ಶುಕ್ರವಾರ, ಫೆಬ್ರವರಿ 26, 2021
30 °C
ಇಷ್ಟಲಿಂಗ ಪೂಜೆಗಾಗಿ ನೋಂದಣಿ ಆರಂಭ, ಲಕ್ಷಾಂತರ ಭಕ್ತರು ಭಾಗಿ

1.96 ಲಕ್ಷ ಗಣ ಇಷ್ಟಲಿಂಗ ಪೂಜೆಗೆ ಭರದ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಲೋಕ ಕಲ್ಯಾಣ ಹಾಗೂ ಲಿಂಗ ಪೂಜಾ ವಿಧಿವಿಧಾನಗಳನ್ನು ರೂಢಿಗೆ ತರುವ ಮಹತ್ಕಾರ್ಯಕ್ಕಾಗಿ 1.96 ಲಕ್ಷ ಜನರು ಏಕಕಾಲಕ್ಕೆ ಗಣ ಇಷ್ಟಲಿಂಗ ಪೂಜೆ ನೆರವೇರಿಸುವ ಕಾರ್ಯಕ್ರಮವನ್ನು ಫೆಬ್ರುವರಿ 18 ರಂದು ಹಮ್ಮಿಕೊಂಡಿದ್ದು, ಇದಕ್ಕಾಗಿ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ದೇವದುರ್ಗ ತಾಲ್ಲೂಕು ವೀರಘೋಟಿ ಅಡವಿಲಿಂಗ ಮಠದ ಅಡವಿಲಿಂಗ ಸ್ವಾಮೀಜಿ ಹೇಳಿದರು.

ಶನಿವಾರ ಮಠದ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಒತ್ತಡ ಜನಜೀವನದಲ್ಲಿ ಪೂಜೆ, ಪುನಸ್ಕಾರಗಳು ಮರೆತು ಹೋಗಿವೆ. 33 ಕೋಟಿ ದೇವಾನುದೇವತೆಗಳಲ್ಲಿ ಶಿವನನ್ನು ಹೆಚ್ಚು ಆರಾಧಿಸಲಾಗುತ್ತದೆ. ಹೀಗಾಗಿ ಇಷ್ಟಾರ್ಥ ಸಿದ್ಧಿ ಮತ್ತು ಮನಪರಿವರ್ತನೆ ಮಾಡುವುದಕ್ಕಾಗಿ ಲಿಂಗಪೂಜೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

1869 ರಲ್ಲಿ ಭಂತನಾಳ ಶಿವಯೋಗಿಗಳು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನಲ್ಲಿ 1.96 ಗಣ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಮಾಡಿದ್ದಾರೆ. ಗುರುಗಳ ಮಾರ್ಗದರ್ಶನ ಪಡೆದು 50 ವರ್ಷಗಳ ಬಳಿಕ ವೀರಘೋಟಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಇಷ್ಟಲಿಂಗ ಪೂಜೆ ಆಯೋಜಿಸಲಾಗಿದೆ ಎಂದರು.

ಲಿಂಗಪೂಜೆಗೆ ಕುಳಿತುಕೊಳ್ಳಲು 60 ಎಕರೆ, ಕಾರ್ಯಕ್ರಮಕ್ಕೆ ಬರುವ ಇತರೆ ಜನರಿಗಾಗಿ 100 ಎಕರೆ ಜಾಗ ಸಮತಟ್ಟುಗೊಳಿಸಲಾಗಿದೆ. ವೀರಘೋಟಿ ಪ್ರವೇಶಕ್ಕೆ ಮೂರು ಮಾರ್ಗಗಳಿವೆ. ಪೂರ್ವಭಾಗದಲ್ಲಿ 200 ಎಕರೆ ಹಾಗೂ ಪಶ್ಚಿಮ ಭಾಗದಲ್ಲಿ 500 ಎಕರೆ ಜಾಗವನ್ನು ವಾಹನಗಳ ನಿಲುಗಡೆಗೆ ಮೀಸಲಿಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ಪ್ರತ್ಯೇಕ ಕಡೆಗಳಲ್ಲಿ 20 ಅನ್ನಪ್ರಸಾದ ಕೇಂದ್ರಗಳನ್ನು ತೆರೆಯಲಾಗುವುದು. 20 ನೀರಿನ ಪೈಪ್ ಲೈನ್ ವ್ಯವಸ್ಥೆ ಮಾಡುತ್ತಿದ್ದು, ವಸತಿ ಉಳಿಯುವ ಜನರ ಅನುಕೂಲಕ್ಕಾಗಿ 600 ತಾತ್ಕಾಲಿಕ ಶೌಚಾಲಯಗಳನ್ನು ಕಟ್ಟಲಾಗಿದೆ ಎಂದರು.

ವಿಜಯಪುರ, ಬಾಗಲಕೋಟ, ಕಲಬುರ್ಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ.‌ ಭಕ್ತರೆಲ್ಲರೂ ತನು, ಮನ ಹಾಗೂ ಧನದಿಂದ ಕೂಡಿಕೊಂಡು ಈ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಹೇಳಿದರು.

ದವಸ ಧಾನ್ಯ: ಫೆಬ್ರುವರಿ 15 ರಂದು ಮೌನೇಶ್ವರ ರಥೋತ್ಸವ ನಡೆಯಲಿದೆ. 16 ಹಾಗೂ 17 ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ಪ್ರತಿದಿನ ಅನ್ನಪ್ರಸಾದ ತಯಾರಿಸಲು ಬೇಕಾಗುವ ದವಸಧಾನ್ಯಗಳು ಶೇ 75 ರಷ್ಟು ಈಗಾಗಲೇ ಸಂಗ್ರಹವಾಗಿವೆ. ಯಾವುದನ್ನೂ ಖರೀದಿಸುವ ಅಗತ್ಯ ಕಂಡು ಬಂದಿಲ್ಲ. ಆದರೆ, ತರಕಾರಿಗಳನ್ನು ಬೆಳಗಾವಿಯಿಂದ ತರಿಸಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ವೀರಘೋಟಿಯಲ್ಲಿ ಕೆಲವು ಮೂಲ ಸೌಕರ್ಯ ಕಾಮಗಾರಿಗಳನ್ನು ಸರ್ಕಾರದಿಂದ ಮಾಡುತ್ತಿದ್ದಾರೆ ಎಂದರು.

ಗಣ್ಯರು ಭಾಗಿ

15 ರಂದು ನಡೆಯುವ ರಥೋತ್ಸವ ದಿನದಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ. 16 ಮತ್ತು 17 ರಂದು ವಿವಿಧ ಪಕ್ಷಗಳು ಮುಖಂಡರು ಬರಲಿದ್ದಾರೆ.

ಇಷ್ಟಲಿಂಗ ಪೂಜೆಯ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ‌ ಅವರನ್ನು ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ. ಇವರೆಗೂ ಅವರು ಬರುವುದು ಅಧಿಕೃತವಾಗಿಲ್ಲ. ಆದರೆ ಈ ಬೃಹತ್ ಧಾರ್ಮಿಕ ಕಾರ್ಯಕ್ರಮಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ. ಮಠದ ಆವರಣದಲ್ಲಿ ಫೆಬ್ರುವರಿ 5 ರಿಂದ ಮೌನೇಶ್ವರ ಕುರಿತು ಪ್ರವಚನ ಆರಂಭವಾಗಲಿದೆ ಎಂದು ಅಡವಿಲಿಂಗ ಸ್ವಾಮೀಜಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು