ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು: ರಾಜಾಳ್ವಿಕೆಯ ರಕ್ಷಣಾ ಕೋಟೆಗೆ ಪ್ರಜಾಡಳಿತದಲ್ಲಿ ತಾತ್ಸಾರ

ಭಾವೈಕ್ಯ ಸಂದೇಶ ಸಾರಿದ ನದಿ ಮಧ್ಯದ ಗುಡ್ಡದ ಮೇಲಿರುವ ಜಲದುರ್ಗ ಕೋಟೆ
ಬಿ.ಎ ನಂದಿಕೋಲಮಠ, ಚಂದ್ರಕಾಂತ ಮಸಾನಿ
Published 26 ಆಗಸ್ಟ್ 2024, 5:19 IST
Last Updated 26 ಆಗಸ್ಟ್ 2024, 5:19 IST
ಅಕ್ಷರ ಗಾತ್ರ

ಲಿಂಗಸುಗೂರು (ರಾಯಚೂರು ಜಿಲ್ಲೆ): ಗುಡ್ಡವನ್ನು ಸೀಳಿಕೊಂಡು ಭೋರ್ಗರೆಯುತ್ತ ಸಾಗುವ ಕೃಷ್ಣೆಯ ತಟದಲ್ಲಿ ಹಾಗೂ ವೈರಿಗಳನ್ನು ಸದೆ ಬಡಿಯಲು ನಡುಗಡ್ಡೆಯ ಬೆಟ್ಟದ ಮೇಲೆ ನಿರ್ಮಿಸಿದ ಕೋಟೆ ‘ಜಲದುರ್ಗ ಕೋಟೆ’ ಎಂದು ಕರೆಸಿಕೊಂಡಿದೆ. ನೈಸರ್ಗಿಕ ಜಲದಿಗ್ಬಂಧನದಿಂದಾಗಿ ರಾಜರ ಆಳಿಕ್ವೆ ಕಾಲದಲ್ಲಿ ಬಲಿಷ್ಠ ರಕ್ಷಣಾ ಕೋಟೆಯಾಗಿದ್ದ ಇದು ಇಂದು ಪ್ರಜೆಗಳ ಆಡಳಿತದಲ್ಲಿ ತಾತ್ಸಾರಕ್ಕೆ ಒಳಗಾಗಿದೆ.

ದೇವಗಿರಿಯ ಯಾದವರ ಕಾಲಘಟ್ಟದಲ್ಲಿ ಜಲದುರ್ಗ ಕೋಟೆ ನಿರ್ಮಾಣ ಆರಂಭಗೊಂಡು ವಿಜಯಪುರ ಆದಿಲ್‍ಶಾಹಿ ಆಡಳಿತದ ಅವಧಿಯಲ್ಲಿ ಪೂರ್ಣಗೊಂಡಿದೆ ಎನ್ನುವುದು ಇತಿಹಾಸ. ಸೈನಿಕರಿಗೆ ಔಷಧೋಪಚಾರ, ಯುದ್ಧ ಕೈದಿಗಳ ಬಂದೀಖಾನೆ, ರಾಜರ ಖಜಾನೆ ಸ್ಥಳ ಅಷ್ಟೇ ಅಲ್ಲದೇ ಯುದ್ಧ ಕೈದಿಗಳಿಗೆ ಮರಣ ದಂಡನೆ ವಿಧಿಸುವ ತಾಣವಾಗಿತ್ತು.

ದುರ್ಗಮ ಪ್ರದೇಶದಲ್ಲಿ ಬೆಟ್ಟದ ಮೇಲೆ ಏಳು ಸುತ್ತಿನ ಕೋಟೆ ನಿರ್ಮಾಣಗೊಂಡಿದೆ. ಏಳು ದ್ವಾರಗಳ ಮೂಲಕವೇ ಇಲ್ಲಿಗೆ ಬರಬೇಕಿತ್ತು. ಕೋಟೆಗಳಲ್ಲಿ ಇಕ್ಕಟ್ಟಾದ ಮಾರ್ಗವಾಗಿ ಮೇಲೆ ಬಂದರೆ ಉರ್ದು ಮತ್ತು ದೇವನಾಗರಿ ಲಿಪಿಯ ಶಾಸನ ಕಾಣಸಿಗುತ್ತದೆ. ಕೊಡೇಕಲ್‍ ಬಸವಣ್ಣನ ಆರಾಧ್ಯ ದೈವ ಸಂಗಮನಾಥ ಗದ್ದುಗೆ ಪಕ್ಕದಲ್ಲಿ ಮುಸ್ಲಿಂ ದಾರ್ಶನಿಕರ ಗೋರಿಗೆ ಪೂಜೆ ನಡೆಯುತ್ತಿದೆ. ಹಿಂದೂ ಮುಸ್ಲಿಮರು ಇಲ್ಲಿ ಪ್ರಾರ್ಥನೆ ಸಲ್ಲಿಸುವ ಕಾರಣ ಭಾವೈಕ್ಯದ ತಾಣವಾಗಿ ಗುರುತಿಸಿಕೊಂಡಿದೆ.

ಮೇಲ್ಭಾಗದ ಬಯಲಲ್ಲಿ ಖಜಾನೆ ಕೊಠಡಿ, ಅರಮನೆ, ಸೈನಿಕರ ವಸತಿ ಗೃಹಗಳು, ಯುದ್ಧ ಕೈದಿಗಳ ಬಂದೀಖಾನೆಯ ಕುರುಹುಗಳು ಕಾಣಸಿಗುತ್ತವೆ. ತಾಲ್ಲೂಕಿನಾದ್ಯಂತ ಜಲದುರ್ಗ, ಭಿಲ್ಲಮರಾಜನ ಆಳ್ವಿಕೆಯ ಕರಡಿಕಲ್ಲು, ಮುದಗಲ್ಲ ರಾಜರ ಆಳ್ವಿಕೆಯ ಕೋಟೆ ಕೊತ್ತಲು, ಸ್ಮಾರಕಗಳು ಇತಿಹಾಸ ಸಾರುತ್ತಿವೆ. ಪಿಕಳಿಹಾಳ, ಕರಡಕಲ್ಲ ಕುರುಹುಗಳ ರಕ್ಷಣೆಗೆ ಸಂಘ ಸಂಸ್ಥೆಗಳು ಮನವಿ ಸಲ್ಲಿಸುತ್ತ ಬಂದಿವೆ. ಆದರೆ, ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನೆ ದೊರಕುತ್ತಿಲ್ಲ.

ಬಹುಮನಿ ಸುಲ್ತಾನರು, ವಿಜಯಪುರದ ಆದಿಲ್‍ಶಾಹಿಗಳು, ವಿಜಯನಗರದ ಅರಸರು ಸೇರಿದಂತೆ ವಿವಿಧ ರಾಜರು ಆಯಾ ಕಾಲಘಟ್ಟದಲ್ಲಿ ರಕ್ಷಣಾ ಕೋಟೆ ವಶಕ್ಕೆ ಪಡೆಯಲು ಯುದ್ಧ ನಡೆಸಿದರು. 14ನೇ ಶತಮಾನದಲ್ಲಿ ಕೊಡೇಕಲ್‍ ಬಸವಣ್ಣ ಪರಂಪರೆಯ ಶರಣರು ಜಲದುರ್ಗ ಕೋಟೆ ವಶಪಡಿಸಿಕೊಂಡಿದ್ದರು ಎಂದು ಹೇಳಲಾಗುತ್ತದೆ. ಇಲ್ಲಿನ ಸಂಗಮನಾಥ ಗದ್ದುಗೆ, ಯಲ್ಲಮ್ಮ ದೇವಸ್ಥಾನ, ಕಲ್ಲುಪೆಟ್ಟಿಗೆ ಅನೇಕ ಬಗೆಯ ಸಾಕ್ಷ್ಯ ಒದಗಿಸುತ್ತದೆ.

1976ರಲ್ಲಿ ಸೇತುವೆ ನಿರ್ಮಾಣ:

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವ್ಯಾಪ್ತಿಗೆ ಒಳಪಡುವ ಜಲದುರ್ಗ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿಯೇ 1976ರಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.

ಹದಿನೈದು ವರ್ಷಗಳ ಹಿಂದೆ ಹಾಲಭಾವಿ ಕ್ರಾಸ್‍ದಿಂದ ರಸ್ತೆ ನಿರ್ಮಾಣಗೊಂಡಿತ್ತು. 2019-20ರಲ್ಲಿ ಪ್ರವಾಸೋದ್ಯಮ ಇಲಾಖೆಯಡಿ ₹ 1ಕೋಟಿ ವೆಚ್ಚದಲ್ಲಿ ಉದ್ಯಾನ, ಸ್ನಾನಗೃಹ ಮತ್ತು ಶೌಚಾಲಯ ನಿರ್ಮಿಸಲಾಯಿತು. ನಿರ್ವಹಣೆ ಸಮಸ್ಯೆಯಿಂದಾಗಿ ಅದು ಸಹ ಪಾಳು ಬಿದ್ದಿದೆ.

ಖಾಸಗಿ ವ್ಯಕ್ತಿಗಳ ಒತ್ತುವರಿ, ನಿಧಿಗಳ್ಳರ ಹಾವಳಿಯಿಂದ ಬಹುತೇಕ ಕೋಟೆಗಳು, ಬುರುಜು ನೆಲಕ್ಕುರುಳುತ್ತಿದೆ. ಇಂದು ಇದು ಕೇವಲ ಯುವ ಪ್ರೇಮಿಗಳ ಏಕಾಂತದ ತಾಣವಾಗಿದೆ. ಜೂಜುಕೋರರ ಕೇಂದ್ರವಾಗಿದೆ.

ಪ್ರವಾಹ ಸಂದರ್ಭದಲ್ಲಿ ಗುಡ್ಡವನ್ನು ಸೀಳಿಕೊಂಡು ಧುಮ್ಮಿಕ್ಕುತ್ತ, ಅಬ್ಬರೊಂದಿಗೆ ಮುಂದೆ ನುಗ್ಗುವ ಕೃಷ್ಣೆ ಸೊಬಗನ್ನು ನೋಡುವುದೇ ಕಣ್ಣಿಗೆ ಹಬ್ಬ. ಕೋಟೆಯ ಆವರಣದ ವರೆಗೂ ಬರಲು ರಸ್ತೆ ಇದೆ. ಚಿಕ್ಕದಾದ ವೀಕ್ಷಣಾ ಗೋ‍ಪುರವೂ ಇಲ್ಲಿದೆ. ನಿರ್ವಹಣೆಯ ಸಮಸ್ಯೆಯಿಂದ ಅಂದ ಕಳೆದುಕೊಂಡಿದೆ. ಕುರಿಗಾಹಿಗಳು ಇಲ್ಲಿ ಕುರಿ ಮೇಕೆಗಳನ್ನು ಕಟ್ಟಲು ಬಳಸುತ್ತಿದ್ದಾರೆ.


ಚಿತ್ರೀಕರಣದ ತಾಣ

ಅಮೆರಿಕದ ಚಿಲನಚಿತ್ರ ನಿರ್ದೇಶಕ ಜೆ.ಎಲ್‍. ಥಾಂಪ್ಸನ್‍ ನಿರ್ದೇಶನದಲ್ಲಿ ಮೆಕಾನಿಸ್‍ ಗೋಲ್ಡ್ ಕಾದಂಬರಿ ಆಧಾರಿತ ಚಲನಚಿತ್ರಕ್ಕೆ 1963ರಲ್ಲಿ ಹೆಲಿಕಾಪ್ಟರ್ ಮೂಲಕ ಚಿತ್ರೀಕರಣ ಮಾಡಲಾಯಿತು. ಲಡ್ಡುಮುತ್ಯಾ, ಬನದ ನೆರಳು ಸೇರಿದಂತೆ ವಿವಿಧ ಸಿನೆಮಾಗಳ ಚಿತ್ರೀಕರಣ ನಡೆದಿವೆ. ಜಯತೀರ್ಥ ರಾಜಪುರೋಹಿತ ಬರೆದ ಜೊಹರಾ ಕಾದಂಬರಿಯಲ್ಲಿ ಕೂಡ ಕೋಟೆ ಉಲ್ಲೇಖಿತವಾಗಿದೆ.

ಪ್ರವಾಸಿಗರ ಬೇಡಿಕೆಗಳು

ಕೋಟೆ ಗೋಡೆಗಳ ಮೇಲೆ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿ ಕೋಟೆಯನ್ನು ಬಲಿಷ್ಠಗೊಳಿಸಬೇಕಿದೆ. ಕೋಟೆಯೊಳಗಿನ ಐತಿಹಾಸಿ ವೀಕ್ಷಣ ಗೋಪುರ ನೆಲಕ್ಕುರುಳುತ್ತಿದ್ದು ಅದನ್ನು ಮರು ನಿರ್ಮಾಣ ಮಾಡಬೇಕು.

ಕೋಟೆ ಆವರಣದಲ್ಲೇ ಉದ್ಯಾನ ನಿರ್ಮಿಸಿ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಇಲ್ಲಿರುವ ಯಾತ್ರಿನಿವಾಸವನ್ನು ದುರಸ್ತಿಗೊಳಿಸಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಬೇಕು. ಪ್ಲಾಸ್ಟಿಕ್ ನಿಷೇಧಿಸಿ ಉಪಾಹಾರ ಕೇಂದ್ರವನ್ನೂ ತೆರೆಯಬೇಕು. ಜಲದುರ್ಗ ಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿದರೆ ಉದ್ಯೋಗ ಸೃಷ್ಟಿ ಹೆಚ್ಚಾಗಲಿದೆ,

‘ಜಲದುರ್ಗ ಕೋಟೆ ಪ್ರದೇಶವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ಕನಿಷ್ಠ ₹ 2 ಕೋಟಿ ಬೇಕಾಗಲಿದೆ. ಇದಕ್ಕೆ ಸಂಬಂಧಪಟ್ಟಂತೆ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ರಾಜ್ಯ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ನೆರವಿನಿಂದ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ‘ ಎಂದು ಕಲಬುರ್ಗಿಯಲ್ಲಿರುವ ರಾಜ್ಯ ಪುರಾತತ್ವ ಇಲಾಖೆಯ ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಪ್ರೇಮಲತಾ ಬಿ.ಎಂ. ಹೇಳಿದರು.

ಜಲದುರ್ಗ ಹಲವು ರಾಜರ ಆಳ್ವಿಕೆಗೆ ಒಳಪಟ್ಟಿರುವ ಐತಿಹಾಸಿಕ ಕೋಟೆಯಾಗಿದೆ. ಔಷಧೀಯ ಗುಣವುಳ್ಳ ಸಸ್ಯಗಳು ಇಲ್ಲಿವೆ. ಹಿಂದೂ ಮುಸ್ಲಿಮ ಭಾವೈಕ್ಯದ ಕೋಟೆ ಎಂದು ಗುರುತಿಸಿಕೊಂಡಿದೆ.
ಡಾ. ಮಹಾದೇವಪ್ಪ ನಾಗರಹಾಳ, ಸಂಶೋಧಕರು, ಲಿಂಗಸುಗೂರು
ಕೃಷ್ಣಾ ನದಿ ಟಿಸಿಲೊಡೆದು ಹರಿಯುವ ದೃಶ್ಯ, ಹಸಿರು ಹೊದಿಕೆಯ ಗುಡ್, ಸಿಲ್ವರ್ ಪ್ಲಾಂಟ್‍ ಕಣ್ತುಂಬಿಕೊಳ್ಳಬಹುದು. ಸರ್ಕಾರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸದೇ ಇರುವುದು ದುರ್ದೈವ.
ಜಾನಕಿ ಪರಣ್ಣವರ
ರಾಯಚೂರು ಜಿಲ್ಲೆಯ ಐತಿಹಾಸಿಕ ಕೋಟೆ ಕೊತ್ತಲುಗಳ ಸಂರಕ್ಷಣೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.ಚುನಾಯಿತ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಜಲದುರ್ಗ ಕೋಟೆ ಮಣ್ಣುಪಾಲಾಗುತ್ತಿದೆ.
ಪ್ರಭುಲಿಂಗ ಮೇಗಳಮನಿ, ರಾಜ್ಯ ಸಮಿತಿ ಸದಸ್ಯ, ಕರಾದಸಂಸ ಬೆಂಗಳೂರು
ಜಲದುರ್ಗ ಕೋಟೆ ಒಳ ಆವರಣದಲ್ಲಿ ನಿರ್ಮಿಸಿದ್ದ ಉದ್ಯಾನ ನಿರ್ವಹಣೆ ಇಲ್ಲದೆ ಹಾಳಾಗಿದೆ
ಜಲದುರ್ಗ ಕೋಟೆ ಒಳ ಆವರಣದಲ್ಲಿ ನಿರ್ಮಿಸಿದ್ದ ಉದ್ಯಾನ ನಿರ್ವಹಣೆ ಇಲ್ಲದೆ ಹಾಳಾಗಿದೆ
ಜಲದುರ್ಗ ಕೋಟೆ ಸಂಪರ್ಕಿಸುವ ಕೃಷ್ಣಾ ನದಿ ಸೇತುವೆ
ಜಲದುರ್ಗ ಕೋಟೆ ಸಂಪರ್ಕಿಸುವ ಕೃಷ್ಣಾ ನದಿ ಸೇತುವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT