ಕಾಂಗ್ರೆಸ್‌–ಬಿಜೆಪಿ: ಆರೋಪ–ಪ್ರತ್ಯಾರೋಪದ ಪ್ರತಿಭಟನೆ

ಭಾನುವಾರ, ಜೂಲೈ 21, 2019
22 °C

ಕಾಂಗ್ರೆಸ್‌–ಬಿಜೆಪಿ: ಆರೋಪ–ಪ್ರತ್ಯಾರೋಪದ ಪ್ರತಿಭಟನೆ

Published:
Updated:
Prajavani

ಶಿವಮೊಗ್ಗ: ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಮಂಗಳವಾರ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡಿ, ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಪ್ರತಿಭಟನೆ: 

ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ. ಆ ಪಕ್ಷದ ಮುಖಂಡರು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಪ್ರಜಾಪ್ರಭುತ್ವವನ್ನೇ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ಕಾರಣ. ಪಕ್ಷದ ಮುಖಂಡರ ಕುಮ್ಮಕ್ಕಿನಿಂದ ಪ್ರಜಾಪ್ರಭುತ್ವ ವ್ಯವಸ್ಥೆಯೇ ದಾರಿತಪ್ಪುತ್ತಿದೆ. ಇದು ಅಸಂವಿಧಾನಿಕ ಕ್ರಿಯೆ. ಬಿಜೆಪಿಯ ಕುತಂತ್ರ ರಾಜಕಾರಣ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರ ಉರುಳಿಸುವ, ಅಧಿಕಾರದ ದಾಹಕ್ಕಾಗಿ ಹಪಹಪಿಸುವ ಬಿಜೆಪಿ ನೇರನೇರಾ ಯುದ್ಧ ಮಾಡದೆ ಹಿಂಬಾಗಿಲಿನಿಂದ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿದೆ. ಇಂತಹ ಮನೆಮುರುಕ ಕೆಲಸ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರ ವಿರುದ್ದ ಘೋಷಣೆ ಕೂಗುವ ಜತೆಗೆ, ಪಕ್ಷಕ್ಕೆ ದ್ರೋಹ ಬಗೆದು ರಾಜೀನಾಮೆ ನೀಡಿದ ಶಾಸಕರುಗಳಿಗೆ ದಿಕ್ಕಾರ ಕೂಗಿದರು. ಅವರ ಭಾವಚಿತ್ರಗಳಿಗೆ ಹಾರಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಎನ್.ರಮೇಶ್, ಇಸ್ಮಾಯಿಲ್ ಖಾನ್, ಅನಿತಾ ಕುಮಾರಿ, ವಿಜಯಲಕ್ಷ್ಮಿ ಪಾಟೀಲ್, ಚಂದ್ರಭೂಪಾಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಿಜೆಪಿ ಪ್ರತಿಭಟನೆ:

ಬಹುಮತ ಕಳೆದುಕೊಂಡಿರುವ ಸಮ್ಮಿಶ್ರ ಸರ್ಕಾರ ತಕ್ಷಣ ರಾಜೀನಾಮೆ ನೀಡಬೇಕು. ಖುರ್ಚಿ ಬಿಟ್ಟು ತೊಲಗಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸಮ್ಮಿಶ್ರ ಸರ್ಕಾರ ಸಂಖ್ಯಾಬಲ ಕಳೆದುಕೊಂಡಿದೆ. ಆದರೂ, ಮುಖ್ಯಮಂತ್ರಿ ಕುಮಾರಸ್ವಾಮಿ ಖರ್ಚಿಗೆ ಅಂಟಿಕೊಂಡಿದೆ. ತಕ್ಷಣ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಸಮ್ಮಿಶ್ರ ಸರ್ಕಾರ ಜನ ಹಾಗೂ ಶಾಸಕರ ಬೆಂಬಲ ಕಳೆದುಕೊಂಡಿದೆ. ಎರಡೂ ಪಕ್ಷದ ಶಾಸಕರಲ್ಲಿ ಅಸಮಾಧಾನ ಬುಗಿಲೆದ್ದಿದೆ. ಶಾಸಕರೇ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಇದರಲ್ಲಿ ಬಿಜೆಪಿ ಪಾತ್ರವಿಲ್ಲ ಎಂದರು.

ಒಂದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಗೆ ಗಮನ ನೀಡಿಲ್ಲ. ಬರ ತಾಂಡವವಾಡುತ್ತಿದ್ದರೂ ದೇವಸ್ಥಾನ ಭೇಟಿ , ರೆಸಾರ್ಟ ರಾಜಕೀಯ, ಮಗನ ಗೆಲುವಿಗೆ ಶತ ಪ್ರಯತ್ನ ಮಾಡಿದ್ದಾರೆ. ಕುಟುಂಬ ರಾಜಕಾರಣದ ಬಗ್ಗೆ ಯೋಚಿಸುವುದು ಬಿಟ್ಟು ಯಾವುದೇ ಶಾಸಕರ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಎಸ್.ದತ್ತಾತ್ರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ಮುಖಂಡರಾದ ಡಿ.ಎಸ್.ಅರುಣ್, ಲತಾಗಣೇಶ್, ಅನಿತಾರವಿಶಂಕರ್, ಸುನಿತಾ ಅಣ್ಣಪ್ಪ, ಸುರೇಖಾ ಮುರಳಿಧರ್, ನಾಗರಾಜ್, ಜ್ಯೋತಿಪ್ರಕಾಶ್, ಎನ್.ಜೆ.ರಾಜಶೇಖರ್, ಬಿಳಕಿ ಕೃಷ್ಣಮೂರ್ತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !