ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮೃಗಾಲಯದ ಪ್ರಾಣಿಗಳಿಗೆ ‘ಬೇಸಿಗೆ ಭಾಗ್ಯ’

ಕೃತಕ ಮಳೆ, ಕೆಸರು ಹೊಂಡಗಳ ನಿರ್ಮಾಣ; ತಾಜಾ ಹಣ್ಣುಗಳು, ಒಆರ್‌ಎಸ್‌ ಮಿಶ್ರಿತ ನೀರಿನ ಪೂರೈಕೆ
Published 20 ಏಪ್ರಿಲ್ 2024, 5:24 IST
Last Updated 20 ಏಪ್ರಿಲ್ 2024, 5:24 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿ ಹಿಂದೆಂದೂ ಕಂಡರಿಯದ ಬಿರು ಬೇಸಿಗೆಯಲ್ಲಿ ನಲುಗುತ್ತಿದ್ದರೆ, ನಗರದ ಹೃದಯ ಭಾಗದಲ್ಲಿರುವ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳು ಮಾತ್ರ ತಂಪಾಗಿ ಕಾಲ ಕಳೆಯುತ್ತಿವೆ. ತಣ್ಣನೆಯ ನೀರಿನಲ್ಲಿ ಮೀಯುತ್ತ, ತಾಜಾ ಹಣ್ಣು–ತರಕಾರಿ ಸೇವಿಸುತ್ತ ದಣಿವಾರಿಸಿಕೊಳ್ಳುತ್ತಿವೆ.

ಈ ವರ್ಷ ಏಪ್ರಿಲ್‌ನಲ್ಲೇ ನಗರದ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಬೇಸಿಗೆಯ ಈ ಸಮಯದಲ್ಲಿ ಪ್ರಾಣಿ–ಪಕ್ಷಿಗಳ ಆರೋಗ್ಯ ಕಾಪಾಡಲೆಂದು ಮೃಗಾಲಯವು ಹಲವು ಕಾರ್ಯಗಳನ್ನು ಕೈಗೊಂಡಿದೆ.

ಸ್ಪ್ರಿಂಕ್ಲರ್‌ಗಳನ್ನು ಬಳಸಿ ಪ್ರಾಣಿಗಳಿಗೆ ಅಲ್ಲಲ್ಲಿ ತುಂತುರು ನೀರಿನ ವ್ಯವಸ್ಥೆ ಮಾಡಲಾಗಿದ್ದು, ದಿನಕ್ಕೆ ಮೂರು ಹೊತ್ತು ನೀರು ಪೂರೈಸಲಾಗುತ್ತಿದೆ. ಮಳೆ ಹನಿಯ ರೀತಿ ಸುರಿಯುವ ನೀರಿನಲ್ಲಿ ವನಮೃಗಗಳ ಚಿನ್ನಾಟ ನೋಡುಗರಿಗೆ ಮುದ ನೀಡುವಂತಿದೆ. ಜಿರಾಫೆ ಮೊದಲಾದ ಪ್ರಾಣಿಗಳಿಗೆ ಎತ್ತರದಿಂದ ನೀರು ಬೀಳುವ ವ್ಯವಸ್ಥೆ ಇದ್ದರೆ, ಹುಲಿ, ಸಿಂಹ, ಚಿರತೆ, ಕಾಡೆಮ್ಮೆಯ ಮನೆಗಳಿಗೆ ಕೃತಕ ಮಳೆ ವ್ಯವಸ್ಥೆ ಮಾಡಲಾಗಿದೆ. ಆನೆಗಳಿಗೆಂದೇ ವಿಶೇಷ ‘ಶವರ್’ ವ್ಯವಸ್ಥೆ ಇದ್ದು, ನಿತ್ಯ ತಣ್ಣೀರಿನ ಮಜ್ಜನವಾಗುತ್ತಿದೆ. ಇದರಿಂದಾಗಿ ಪ್ರಾಣಿಗಳ ದೇಹದ ಉಷ್ಣತೆಯನ್ನು ಸಮ ಪ್ರಮಾಣದಲ್ಲಿ ಇಡಲು ಸಾಧ್ಯವಾಗಿದೆ ಎನ್ನುತ್ತಾರೆ ಮೃಗಾಲಯದ ಅಧಿಕಾರಿಗಳು.

ಬಹುತೇಕ ಪ್ರಾಣಿಗಳು ಬೇಸಿಗೆಯಲ್ಲಿ ನೀರು ಹಾಗೂ ತಣ್ಣನೆಯ ವಾತಾವರಣದಲ್ಲಿ ಹೆಚ್ಚು ಕಾಲ ಕಳೆಯಲು ಇಷ್ಟ ಪಡುತ್ತವೆ. ಈ ಕಾರಣಕ್ಕೆ ಅನೇಕ ಕಡೆಗಳಲ್ಲಿ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕೆಸರಿನ ಹೊಂಡಗಳೂ ಇದ್ದು, ಪ್ರಾಣಿಗಳನ್ನು ಚಟುವಟಿಕೆಯಿಂದ ಇಡಲು ಸಾಧ್ಯವಾಗಿದೆ.

‘ವಿಶೇಷವಾಗಿ ನೀರಿನಲ್ಲಿ ಅದ್ದಿದ ಗೋಣಿಚೀಲಗಳನ್ನು ಕರಡಿ, ಚಿಂಪಾಂಜಿ ಮೊದಲಾದ ಪ್ರಾಣಿಗಳಿಗೆ ನೀಡಲಾಗುತ್ತಿದೆ. ಪ್ರಾಣಿಗಳು ಗೋಣಿಚೀಲವನ್ನು ಮೈಮೇಲೆ ಹೊದ್ದು ತಣ್ಣಗೆ ಮಲಗುತ್ತಿವೆ. ಕೆಸರಿನ ಹೊಂಡಗಳಲ್ಲಿ ವಿಹರಿಸುತ್ತಿವೆ’ ಎನ್ನುತ್ತಾರೆ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್‌ ಕುಮಾರ್.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದ್ದು, ಪ್ರಾಣಿಗಳ ಜೊತೆಜೊತೆಗೆ ಪ್ರವಾಸಿಗರಿಗೂ ನೆರಳು ಸೇರಿದಂತೆ ವಿವಿಧ ಸೌಕರ್ಯಗಳನ್ನು ಮೃಗಾಲಯವು ಕಲ್ಪಿಸಿದೆ.

ಕರಡಿಯೊಂದು ನೀರಿನಲ್ಲಿ ಮೀಯುತ್ತ ಖರಬೂಜ ಸೇವಿಸಿ ದೇಹ ತಂಪಾಗಿಸಿಕೊಂಡ ಬಗೆ –ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ.
ಕರಡಿಯೊಂದು ನೀರಿನಲ್ಲಿ ಮೀಯುತ್ತ ಖರಬೂಜ ಸೇವಿಸಿ ದೇಹ ತಂಪಾಗಿಸಿಕೊಂಡ ಬಗೆ –ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ.
ಪ್ರಾಣಿಗಳ ದೇಹದ ಉಷ್ಣಾಂಶ ಕಾಪಾಡಲು ತುಂತುರು ನೀರಿನ ವ್ಯವಸ್ಥೆ ಮಾಡಲಾಗಿದೆ. ಒಆರ್‌ಎಸ್‌ ಎಳನೀರಿನ ಜೊತೆಗೆ ತಾಜಾ ಹಣ್ಣುಗಳನ್ನು ಪೂರೈಸಲಾಗುತ್ತಿದೆ.
–ಡಿ.ಮಹೇಶ್‌ ಕುಮಾರ್ ಕಾರ್ಯ ನಿರ್ವಾಹಕ ನಿರ್ದೇಶಕ ಚಾಮರಾಜೇಂದ್ರ ಮೃಗಾಲಯ
ಆಹಾರದಲ್ಲೂ ಆರೈಕೆ
ಬೇಸಿಗೆ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀಡುವ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಪ್ರಾಣಿ– ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಹೆಚ್ಚು ಮಾಡುವ ಪದಾರ್ಥಗಳನ್ನೇ ಆಹಾರವಾಗಿ ನೀಡಲಾಗುತ್ತಿದೆ. ಬಿಸಿಲಿನಿಂದ ಉಂಟಾಗುವ ಬಳಲಿಕೆ ತಪ್ಪಿಸಲೆಂದೇ ಪ್ರಾಣಿಗಳಿಗೆ ಈ ಬಾರಿ ಒಆರ್‌ಎಸ್‌ ದ್ರಾವಣ ಸಹ ನೀಡಲಾಗುತ್ತಿದೆ. ಪ್ರಾಣಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಇಂತಿಷ್ಟು ಪ್ರಮಾಣದಲ್ಲಿ ನೀರಿನೊಂದಿಗೆ ಇದನ್ನು ನೀಡಲಾಗುತ್ತಿದೆ. ಜೊತೆಗೆ ಚಿಂಪಾಂಜಿ ಮೊದಲಾದ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ಎಳನೀರು ಸಹ ದೊರೆಯುತ್ತಿದೆ. ಇದರೊಟ್ಟಿಗೆ ಹಿಮಕರಡಿ ಮೊದಲಾದವುಗಳಿಗೆ ದೊಡ್ಡ ಗಾತ್ರದ ಐಸ್‌ಕ್ಯೂಬ್‌ಗಳನ್ನೂ ಇಡಲಾಗುತ್ತಿದ್ದು ಇದನ್ನು ಇಷ್ಟಪಟ್ಟು ಬಳಸುತ್ತಿವೆ. ಕಲ್ಲಂಗಡಿ ಖರಬೂಜ ಮೂಸಂಬಿ ಬಾಳೆಹಣ್ಣು ದ್ರಾಕ್ಷಿ ದಾಳಿಂಬೆ ಕಿತ್ತಳೆ ಹಣ್ಣುಗಳನ್ನು ಪ್ರಾಣಿಗಳು ಇಷ್ಟಪಟ್ಟು ತಿನ್ನತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT