ಮಂಗಳವಾರ, ಮೇ 26, 2020
27 °C

ಸಾಮ್ರಾಟರಿಗೆ ಆರಾಧ್ಯ ದೈವ ತಾಳಗುಂದದ ಪ್ರಣವೇಶ್ವರ

ಎಂ.ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ಇಲ್ಲಿನ ತಾಳಗುಂದದ ಪ್ರಣವೇಶ್ವರ ದೇವಾಲಯ ಹಲವು ವಿಶೇಷತೆಗಳನ್ನು ಹೊಂದಿದೆ. ಸುಸ್ಥಿರ ಆಡಳಿತ, ಸುಭದ್ರ ಸರ್ಕಾರಗಳನ್ನು ನೀಡಿದ ಹಲವು ರಾಜ ಮನೆತನಗಳು ಎರಡು ಸಾವಿರ ವರ್ಷಗಳ ಹಿಂದಿನಿಂದಲೂ ಪ್ರಣವೇಶ್ವರನನ್ನು ಆರಾಧನೆ ಮಾಡುತ್ತಾ ಬಂದಿವೆ.

ಈ ಬಗ್ಗೆ ಹಲವು ಶಾಸನಗಳಲ್ಲಿ ಉಲ್ಲೇಖವಿದೆ. ಪ್ರಾಚೀನ ಇತಿಹಾಸ, ಪುರಾತನ ಪರಂಪರೆ, ಅನಾದಿ ಕಾಲದ ಧಾರ್ಮಿಕ ಆಚರಣೆ ಸೇರಿ ಶಿಕ್ಷಣ ಜ್ಞಾನವನ್ನು ಜಗತ್ತಿಗೆ ಪಸರಿಸಿದ ಐತಿಹಾಸಿಕ ತಾಣ ತಾಳಗುಂದ ಗ್ರಾಮ. ಪಟ್ಟಣದಿಂದ 7 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಕನ್ನಡ ನಾಡಿನ ಮೂಲ ಬೇರುಗಳನ್ನು ಕಾಣಬಹುದು.

ಗ್ರಾಮದ ಹೊರವಲಯದಲ್ಲಿರುವ ಪ್ರಣವಲಿಂಗೇಶ್ವರ ದೇವಸ್ಥಾನದಲ್ಲಿನ ಶಿವಲಿಂಗಕ್ಕೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಈ ದೇವಸ್ಥಾನವನ್ನು ಪುರಾಣದಲ್ಲಿನ ಹಿರಣ್ಯಗರ್ಭಬ್ರಹ್ಮ ಎಂಬುವವನು ಪ್ರತಿಷ್ಠಾಪಿಸಿದ್ದಾನೆ. ಈ ಶಿವ ದೇವಾಲಯ ನಾಡನ್ನು ಆಳಿದ ಆಳರಸರನ್ನು ತನ್ನತ್ತ ಸೆಳೆದಿದೆ. 

ಈ ದೇವಾಲಯದ ಮುಂದಿನ ಸ್ತಂಭ ಶಾಸನದ ಪ್ರಕಾರ ಈ ದೇವರನ್ನು 2 ನೇ ಶತಮಾನದಲ್ಲಿ ಬನವಾಸಿಯ ಶಾತಕರ್ಣಿಯ ಅರಸರು ಆರಾಧಿಸಿದ ಬಗ್ಗೆ ಉಲ್ಲೇಖವಿದೆ. ನಂತರದ ದಿನಗಳಲ್ಲಿ ಕನ್ನಡ ಮೊದಲ ಸಾಮ್ರಾಜ್ಯವಾದ ಕದಂಬ ಕುಲದ ಸ್ಥಾಪಕ ಮಯೂರ ವರ್ಮನ ಆರಾಧ್ಯ ದೈವವೂ ಇದೇ ಪ್ರಣವಲಿಂಗ. ಈ ದೇವಸ್ಥಾನದ ಆವರಣದಲ್ಲಿನ ಅಗ್ರಹಾರದಲ್ಲಿಯೇ ಮಯೂರ ವರ್ಮನ ಶೈಕ್ಷಣಿಕ ಅಧ್ಯಯನವಾಗಿತ್ತು. ಈ ದೇವರ ಪ್ರೇರಣೆಯಿಂದಲೇ ಕನ್ನಡದ ಮೊದಲ ಸಾಮ್ರಾಜ್ಯ ಸ್ಥಾಪನೆಯಾಯಿತು ಎನ್ನುವುದಕ್ಕೆ ಪೂರಕವಾದ ಅಂಶಗಳನ್ನು ಇಲ್ಲಿ ಕಾಣಬಹುದು.

ಇದೇ ಪ್ರಾಂಗಣದಲ್ಲಿ ದೊರಕುವ ಇನ್ನೊಂದು ಶಾಸನದ ಪ್ರಕಾರ ಮಯೂರ ತನ್ನ ಸಾಮ್ರಾಜ್ಯ ವಿಸ್ತರಿಸಲು ಹಲವಾರು ಅಶ್ವಮೇಧ ಯಾಗಗಳನ್ನು ಇಲ್ಲಿಂದಲೇ ಆರಂಭಿಸಿ ಯಾಗ ಪೂರ್ಣಗೊಂಡ ನಂತರ ಬ್ರಾಹ್ಮಣರಿಗೆ 144 ಹಳ್ಳಿಗಳನ್ನು ದಾನ ಮಾಡುತ್ತಾನೆ. ಈ ನೆಲದಲ್ಲಿ ಸಾಮ್ರಾಜ್ಯ ವಿಸ್ತರಣೆಗಾಗಿ ಪ್ರಾಚೀನ ಕಾಲದಿಂದಲೂ ಕೂಡ ಮಹಾಯಜ್ಞಗಳು ಇಲ್ಲಿ ನಡೆಯುತ್ತಿದ್ದವು ಎಂಬ ಉಲ್ಲೇಖವಿದೆ.

ಮಯೂರ ವರ್ಮನ ನಂತರ ಕಾಕುತ್ಸ ವರ್ಮ, ಶಾಂತಿವರ್ಮ ಕೂಡ ಪ್ರಣವೇಶ್ವರನ ಆರಾಧಕರು. ಮೃಗೇಶ ವರ್ಮ ತನ್ನ ಮಗಳಾದ ಪ್ರಭಾವತಿಯನ್ನು ಭಟಾರಿಕುಲದ ಕಾಕುತ್ಸ ಎಂಬ ರಾಜನ ಜೊತೆಗೆ ವಿವಾಹ ಮಾಡುತ್ತಾನೆ. ಅವರ ಮಗ ಪಶುಪತಿ ಮಹಾಪರಾಕ್ರಮಿ ಆಗಿದ್ದು, ಹಲವಾರು ಯುದ್ಧಗಳಲ್ಲಿ ವಿಜಯಶಾಲಿಯಾಗಿದ್ದ. ಅವನ ಪರಾಕ್ರಮದ ವಿಜಯ ಪಥ ಹಾಳಾಗದಿರಲಿ ಎಂದು ತಾಯಿ ಪ್ರಭಾವತಿ ಮಗನನ್ನು ತಾಳಗುಂದಕ್ಕೆ ಕರೆತಂದು ಪ್ರಣವೇಶ್ವರನ ಆರಾಧನೆ ಮಾಡಲು ಪ್ರೇರೆಪಿಸುತ್ತಾಳೆ. ಆತನು ದೇವಾಲಯಕ್ಕೆ ವಿವಿಧ ದಾನಗಳನ್ನು ನೀಡಿದ ಬಗ್ಗೆ ಗರ್ಭಗುಡಿಯ ಭಾಗಿಲು ವಾಡಿಯ ಮೇಲಿನ ಬರಹಗಳು ಬೆಳಕು ಚೆಲ್ಲುತ್ತವೆ.

ಹೊಯ್ಸಳರ ದೊರೆ ಬಲ್ಲಾಳನು ತಾಳಗುಂದದಲ್ಲಿ ಹಲವು ದಿನ ಸೈನ್ಯದೊಂದಿಗೆ ಉಳಿದು ಪ್ರಣವೇಶ್ವರನ ಆರಾಧನೆ ಮಾಡಿದ ಬಗ್ಗೆ ಚಿಕ್ಕಮಾಗಡಿ ಶಾಸನ ತಿಳಿಸುತ್ತದೆ. ಬಿಜ್ಜಳನ ಅವಧಿಯಲ್ಲಿ ಬನವಾಸಿ 12 ಸಾವಿರ ಗ್ರಾಮಗಳನ್ನು ಆಳುತ್ತಿದ್ದ ಕೇಶವ ದಂಡನಾಯಕನು ತನ್ನ ಪ್ರಜೆಗಳ ಹಿತಕ್ಕಾಗಿ ವಿದ್ಯಾದಾನ, ಭೂದಾನ ಹಾಗೂ ಅನ್ನದಾಸೋಹ ಮಾಡುತ್ತಾನೆ. ಈ ವೇಳೆಯಲ್ಲಿ ಅನೇಕ ಮಂತ್ರಿಗಳು, ಮಹಾದಂಡನಾಯಕರು ದಾನ ನೀಡುತ್ತಾರೆ. ಅವರಲ್ಲಿ ಸೋಮದೇವನು ಆಗ ಕೇವಲ ಗಾವುಂಡನಾಗಿರುತ್ತಾನೆ. ಅವನು ತನ್ನನ್ನು ‘ಪ್ರಣವೇಶ್ವರ ದೇವರ ಪಾದಪದ್ಮಾರಕ’ ಎಂದು ಕರೆದುಕೊಂಡಿದ್ದಾನೆ. ಇದಾದ ಕೆಲವೇ ವರ್ಷಗಳಲ್ಲಿ ಆತನೂ ಬನವಾಸಿಯ ಮಹಾದಂಡನಾಯಕನಾಗಿ ಮೆರೆಯುತ್ತಾನೆ ಎಂದೂ ಶಾಸನಗಳು ಉಲ್ಲೇಖಿಸಿವೆ.

2 ನೇ ಶತಮಾನದಿಂದ 12ನೇ ಶತಮಾನದವರೆಗೆ ಸುಮಾರು ಒಂದು ಸಾವಿರ ವರ್ಷಗಳವರೆಗೆ ಕದಂಬರು, ಹೊಯ್ಸಳರು, ಬಿಜ್ಜಳರು, ಭಟಾರಿಗಳು ಸೇರಿ ಅನೇಕ ರಾಜರು, ದಂಡನಾಯಕರು, ತಮ್ಮ ರಾಜ್ಯದ ಜನರ ನೆಮ್ಮದಿಗೆ, ಉನ್ನತಸ್ಥಾನ ಪಡೆಯಲು, ಸಾಮ್ರಾಜ್ಯ ಕಟ್ಟಲು, ವಿಸ್ತರಿಸಲು, ಯುದ್ಧಗಳನ್ನು ಗೆಲ್ಲಲು ಪ್ರಣವೇಶ್ವರನನ್ನು ಆರಾಧಿಸಿದ ಬಗ್ಗೆ ದಾಖಲೆಗಳು ಲಭಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು