ಭಾನುವಾರ, ಜನವರಿ 19, 2020
28 °C

ಸಂಗಮೇಶ ಬದಾಮಿಗೆ ನಾಟಕಅಕಾಡೆಮಿಯ ರಂಗ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದ ಕೋರ್ಟ್‌ ಕಾಲೊನಿ ನಿವಾಸಿ ಸಂಗಮೇಶ ಬದಾಮಿ ಅವರಿಗೆ ನಾಟಕ ಅಕಾಡೆಮಿಯ 2019–20ನೇ ಸಾಲಿನ ರಂಗ ಪ್ರಶಸ್ತಿ ಲಭಿಸಿದೆ.

40 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಕವಿತಾ ಲಂಕೇಶರ ‘ಅಲೆಮಾರಿ’, ದೊರೆ ಭಗವಾನ ನಿರ್ದೇಶನದ ‘ಬಸವಣ್ಣ’, ಟಿ.ಎಸ್.ರಂಗಾ ನಿರ್ದೇಶನದ ‘ಬರದನಾಡಿನ ಧ್ರುವತಾರೆ’ (ಸಾಕ್ಷ್ಯಚಿತ್ರ)ಯಲ್ಲಿ ಅಭಿನಯಿಸಿದ್ದಾರೆ.

ನಟ, ರಂಗ ನಿರ್ದೇಶಕ, ಬೀದಿ ನಾಟಕಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ಮೊದಲ ಹೆಜ್ಜೆ’ ಕವನ ಸಂಕಲನ, ‘ಕಥಾ ಸ್ಪಂದನ’, ‘ನ್ಯಾಯ ಸಂದೇಶ’, ‘ಸಹಕಾರ ಸಾಧನ’ (ಸಂಪಾದಿತ ಕೃತಿಗಳು) ಕೃತಿಗಳನ್ನು ರಚಿಸಿದ್ದಾರೆ. ಪುಣೆ, ಮುಂಬಯಿ, ನವದೆಹಲಿ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.

1952ರ ಜೂನ್ 1ರಂದು ಜನಿಸಿರುವ ಸಂಗಮೇಶ ಬದಾಮಿ ಅವರು ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇವರಿಗೆ ‘ಸಿಜಿಕೆ ಪ್ರಶಸ್ತಿ’, ‘ಹೊಯ್ಸಳ ಪ್ರಶಸ್ತಿ’, ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

‘40 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಮೊದಲೇ ಪ್ರಶಸ್ತಿ ಸಿಗಬೇಕಿತ್ತು. ಈಗಳಾದರೂ ಅಕಾಡೆಮಿಯವರು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿಯಾಗಿದೆ. ನಗರದಲ್ಲಿ ಇನ್ನೊಂದು ರಂಗಮಂದಿರ ಹಾಗೂ ಜಿಲ್ಲೆಯಲ್ಲಿ ಒಂದು ಕಲಾ ಗ್ರಾಮವನ್ನು ನಿರ್ಮಿಸಬೇಕು’ ಎಂದು ಸಂಗಮೇಶ ಬದಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು