ಶನಿವಾರ, ಜನವರಿ 25, 2020
29 °C

ಮುಂದಿನ ಬಜೆಟ್‌ನಲ್ಲಿ ಸಾವಯವ ಕೃಷಿಗೆ ಒತ್ತು: ಬಿ. ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೃಷಿ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ, ಲಾಭದಾಯಕ ಕ್ಷೇತ್ರವಾಗಿಸಲಾಗುವುದು. ಆ ಮೂಲಕ ನಗರದತ್ತ ಮುಖ ಮಾಡಿರುವ ಯುವ ಪಡೆಯನ್ನು ಮತ್ತೆ ಸೆಳೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

ಸಾಗರ ರಸ್ತೆಯ ಪ್ರೇರಣಾ ಸಭಾಂಗಣದಲ್ಲಿ ಸೋಮವಾರ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘ ಹಮ್ಮಿಕೊಂಡಿದ್ದ ಸುಭಿಕ್ಷಾ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಕ್ಷೇತ್ರ ಲಾಭದಾಯಕವಾಗಲು ನೀರಾವರಿ ಕ್ಷೇತ್ರಗಳ ವಿಸ್ತರಣೆಗೆ ಆದ್ಯತೆ ನೀಡಬೇಕು. ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಸಾಕಷ್ಟು ಉತ್ತೇಜನ ಕಾರ್ಯಕ್ರಮಗಳನ್ನು ರೂಪಿಸಬೇಕು. ಆಗ ರೈತರ ಬದುಕು ಹಸನಾಗುತ್ತದೆ. ಯುವಕರು ಕೃಷಿಯತ್ತ ಒಲವು ತೋರುತ್ತಾರೆ ಎಂದರು. 

ಮುಂದಿನ ಬಜೆಟ್‌ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರಸ್ತುತ ರಾಜ್ಯದಲ್ಲಿ 50 ಸಾವಿರ ಕುಟುಂಬಗಳು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿವೆ. ರಾಸಾಯನಿಕ ಬಳಕೆ ತಗ್ಗಿಸಬೇಕು. ಅವೈಜ್ಞಾನಿಕ ಸಾಗುವಳಿಕೆ ಕಡಿವಾಣ ಹಾಕಬೇಕು. ಸಾವಯವ ಕೃಷಿಕರ ಸಂಖ್ಯೆ 5 ಲಕ್ಷ ದಾಟಬೇಕು. ಸಾವಯವ ಕೃಷಿ ಆಯೋಗ, ಸುಭಿಕ್ಷಾ ಈ ಸಾಧನೆಯ ಸಾಕಾರಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಲ್ಲಿ ಈಗಾಗಲೇ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ ₨ 6 ಸಾವಿರ ನೀಡುತ್ತಿದೆ. ಜತೆಗೆ, ರಾಜ್ಯ ಸರಕಾರವೂ ಹೆಚ್ಚುವರಿಯಾಗಿ ₨ 4 ಸಾವಿರ ಆರ್ಥಿಕ ಸಹಾಯ ಒದಗಿಸುತ್ತಿದೆ. ಅದಕ್ಕಾಗಿ ₨ 2,200 ಕೋಟಿ ಅನುದಾನ ನಿಗದಿಪಡಿಸಿದೆ. ಹಲವು ಉತ್ತೇಜನ ಯೋಜನೆ ಜಾರಿಗೊಳಿಸಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಿಂಚಾಯಿ,  ಪ್ರಧಾನಮಂತ್ರಿ ಕೃಷಿ ಫಸಲ್ ಭಿಮಾ ಯೋಜನೆ, ಮಣ್ಣು ಆರೋಗ್ಯ ಚೀಟಿ ವಿತರಣೆ ಯೋಜನೆ, ಸಂಸದ ಆದರ್ಶ ಗ್ರಾಮ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಜಾನುವಾರು ವಿಮಾ ಯೋಜನೆ, ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆ, ಸೂಕ್ಷ್ಮ ನೀರಾವರಿ ನಿಧಿ, ಜಲಶಕ್ತಿ ಯೋಜನೆಗಳನ್ನು ರೈತರ ಅನುಕೂಲಕ್ಕಾಗಿ ಕಾರ್ಯರೂಪಕ್ಕೆ ತರಲಾಗಿದೆಎಂದು ವಿವರ ನೀಡಿದರು.

ಪ್ರಧಾನಮಂತ್ರಿ ಆಶಯದಂತೆ 2,022 ಒಳಗೆ ರೈತರ ಕೃಷಿ ಆದಾಯ ದ್ವಿಗುಣಗೊಳ್ಳಬೇಕು. ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಸುಧಾರಿತ ಕೃಷಿ ತಂತ್ರಜ್ಞಾನ ಮತ್ತು ಕೃಷಿ ಪೂರಕ ಚಟುವಟಿಕೆ ಅಳವಡಿಸಿಕೊಳ್ಳಬೇಕು. ಲಾಭದಾಯಕ ಕೃಷಿಯಾಗಿಸಲು ಪಣ ತೊಡಬೇಕು. ಪ್ರತಿ ತಿಂಗಳು ಒಂದು ತಾಲ್ಲೂಕಿನಲ್ಲಿ ರೈತ ಸಮಾವೇಶ ನಡೆಸುವ ಮೂಲಕ ಪ್ರೋತ್ಸಾಹ ನೀಡಲಾಗುವುದು ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಸಾವಯವ ಕೃಷಿ ವಿಷಯ ರಹಿತ ಆಹಾರ ನೀಡುತ್ತದೆ. ಮನುಷ್ಯ ಸತ್ತರೆ ಮಣ್ಣಿಗೆ ಹೋಗುತ್ತಾನೆ. ಮಣ್ಣ ಸತ್ತರೆ ಬದುಕು ಅಸಾಧ್ಯ. ಅದಕ್ಕಾಗಿ ವಿಷಯುಕ್ತ ರಾಸಾಯನಿಕ ಕೃಷಿಗೆ ತಿಲಾಂಜಲಿ ಹೇಳಬೇಕು. ಅಮೃತ ನೀಡುವ ಸಾವಯವ ಕೃಷಿಗೆ ರೈತರು ಒಲವು ತೋರಬೇಕು ಎಂದು ಸಲಹೆ ನೀಡಿದರು.

ರೋಗಮುಕ್ತ ಸಮಾಜ ನಿರ್ಮಾಣವೇ ರೈತರ ಉದ್ಧೇಶವಾಗಬೇಕು. ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಶೇ 30ರಷ್ಟು ಜನರು ಕ್ಯಾನ್ಸರ್ ರೋಗಪೀಡಿತರಾಗಿದ್ದಾರೆ. ರಾಸಾಯನಿಕಯುಕ್ತ, ಔಷಧ ಸಿಂಪಡಣೆ, ಆಹಾರಗಳ ಬಳಕೆಯೇ ಪ್ರಮುಖ ಕಾರಣ.  ಅವೈಜ್ಞಾನಿಕ ಆಹಾರ ಪದ್ಧತಿಯ ಕಾರಣ ಹಲವು ಗಂಭೀರ ಸ್ವರೂಪದ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಹಾಗಾಗಿ, ರೈತರು ಸಾವಯವ ಕೃಷಿಯತ್ತ ಮುಖಮಾಡಿದ್ದಾರೆ. ಅತಿಯಾದ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆರೋಗ ಬಿದ್ದಿದೆ.  ಸರ್ಕಾರ ನೊಂದ ರೈತರ ನೆರವಿಗೆ ಧಾವಿಸಲಿದೆ ಎಂದರು.

ಸುಭಿಕ್ಷಾ ಅಧ್ಯಕ್ಷ ಅ.ಶ್ರೀ.ಆನಂದ್ ಪ್ರಸ್ತಾವಿಕ ಮಾತನಾಡಿದರು. ಸಾವಯವ ಕೃಷಿ ಸಾಧಕರಾದ ಲಕ್ಷ್ಮವ್ವ ಹೊಸಮನಿ, ಈರಪ್ಪ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಆರಗ ಜ್ಞಾನೇಂದ್ರ, ಕೆ.ಬಿ.ಅಶೋಕನಾಯ್ಕ, ಎಸ್.ರುದ್ರೇಗೌಡ, ಸಾವಯವ ಕೃಷಿ ಪರಿವಾರದ ಅಧ್ಯಕ್ಷ ಎನ್.ನಂಜುಂಡಪ್ಪ, ಆರ್‌ಎಸ್‌ಎಸ್ ಮುಖಂಡ ಫಟ್ಟಾಭಿರಾಮ್ ಉಪಸ್ಥಿತರಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು