂಡಿ ಗ್ರಾಮದ ಮನೆಯೊಂದರ ಮುಂಭಾಗದ ಚರಂಡಿಯಲ್ಲಿ ನೀರು ನಿಂತಿರುವುದು
ಕೆ.ಸಾಲುಂಡಿ ಗ್ರಾಮದ ಮನೆಯೊಂದರ ಮುಂಭಾಗದ ಚರಂಡಿಯಲ್ಲಿ ನೀರು ನಿಂತಿರುವುದು
ಯುಡಿಜಿ ನೀರು ಚರಂಡಿಗೆ ಹರಿಬಿಟ್ಟಿರುವುದು
ಯುಡಿಜಿ ನೀರು ಚರಂಡಿಗೆ ಹರಿಬಿಟ್ಟಿರುವುದು
ಮಳೆ ನೀರಿನ ಚರಂಡಿಯಲ್ಲಿ ಕಲುಷಿತ ನೀರು ಯುಡಿಜಿ ಕಾರ್ಯ ಅಪೂರ್ಣ ಪ್ರಕರಣದ ಬಳಿಕ ಎಚ್ಚೆತ್ತ ಅಧಿಕಾರಿಗಳು
‘ಒಆರ್‌ಎಸ್‌ ನೀಡಿದ್ದರೆ ಬದುಕುತ್ತಿದ್ದ’
‘ವಾಂತಿ ಭೇದಿಯಿಂದ ಸುಸ್ತಾದ ಕನಕರಾಜುನನ್ನು ಸೋಮವಾರ ಬೆಳಗಿನ ಜಾವ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆ. ಅಲ್ಲಿ ಇಂಜೆಕ್ಷನ್‌ ಕೊಟ್ಟರು. ದಾಖಲಿಸಿಕೊಳ್ಳಲು ₹30 ಸಾವಿರ ಕೇಳಿದರು. ನಮ್ಮಲ್ಲಿ ಅಷ್ಟು ಹಣವಿಲ್ಲದೆ ವಾಪಸ್‌ ಕರೆತಂದೆವು. ಸಂಜೆಯಾಗುತ್ತಿದ್ದಂತೆ ವಿಪರೀತ ವಾಂತಿ ಭೇದಿಯಾಯಿತು. ಆಸ್ಪತ್ರೆಗೆ ಕರೆದೊಯ್ದರೂ ಬದುಕುಳಿಯಲಿಲ್ಲ’ ಎಂದು ಮೃತನ ಅಣ್ಣ ರವಿ ಕಣ್ಣೀರಾದರು. ‘ಊರಿನಲ್ಲಿ ಕಲುಷಿತ ನೀರಿನಿಂದ ಸಮಸ್ಯೆಯಾದ ಬಗ್ಗೆ ನಮಗೂ ಮಾಹಿತಿ ನೀಡಿದ್ದರೆ ತಮ್ಮ ಬದುಕುಳಿಯುತ್ತಿದ್ದ. ನಾವು ಸಾಮಾನ್ಯ ಭೇದಿ ಅಂದುಕೊಂಡೆವು. ಪಕ್ಕದ ಬೀದಿಯಲ್ಲಿ ಒಆರ್‌ಎಸ್‌ ನೀಡಿದ್ದರು. ನಮ್ಮ ಮನೆಗೆ ಅದೂ ಸಿಕ್ಕಿರಲಿಲ್ಲ’ ಎಂದು ದುಃಖಿಸಿದರು.
‘ಸಮಸ್ಯೆ ಮರುಕಳಿಸುವ ಸಾಧ್ಯತೆ’
‘ಕುಡಿಯುವ ನೀರಿಗಾಗಿ ಈಗ ಇರುವ ಕೊಳವೆಬಾವಿಯನ್ನೇ ಮತ್ತೆ ಬಳಸಿದರೆ ಸಮಸ್ಯೆ ಮರುಕಳಿಸುವ ಸಾಧ್ಯತೆಯಿದೆ. ಯುಡಿಜಿ ನೀರು ಸಪ್ಟಿಕ್‌ ಟ್ಯಾಂಕ್‌ಗೇ ಬೀಳುವಂತೆ ಮಾಡಬೇಕು. ಮಳೆ ನೀರು ಸರಾಗವಾಗಿ ಹಾದು ಹೋಗುವಂತೆ ಚರಂಡಿ ಸರಿಪಡಿಸಬೇಕು. ನೀರಿಗಾಗಿ ಪ್ರತ್ಯೇಕ ಕೊಳವೆಬಾವಿ ಕೊರೆಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT