ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ ಶಿಕ್ಷಣದ ವಿದ್ಯಾರ್ಥಿಗಳಿಗೂ ಕೌಶಲ ತರಬೇತಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿದ್ಯಾಶಂಕರ್‌ ಹೇಳಿಕೆ
Last Updated 1 ಜುಲೈ 2019, 13:28 IST
ಅಕ್ಷರ ಗಾತ್ರ

ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅವರು ತೆಗೆದುಕೊಂಡ ವಿಷಯದ ಜತೆಗೆ, ಪೂರಕ ಕೌಶಲ ತರಬೇತಿಯನ್ನೂ ನೀಡಿ, ಅವರಿಗೆ ಉದ್ಯೋಗ ದೊರಕಿಸಲು ಯೋಜನೆ ರೂಪಿಸಲಾಗಿದೆ ಎಂದು ಕುಲಪತಿ ಡಾ.ಎಸ್.ವಿದ್ಯಾಶಂಕರ್‌ ಹೇಳಿದರು.

ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸುವ ಸಲುವಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ‘ಪ್ಲೇಸ್‌ಮೆಂಟ್‌ ವಿಭಾಗ’ ತೆರೆಯಲಾಗಿದೆ. ದೂರ ಶಿಕ್ಷಣದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಘಟಕ ರಚನೆ ಮಾಡಲಾಗಿದೆ. ಈ ವಿಭಾಗಕ್ಕೆ ಪ್ರತ್ಯೇಕ ಅಧಿಕಾರಿ ನೇಮಿಸಲಾಗಿದೆ. ಆ ಮೂಲಕ ದೂರ ಶಿಕ್ಷಣದ ಪಡೆದವರೂ ಉತ್ತಮ ಉದ್ಯೋಗ ಪಡೆಯಬಹುದು ಎಂಬ ನಂಬಿಕೆ ಗಟ್ಟಿ ಮಾಡುತ್ತಿದ್ದೇವೆ. ಇದು ವಿಶ್ವವಿದ್ಯಾಲಯದ ಮೇಲಿನ ವಿಶ್ವಾಸವನ್ನೂ ಹೆಚ್ಚಿಸಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಡತ ವಿಲೇವಾರಿ ಸಪ್ತಾಹ: ಪರೀಕ್ಷಾ ವಿಭಾಗದ ಕೆಲಸಗಳು ತ್ವರಿತವಾಗಿ ನಡೆಯಲು, ನಿಗದಿತ ಸಮಯಕ್ಕೆ ಪರೀಕ್ಷೆಗಳು, ಮೌಲ್ಯಮಾಪನ ನಡೆದು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಸಿಗುವಂತೆ ಮಾಡಲು ವಾರಕ್ಕೆ ಒಮ್ಮೆ ಕಡತ ವಿಲೇವಾರಿ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಸ್ವತಃ ತಾವೇ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಅಹವಾಲು ತ್ವರಿತವಾಗಿ ಇತ್ಯರ್ಥ ಮಾಡುತ್ತಿದ್ದೇನೆಎಂದರು.

ಸಾಮಾನ್ಯ ಕಾಲೇಜುಗಳ ರೀತಿ ದೂರ ಶಿಕ್ಷಣದ ವಿದ್ಯಾರ್ಥಿಗಳಿಗೂ ಪಾಠ ಪ್ರವಚನ ನಡೆಸಲಾಗುತ್ತದೆ. ಶಿಕ್ಷಣ ಸಮೀಕರಣ ಯೋಜನೆ ಮೂಲಕ ಸೆಮಿಸ್ಟರ್‌ ಪದ್ಧತಿಯ ವ್ಯವಸ್ಥೆ ಮಾಡಲಾಗಿದೆ. ಯೂಟೂಬ್‌ ಮೂಲಕ ವಿಷಯ ಬೋಧನೆಯೂ ನಡೆಯುತ್ತಿದೆ ಎಂದು ವಿವರ ನೀಡಿದರು.

ಹಿಂದೆ ವಿಶ್ವವಿದ್ಯಾಲಯದ ಮೇಲೆ ಕೆಲವು ಆರೋಪಗಳಿದ್ದವು. ಯುಜಿಸಿ ನಿಯಮಕ್ಕೆ ವಿರುದ್ಧವಾಗಿ ತೆಗೆದುಕೊಂಡ ಕೆಲವು ನಿರ್ಣಯಗಳು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದ್ದವು. ಈಗ ಎಲ್ಲ ಆರೋಪಗಳಿಂದ ಮುಕ್ತವಾಗಿದೆ. ಫಲಿತಾಂಶ ವಿಳಂಬವಾಗುತ್ತಿಲ್ಲ. ಅಂಕಪಟ್ಟಿತ್ವರಿತವಾಗಿನೀಡುತ್ತಿದ್ದೇವೆ. ಕೆಲವು ಗೊಂದಲಗಳು ನಿವಾರಣೆಯಾಗಿವೆ. ವಿಶೇಷ ಯೋಜನೆಗಳ ಮೂಲಕ ಮತ್ತು ಹೊಸ ವಿಷಯಗಳನ್ನು ಪರಿಚಯಿಸುವ ಮೂಲಕ ತನ್ನದೇ ಗುಣಮಟ್ಟ ಕಾಯ್ದುಕೊಂಡು ಬರಲಾಗಿದೆ ಎಂದು ಮಾಹಿತಿ ನೀಡಿದರು.

2019-20ನೇ ಸಾಲಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಪ್ರಸಕ್ತ ವರ್ಷದ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನ. ₨ 200 ದಂಡಸಹಿತ ಆಗಸ್ಟ್ 21ರೊಳಗೆ ಅರ್ಜಿ ಸಲ್ಲಿಸಬಹುದು. ₨ 400 ದಂಡದೊಂದಿಗೆ ಆಗಸ್ಟ್ 31ರವರೆಗೆ ಅವಕಾಶವಿದೆ. ಬಿಎ, ಬಿ.ಕಾಂ, ಪದವಿ ಮತ್ತು ಉನ್ನತ ಶಿಕ್ಷಣ, ವಿವಿಧ ಡಿಪ್ಲೊಮಾ ವಿಷಯಗಳಿಗೆ ಯುಜಿಸಿ ಮಾನ್ಯತೆ ನೀಡಿದೆ. ಆನ್‌ಲೈನ್‌ ಮೂಲಕ ಹಾಗೂ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

ಯಾವುದೇ ಶಿಕ್ಷಣ ಪಡೆಯದವರು ವಯೋಮಿತಿಯ ಆಧಾರದಲ್ಲಿ ಪದವಿ ಮತ್ತು ಉನ್ನತ ಶಿಕ್ಷಣವ ಪಡೆಯಲು ಈಗ ಅವಕಾಶವಿಲ್ಲ. ಪಿಯು ತೇರ್ಗಡೆಯಾದರೆ ಮಾತ್ರ ಪದವಿಗೆ ಅವಕಾಶ. ಈ ನಿಯಮ ಪುನರ್ ಪರಿಶೀಲಿಸುವ ಅಗತ್ಯವಿದೆ. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ (9164467131), ದಾವಣಗೆರೆ (90085 40090) ಪ್ರಾದೇಶಿಕ ಕಚೇರಿ ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಪ್ರಾದೇಶಿಕ ಕಚೇರಿ ನಿರ್ದೇಶಕ ಎಚ್.ಎನ್.ಮೋಹನ್ ರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT