ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌: ಮಾವು ಮಾರಾಟ

ತೋಟದಿಂದಲೇ ವ್ಯಾಪಾರ ವಹಿವಾಟು ವಿಸ್ತರಣೆ ಮಾಡಿದ ರೈತ
Published 25 ಮೇ 2024, 23:30 IST
Last Updated 25 ಮೇ 2024, 23:30 IST
ಅಕ್ಷರ ಗಾತ್ರ

ರಾಯಚೂರು: ಮಾವು ಬೆಳೆಗಾರರನ್ನು ನೇರ ಮಾರುಕಟ್ಟೆಗೆ ಉತ್ತೇಜಿಸಲು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಭಿವೃದ್ಧಿಪಡಿಸಿದ ‘ಕರ್ ಸಿರಿ’ ಆನ್ ಲೈನ್ ತಂತ್ರಾಂಶದ ಮೂಲಕ ರಾಯಚೂರು ತಾಲ್ಲೂಕಿನ ಮಂಡಲಗೇರಾ ಗ್ರಾಮದ ರೈತ ಗುಡಿಪಾಡು ಆಂಜನೇಯ ಎರಡು ತಿಂಗಳಲ್ಲಿ ವಿವಿಧ ತಳಿಯ 1800 ಟನ್ ಮಾವು ಮಾರಾಟ ಮಾಡಿದ್ದಾರೆ

‘ಕರ್ ಸಿರಿ’ ಆನ್ ಲೈನ್ ತಂತ್ರಾಂಶ ಮೂಲಕ ಬಂಗನ್ ಪಲ್ಲಿ, ಮಲ್ಲಿಕಾ ಹಾಗೂ ಕೇಸರಿ ತಳಿಯ ಮಾವುಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಳೆದ ವಾರ ಬೆಂಗಳೂರಿನ ಜಯನಗರ, ಐಟಿ ಕಂಪನಿಯಿಂದ ವೈಟ್‌ಫೀಲ್ಡ್‌ನಲ್ಲಿ ನಡೆದ ಹಾಗೂ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮಾವು ಮೇಳಕ್ಕೂ ಮಾವಿನ ಹಣ್ಣು ಕಳಿಸಿದ್ದಾರೆ.

ಖಾಸಗಿ ಕಂಪನಿಗೆ ವಿದಾಯ:

ಮಂಡಲಗೇರಾದ ಗುಡಿಪಾಡು ಆಂಜನೇಯ ಡಿಪ್ಲೊಮಾ ಐಟಿ ವಿದ್ಯಾಭ್ಯಾಸ ಮಾಡಿ ಬೆಂಗಳೂರಿನಲ್ಲಿ ಏಳು ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ತಂದೆ–ತಾಯಿಯರಿಗೆ ಒಬ್ಬನೇ  ಪುತ್ರ ಹಾಗೂ ಕುಟುಂಬದ ಜವಾಬ್ದಾರಿ ಇವರ ಮೇಲೆ ಇರುವ ಕಾರಣ ಖಾಸಗಿ ಕಂಪನಿಯ ಕೆಲಸ ಬಿಟ್ಟು ಸ್ವಂತ ಜಮೀನಿನಲ್ಲಿ ವ್ಯವಸಾಯ ಮಾಡುವುದೇ ಲೇಸು ಎಂದು ನಿರ್ಧರಿಸಿ ಖಾಸಗಿ ಕಂಪನಿಗೆ ವಿದಾಯ ಹೇಳಿ ಕ ತೋಟಗಾರಿಕೆಯಲ್ಲಿ ತೊಡಗಿದ್ದಾರೆ.

‘ಹಿಂದೆ ಮೂಸಂಬಿ, ನಿಂಬೆ ಬೆಳೆದು ಆನ್ ಲೈನ್ ಮೂಲಕ ಬೆಂಗಳೂರಿಗೆ ಮಾರಾಟ ಮಾಡಿದ್ದೇನೆ. ಈ ವರ್ಷ ಮಾವು ಬೆಳೆದಿದ್ದು ಕರ್ ಸಿರಿ ಮೂಲಕ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದೆ. ಬಂಗನ್ ಪಲ್ಲಿ ಕೆ.ಜಿಗೆ ₹100, ಮಲ್ಲಿಕಾ ಹಾಗೂ ಕೇಸರಿ ₹120 ದರ ಇದೆ. ಕರ್ ಸಿರಿ ಮೂಲಕ ಕೊಲ್ಕತ್ತಾ, ಸಿಂಗಾಪುರಗೆ ಮಾವು ಕಳಿಸಿರುವೆ’ ಎಂದು ಆಂಜನೇಯ ಪ್ರಜಾವಾಣಿಗೆ ತಿಳಿಸಿದರು.

‘ಕೊಲ್ಕತ್ತಾದ ಗ್ರಾಹಕರೊಬ್ಬರು ನನ್ನ ಮಾವಿನ ರುಚಿಗೆ ಮಾರು ಹೋಗಿ ಕೂಲ್ ಕ್ಯಾನ್ ಉಡುಗೊರೆಯಾಗಿ ನೀಡಿದ್ದಾರೆ. ಶೇ 99 ರಷ್ಟು ಮಾವುಗಳು ಹಣ್ಣಾಗಿರುತ್ತದೆ. ಬಾಕ್ಸ್‌ಗಳಲ್ಲಿ ಪ್ಯಾಕ್‌ ಮಾಡಿ ಬೆಂಗಳೂರಿಗೆ ರವಾನಿಸಲಾಗುತ್ತದೆ. ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಧ್ಯಸ್ಥಿಕೆಯಲ್ಲಿ  ಗ್ರಾಹಕರ ಮನೆ ಬಾಗಿಲಿಗೆ ತಲುಪುತ್ತಿದೆ. ನನ್ನ ವ್ಯಾಪರಕ್ಕೆ ಕುಟುಂಬ ಸದಸ್ಯರು ಸಹಕಾರ ನೀಡುತ್ತಿರುವುದರಿಂದ ಯಶಸ್ವಿಯಾಗಿ ನಡೆಯುತ್ತಿದೆ. ನನ್ನಿಂದ ನಮ್ಮ ಊರಿನಲ್ಲಿ 5 ಜನ ಆನ್ ಲೈನ್ ಮಾರಾಟದಿಂದ ಉತ್ತೇಜಿತರಾಗಿದ್ದಾರೆ‘ ಎಂದು ಸಂತಸ ಹಂಚಿಕೊಂಡರು.

‘ರಾಯಚೂರಿನ ಯರಮರಸ್ ಕ್ಯಾಂಪ್‌ನಿಂದ ಗ್ರಾಹಕರೊಬ್ಬರು ಕೇವಲ ಒಂದು ಕೆ.ಜಿ ಮಾವು ಬುಕ್ ಮಾಡಿದರೂ ₹100 ಪೆಟ್ರೋಲ್ ಖರ್ಚು ಮಾಡಿ ಗ್ರಾಹಕರಿಗೆ ತಲುಪಿಸಿದ್ದೇನೆ. 1 ಕೆ.ಜಿ ಮಾವು ಖರೀದಿಸಿದ ಗ್ರಾಹಕರು ರುಚಿಗೆ ಮಾರು ಹೋಗಿ ಪುನಃ 10 ಕೆ.ಜಿ ವರೆಗೆ ಮಾವು ಖರೀದಿ ಮಾಡುತ್ತಾರೆ ಎಂಬ ನಂಬಿಕೆಯಿಂದ ವ್ಯವಹಾರ ನಡೆಸುತ್ತಿದ್ದೇನೆ’ ಎಂದು ಹೇಳಿದರು.

ಮಂಡಲಗೇರಾದ ಗುಡಿಪಾಡು ಆಂಜನೇಯ ತೋಟದಲ್ಲಿ ಬೆಳೆದ ಕೇಸರಿ ಮಾವು
ಮಂಡಲಗೇರಾದ ಗುಡಿಪಾಡು ಆಂಜನೇಯ ತೋಟದಲ್ಲಿ ಬೆಳೆದ ಕೇಸರಿ ಮಾವು

ಆನ್‌ಲೈನ್‌ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಮಾವು ಹೊರ ದೇಶಕ್ಕೂ ಮಾವು ರಫ್ತು ಮಾಡಲು ತಯಾರಿ ಕೇಸರಿ ಮಾವಿಗೆ ಮನಸೋತ ಕೊಲ್ಕತ್ತಾ ಗ್ರಾಹಕರು

ಮಾರಾಟ ಹೇಗೆ?

ಮಂಡಲಗೇರಾದಲ್ಲಿ 6 ಎಕರೆಯ ಪೈಕಿ 2.5 ಎಕರೆಯಲ್ಲಿ  ಬಂಗನ್ ಪಲ್ಲಿ ಮಲ್ಲಿಕಾ ಹಾಗೂ ಕೇಸರಿ ತಳಿಯ ಮಾವು ಬೆಳೆದ  ಆಂಜನೇಯ ಅವರು ಗ್ರಾಹಕರ ಬೇಡಿಕೆಯ ಅನುಸಾರ 3 ಕೆ.ಜಿಯಿಂದ 40 ಕೆ.ಜಿಯ ವರೆಗೆ ಕರ್ ಸಿರಿ ಮೂಲಕ ಮಾವು ಮಾರಾಟ ಮಾಡಿದ್ದಾರೆ. ‘ಹರಿದ್ವಾರ್ ಆರ್ಗನಿಕ್ ಎಂಟರ್ ಪ್ರೈಸೆಸ್’ ಮೂಲಕ ಕರ್ ಸಿರಿ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿ ತಮ್ಮ ಮಾವಿನ ತಳಿಗಳ ಸಹಿತ ಎಲ್ಲ ಮಾಹಿತಿ ವಿಳಾಸ ಪ್ರಕಟಿಸಿದ್ದಾರೆ. ಗ್ರಾಹಕರು ಕರ್ ಸಿರಿ ಯಲ್ಲಿ ಮಾವಿನ ತಳಿಗಳ ಬಗ್ಗೆ ಮಾಹಿತಿ ಪಡೆದು ಆರ್ಡರ್ ಮಾಡುತ್ತಿದ್ದಾರೆ. ಗ್ರಾಹಕರ ಬೇಡಿಕೆಯಂತೆ ಅಂಚೆ ಇಲಾಖೆಯ ಮೂಲಕ ಅವರ ಮನೆ ಬಾಗಿಲಿಗೆ ತಲುಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT