ಬುಧವಾರ, ಮೇ 27, 2020
27 °C
ಅಗತ್ಯ ವಸ್ತು ಮಾರಾಟ ಅಂಗಡಿಗಳು ಮಾತ್ರ ತೆರೆದಿಡಲು ಅವಕಾಶ

ಜಿಲ್ಲೆಯ ಗಡಿಭಾಗಗಳಲ್ಲಿ 22 ಚೆಕ್‌ಪೋಸ್ಟ್‌: ಎಸ್‌ಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೋವಿಡ್‌ ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿದ್ದು, ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಅಗತ್ಯ ವಸ್ತು ಮಾರಾಟ ಅಂಗಡಿಗಳನ್ನು ಮಾತ್ರ ತೆರೆಯಬೇಕು. ಬಂದ್‌ಗೆ ಎಲ್ಲ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಕೋರಿದ್ದಾರೆ.

ಬೇರೆ ರಾಜ್ಯಗಳಿಂದ ಹಾಗೂ ಬೇರೆ ಜಿಲ್ಲೆಗಳಿಂದ ಬರುವ ಜನರ ಮೇಲೆ ನಿಗಾ ವಹಿಸಲು ಮತ್ತು ತಪಾಸಣೆ ಕೈಗೊಳ್ಳುವುದಕ್ಕಾಗಿ ಜಿಲ್ಲೆಯಾದ್ಯಂತ 22 ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಚೆಕ್‌ಪೋಸ್ಟ್‌ನಲ್ಲಿದ್ದು, ಸಂಶಯಾಸ್ಪರನ್ನು ತಪಾಸಣೆ ಮಾಡುತ್ತಾರೆ ಎಂದು ತಿಳಿಸಿದರು.

ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಂದ ಬರುವ ವಾಹನಗಳಿಗೆ ಹಾಗೂ ಈ ಕಡೆಯಿಂದ ಹೋಗುವ ವಾಹನಗಳಿಗೆ ಬಿಡಲಾಗುವುದಿಲ್ಲ. ನೆರೆಯ ಜಿಲ್ಲೆಗಳಿಂದ ಬರುವ ವಾಹನಗಳನ್ನು ಬಿಡುತ್ತಿಲ್ಲ. ಈ ವಿಷಯದಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ ಎಂದರು.

ಈ ಪರಿಸ್ಥಿತಿ ಮಾರ್ಚ್‌ 31 ರವರೆಗೂ ಮುಂದುವರಿಯಲಿದೆ. ಅಗತ್ಯ ದಿನಸಿ ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳನ್ನು ತೆರೆದಿಟ್ಟುಕೊಂಡರೆ ಕಠಿಣ ಕ್ರಮ ಜರುಗಿಸಲಾಗುವುದು. ಐಪಿಐ ಸೆಕ್ಷೆನ್‌ 188, 269 270 ಹಾಗೂ 271  ರ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಎಫ್‌ಐಆರ್‌ ದಾಖಲಿಸಲಾಗುವುದು. ಈ ಸೆಕ್ಷೆನ್‌ಗಳಡಿ ಎರಡು ವರ್ಷ ಜೈಲು ಶಿಕ್ಷೆ ಇದೆ. ಜಾಮೀನು ಸಿಗುವುದಿಲ್ಲ ಎಂದು ತಿಳಿಸಿದರು.

ಮಸೀದಿ, ಮಂದಿರಗಳಲ್ಲಿ ಪ್ರಾರ್ಥನೆಗಾಗಿ ಜಾತ್ರೆ ಹಾಗೂ ಮದುವೆಗಳಿಗೆ ಜನರನ್ನು ಸೇರಿಸುವುದಕ್ಕೆ ಅವಕಾಶ ನೀಡುವುದಿಲ್ಲ. ಕೊರೊನಾ ವೈರಸ್‌ ಹರಡುವುದು ಜನರಿಂದ ಜನರಿಗಾಗಿ. ನಿಯಮವನ್ನ ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು ಎಂದು ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು