ಸೋಮವಾರ, ಜೂನ್ 14, 2021
26 °C
ಸುಧಾರಣೆ ಆಗದ ಮಳೆ, ಪ್ರವಾಹದಿಂದ ಹಾನಿಯಾದ ರಸ್ತೆಗಳು

ಹಿನ್ನೋಟ-2020: ಕೋವಿಡ್‌ ಆತಂತಕದಲ್ಲೇ ಕಳೆದು ಹೋಯಿತು ವರ್ಷ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: 2020 ವರ್ಷಾರಂಭದಲ್ಲೇ ಕೋವಿಡ್‌ ಸೋಂಕಿನ ಹೆಸರು ಪ್ರಚಲಿತಕ್ಕೆ ಬಂದಿತು. ವರ್ಷ ಮುಗಿದರೂ ಮಹಾಮಾರಿಯ ಆತಂಕದಲ್ಲಿಯೇ ಜನರು ಕಾಲ ಕಳೆಯುವಂತಾಗಿದೆ. 

ಈ ಮಧ್ಯೆ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು, ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಮೂಲ ಸೌಕರ್ಯಗಳು ಸುಧಾರಣೆ ಆಗಲೇ ಇಲ್ಲ. ಕೋವಿಡ್‌ ಸೋಂಕು ತಡೆಗಾಗಿ ಜಿಲ್ಲೆಯಲ್ಲಿ ಮುನ್ನಚ್ಚೆರಿಕೆ ವಹಿಸಿ ಮಾರ್ಚ್‌ 14 ರಿಂದಲೇ 144 ಸೆಕ್ಷೆನ್‌ ಜಾರಿ ಮಾಡಲಾಗಿತ್ತು. ಆನಂತರ ಲಾಕ್‌ಡೌನ್‌ ಘೋಷಣೆ ಆಗಿದ್ದರಿಂದ ಜನಜೀವನವು ನಾಲ್ಕು ಗೋಡೆಗಳ ಮಧ್ಯೆಯೇ ಬಂಧಿತವಾಗಿತ್ತು. ಆದರೂ ಜಿಲ್ಲೆಯಿಂದ ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ಗುಳೆ ಹೋಗಿದ್ದ 55 ಸಾವಿರ ಜನರು ಲಾಕ್‌ಡೌನ್‌ ಅವಧಿಯಲ್ಲೇ ಮರಳಿದರು.

ಮೇ 5 ರಂದು ಮಹಾರಾಷ್ಟ್ರದಿಂದ ಬಂದಿದ್ದವರಲ್ಲಿ ಕೋವಿಡ್‌ ಸೋಂಕು ತಗುಲಿದ ಮೊದಲ ಪ್ರಕರಣವು ಜಿಲ್ಲೆಯಲ್ಲಿ ಪತ್ತೆಯಾಯಿತು. ಕೋವಿಡ್‌ ಪ್ರಕರಣದಲ್ಲಿ ಹಸಿರು ಜಿಲ್ಲೆಯಾಗುಳಿದಿದ್ದ ರಾಯಚೂರು, ರೆಡ್‌ಜೋನ್‌ಗೆ ಹೋಯಿತು. ಇದುವರೆಗೂ ಕೋವಿಡ್‌ನಿಂದ 158 ಜನರು ಮೃತಪಟ್ಟಿದ್ದಾರೆ. ಅದರಲ್ಲಿ ಪ್ರಮುಖವಾಗಿ, ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ ಗಸ್ತಿ ಅವರು ಕೋವಿಡ್‌ನಿಂದ ಚೇತರಿಸಿಕೊಳ್ಳದೆ ಆಗಸ್ಟ್‌ 31 ರಂದು ಮೃತಪಟ್ಟ ಸುದ್ದಿಯಿಂದ ಜನರಿಗೆ ದೊಡ್ಡ ಆಘಾತ ಉಂಟಾಯಿತು.

ಪ್ರತಿನಿತ್ಯ ಭಕ್ತರಿಂದ ತುಂಬಿರುತ್ತಿದ್ದ ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠವನ್ನು ಮಾರ್ಚ್‌ 21 ರಿಂದ ಅಕ್ಟೋಬರ್‌ 2 ರವರೆಗೂ ಮುಚ್ಚಲಾಯಿತು. ಸುಕ್ಷೇತ್ರದಲ್ಲಿ ನಡೆಯಬೇಕಿದ್ದ ಸೂಗುರೇಶ್ವರ ಜಾತ್ರೆ, ಗುರುಗುಂಟಾ ಜಾತ್ರೆ, ನೀರಮಾನ್ವಿ ಜಾತ್ರೆ ಹಾಗೂ ಸಿಂಧನೂರು ಅಂಬಾಮಠ ಜಾತ್ರೆಗಳು ಸೇರಿದಂತೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೋವಿಡ್‌ ಕಾರಣದಿಂದ ರದ್ದಾದವು. ಜಾತ್ರೆ, ಮದುವೆ ಸಮಾರಂಭಗಳು, ಶಾಲಾ, ಕಾಲೇಜು ಅವಲಂಬಿಸಿ ಉಪಜೀವನ ನಡೆಸುತ್ತಿದ್ದವರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ರಂಗಕಲಾವಿದರು, ಸಂಗೀತಗಾರರು, ಶಿಕ್ಷಣ ಸಂಸ್ಥೆಗಳು, ಖಾಸಗಿ ಶಾಲೆಗಳ ಶಿಕ್ಷಕರ ತೊಂದರೆ ಇನ್ನೂ ಕೋವಿಡ್‌ ಕಾರಣದಿಂದ ದೂರವಾಗಿಲ್ಲ.

ಎಡೆಬಿಡದೆ ಸುರಿದ ಮಳೆಯಿಂದಾಗಿ ಶಾಖೋತ್ಪನ್ನ ವಿದ್ಯುತ್‌ಗೆ ಬೇಡಿಕೆ ಕುಸಿದಿದ್ದರಿಂದ ಇದೇ ಮೊದಲ ಬಾರಿಗೆ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್‌ಟಿಪಿಎಸ್) ಹಾಗೂ ಯರಮರಸ್‌ ಸೂಪರ್‌ಕ್ರಿಟಿಕಲ್‌ ಶಾಖೋತ್ಪನ್ನ ಸ್ಥಾವರ (ವೈಟಿಪಿಎಸ್‌) ಕಳೆದ ನಾಲ್ಕು ತಿಂಗಳುಗಳಿಂದ ಸ್ಥಗಿತಗೊಂಡಿವೆ. ಹಾರುಬೂದಿ ಅವಲಂಬಿತ ಕೈಗಾರಿಕೆಗಳು ಸಂಕಷ್ಟ ಅನುಭವಿಸುವಂತಾಗಿದೆ. ಬೆಲೆಯಿಲ್ಲದೆ ಸಮಸ್ಯೆ ಉಂಟುಮಾಡಿದ್ದ ಹಸಿಬೂದಿಗೂ ಬೇಡಿಕೆ ಶುರುವಾಗಿದೆ.

ಜಿಲ್ಲೆಯಲ್ಲಿ ಈ ಸಲ ಮುಂಗಾರು ಮಳೆ ನಿರೀಕ್ಷೆಗೂ ಮೀರಿ ಸುರಿಯಿತು. ಪ್ರತಿವರ್ಷ ಕೃಷ್ಣಾನದಿಯಲ್ಲಿ ಪ್ರವಾಹ ನೋಡುತ್ತಿದ್ದ ಜನರು, 2020 ರಲ್ಲಿ ಭೀಮಾನದಿ ಪ್ರವಾಹ ಆತಂಕ ಹರಡಿತ್ತು. ಅಕ್ಟೋಬರ್‌ 19 ರಿಂದ ನಿರಂತರ ಪ್ರವಾಹ ಏರಿಕೆ ಆಯಿತು. 8.5 ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿದೆ ಎನ್ನುವ ಸುದ್ದಿಯಿಂದಾಗಿ ಜಿಲ್ಲಾಡಳಿತವು ನಾಲ್ಕು ಗ್ರಾಮಗಳ ಸ್ಥಳಾಂತರಕ್ಕೆ ಹರಸಾಹಸ ಪಟ್ಟಿತು. ಗುರ್ಜಾಪುರದಲ್ಲಿ ಹಗಲಿರುಳು ಸರ್ಕಾರಿ ಬಸ್‌ಗಳು ನಿಂತಿದ್ದವು. ಆದರೆ ಜನರು ಸ್ಥಳಾಂತರಕ್ಕೆ ನಿರಾಕರಿಸಿದರು.

ಅತಿವೃಷ್ಟಿ ಹಾಗೂ ಪ್ರವಾಹ ಕಾರಣದಿಂದ ಜಿಲ್ಲೆಯ ಅಪಾರ ಪ್ರಮಾಣದ ಬೆಳೆಹಾನಿ ಉಂಟಾಯಿತು. ಮುಂಗಾರು ಮಳೆಯಿಂದ ಹುಲುಸಾಗಿ ಬೆಳೆದಿದ್ದ ಹತ್ತಿ ಹಾಗೂ ಭತ್ತ ನೆಲಕಚ್ಚಿದ್ದರಿಂದ ರೈತರು ಹಾನಿಗೀಡಾದರು. ಆದರೂ, ಹತ್ತಿ ಬೆಳೆಯು ರೈತರ ಕೈಹಿಡಿಯಿತು. ಪ್ರವಾಹಕ್ಕೆ ಸಿಲುಕಿ 7 ಜನರು ಸಾವಿಗೀಡಾದರು. ರಾಯಚೂರು ತಾಲ್ಲೂಕಿನ ಕುರ್ವಕಲಾ ನಡುಗಡ್ಡೆಯಿಂದ ತೆಲಂಗಾಣದ ಗ್ರಾಮಕ್ಕೆ ಸಂತೆಗೆ ಹೋಗಿ ಬರುತ್ತಿದ್ದ ನಾಲ್ಕು ಮಂದಿ ಜಲಸಮಾಧಿಯಾದರು. ಲಿಂಗಸುಗೂರು ತಾಲ್ಲೂಕಿನ ಗುಡಲಬಂಡಾ ಜಲಪಾತ ವೀಕ್ಷಿಸುತ್ತಿದ್ದ ತಂದೆ–ಮಗು ಪ್ರವಾಹದಲ್ಲಿ ಕೊಚ್ಚಿಹೋದರು. ಮಸ್ಕಿ ಹಳ್ಳದಲ್ಲಿ ಬಹಿರ್ದೆಸೆಗೆ ಹೋಗಿದ್ದ ಯುವಕ ನೀರಿನಲ್ಲಿ ಅಕ್ಟೋಬರ್‌ 11 ರಂದು ಕೊಚ್ಚಿಹೋಗಿದ್ದನ್ನು ಸಾವಿರಾರು ಜನರು ಕಣ್ಣಾರೆ ನೋಡಿ ಮರುಕಪಟ್ಟರು.

ರಾಯಚೂರು, ಸಿಂಧನೂರು ನಗರಸಭೆಗಳು ಸೇರಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಎರಡು ವರ್ಷಗಳ ಬಳಿಕ ನವೆಂಬರ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆದವು. ಕಳೆದ ವರ್ಷ ಜೂನ್‌ 8 ರಂದು ಜಿಲ್ಲೆಗೆ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದಿದ್ದ ಡಾ.ಸಿ.ಬಿ.ವೇದಮೂರ್ತಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಸಿಗಳನ್ನು ನೆಡುವುದು, ಸ್ವಚ್ಛತಾ ಶಿಬಿರಗಳಲ್ಲಿ ಪಾಲ್ಗೊಂಡು ಜನಜಾಗೃತಿ ಮೂಡಿಸಿ ಮನೆಮಾತಾಗಿದ್ದರು. ಈ ವರ್ಷ ಆಗಸ್ಟ್‌ 4 ರಂದು ಬೇರೆಡೆ ಅವರಿಗೆ ವರ್ಗಾವಣೆ ಆಗಿದ್ದರಿಂದ ಜನರು ಬೇಸರಪಟ್ಟರು.

ಸೆಪ್ಟೆಂಬರ್‌ 3 ರಂದು ರಾಯಚೂರು ಜಿಲ್ಲೆಯಲ್ಲಿ ಅರಕೇರಾ ಹೊಸ ತಾಲ್ಲೂಕು ಕೇಂದ್ರ ಮಾಡುವುದಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿತು. ಹಿಂದುಳಿದ ದೇವದುರ್ಗ ತಾಲ್ಲೂಕು ಇನ್ನೂ ಅಭಿವೃದ್ಧಿ ಪಥದಲ್ಲೇ ಉಳಿದಿದ್ದು, ಅದನ್ನು ಇಬ್ಬಾಗಗೊಳಿಸಿ ಹೊಸ ತಾಲ್ಲೂಕು ಘೋಷಿಸಿದ್ದು ಜನರ ಅಚ್ಚರಿಗೆ ಕಾರಣವಾಗಿದೆ.

ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ರಾಯಚೂರು ನಗರದ ಇಳಿಜಾರಿನ ಬಡಾವಣೆಗಳು ಜಲಾವೃತವಾದವು. ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳು ತೊಂದರೆ ಅನುಭವಿಸಿದವು.

ರಾಯಚೂರು ವಿಶ್ವವಿದ್ಯಾಲಯಕ್ಕೆ ಆಗಸ್ಟ್‌ 3 ರಂದು ನೂತನ ಕುಲಪತಿಯಾಗಿ ಡಾ.ಹರೀಶ ರಾಮಸ್ವಾಮಿ ಅವರನ್ನು ಸರ್ಕಾರ ನೇಮಕಗೊಳಿಸಿತು. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತ್ಯೇಕ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡುವ ನಿರೀಕ್ಷೆ ಈಡೇರಿದಂತಾಗಿದೆ. ರಾಯಚೂರು ಐಐಐಟಿಗೆ ಕೇಂದ್ರ ಸರ್ಕಾರವು ಸೆಪ್ಟೆಂಬರ್‌ 23 ರಂದು ‘ರಾಷ್ಟ್ರೀಯ ಮಹತ್ವ’ದ ಸ್ಥಾನಮಾನ ನೀಡಿತು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ರಾಯಚೂರಿನಲ್ಲಿ ಆರಂಭವಾಗುತ್ತಿರುವುದು ಜನರಲ್ಲಿ ಹೆಮ್ಮೆ ಮೂಡಿಸಿದೆ.

ನವೆಂಬರ್‌ 20 ರಂದು ತುಂಗಭದ್ರಾ ನದಿ ಪುಷ್ಕರ ಆರಂಭವಾಯಿತು. ಡಿಸೆಂಬರ್‌ 1 ರವರೆಗೂ ಮುಂದುವರಿದ ಪುಷ್ಕರದುದ್ದಕ್ಕೂ ಮಂತ್ರಾಲಯದಲ್ಲಿ ಉತ್ಸವದ ವಾತಾವರಣ ಮನೆಮಾಡಿತ್ತು. ಕರ್ನೂಲ್‌ ಪೊಲೀಸರು ಕಾವಲು ಇದ್ದರೂ ಜನರಿಗೆ ಕೊಳವೆ ಮೂಲಕ ನೀರು ಪೂರೈಸಿ ಪುಷ್ಕರ ಸ್ನಾನಕ್ಕೆ ಅನುವು ಮಾಡಿದರು.

ಕೋವಿಡ್‌ ನೆಪದಲ್ಲಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಅನುದಾನ ಲಭ್ಯವಿದ್ದರೂ ಕಾಮಗಾರಿಗಳು ಪೂರ್ಣವಾಗುತ್ತಿಲ್ಲ. ಅದರಲ್ಲಿ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನ ವೆಚ್ಚವಾಗದೆ ಉಳಿದಿದೆ. ವರ್ಷದ ಕೊನೆಯಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗಿದ್ದು, ಹಣಕಾಸು ವರ್ಷ ಮುಗಿಯುವುದರೊಳಗಾಗಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಲಾಗಿದೆ. ಅನುದಾನ ಬಳಕೆಯಲ್ಲಿ ರಾಯಚೂರು ಹಿಂದೆ ಬಿದ್ದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು