ಲಿಂಗಸುಗೂರು: ತಾಲ್ಲೂಕಿನಾದ್ಯಂತ ಕೋಟೆ ಕೊತ್ತಲು, ಪಾಳುಬಿದ್ದ ದೇವಸ್ಥಾನ, ಹಳೆ ಊರುಗಳಲ್ಲಿ ನಿಧಿಗಳ್ಳರ ಹಾವಳಿಗೆ ಜನತೆ ಬೇಸತ್ತು ಹೋಗಿದ್ದಾರೆ.
ಜಲದುರ್ಗ, ಮುದಗಲ್ಲ, ಕರಡಕಲ್ಲ, ಹುನಕುಂಟಿ, ಹಿರೆಉಪ್ಪೇರಿ ಸೇರಿದಂತೆ ಪಾಳು ಬಿದ್ದ ಸ್ಥಳಗಳನ್ನೇ ಗುರಿಯಾಗಿಸಿ ಕಲ್ಲು ಬಂಡೆ, ದೇವರ ಮೂರ್ತಿ, ಶಾಸನಗಳ ಸುತ್ತಮುತ್ತ ತಗ್ಗುಗುಂಡಿ ಅಗೆಯುತ್ತಿರುವುದು ಸಾಮಾನ್ಯವಾಗಿದೆ.
ನಿಧಿ ಹುಡುಕುವ ತಂಡಗಳಲ್ಲಿ ಆಂಜನ ಬಳಕೆ, ಪೂಜಾ ವಿಧಿವಿಧಾನ ಬಲ್ಲವರು, ಗುಂಡಿ ಅಗೆಯುವವರು ಸೇರಿದಂತೆ ಸಣ್ಣಪುಟ್ಟ ಘಟನೆ ಜರುಗಿದಾಗ ಸರಿಪಡಿಸುವಂತಹ ನಾಯಕತ್ವದ ಫೋಜು ನೀಡಿ ಅಹೋರಾತ್ರಿ ಹುಡುಕಾಟ ನಡೆಸುತ್ತಿದ್ದಾರೆ.
ಹಲವು ಸಂದರ್ಭಗಳಲ್ಲಿ ಸಂಶಯಾಸ್ಪದ ವ್ಯಕ್ತಿ, ವಾಹನ ತಿರುಗಾಡುವ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಗುತ್ತಿಗೆದಾರರು, ಸರ್ವೆ ಮಾಡುವವರು ಅಂತ ನುಣುಚಿಕೊಳ್ಳುತ್ತಿದ್ದಾರೆ ಎಂಬುದು ಬಹುತೇಕರ ಆರೋಪ.
ಭಾನುವಾರ ಅಥವಾ ಗುರುವಾರ ಅಮಾವಾಸ್ಯೆ ಬಂದಾಗ ಹಾಗೂ ಇತರೆ ಮುಹೂರ್ತ ಹುಡುಕುವ ನಿಧಿಗಳ್ಳರಿಗೆ ದೇವಸ್ಥಾನ, ಕೋಟೆ ಕೊತ್ತಲು, ಹಳೆ ಊರುಗಳ ಪಾಳುಬಿದ್ದ ಸ್ಥಳಗಳೇ ಗುರಿ ಮಾಡಿಕೊಂಡಿರುತ್ತಾರೆ.
ಹಿರೆಉಪ್ಪೇರಿ ಗ್ರಾಮದಲ್ಲಿ ವಾರದ ಹಿಂದೆ ಹಾಗೂ ಭಾನುವಾರ ಅಮಾವಾಸ್ಯೆ ದಿನ ಹಳೆ ಊರು ಪಾಳುಬಿದ್ದ ಸ್ಥಳದಲ್ಲಿ ಆಳವಾದ ಗುಂಡಿ ತೋಡಿದ್ದಾರೆ. ಜಮೀನು ಮಾಲೀಕರು ನಿಧಿಗಳ್ಳರ ಹಾವಳಿಗೆ ಬೇಸತ್ತು ಹೋಗಿದ್ದೇವೆ ಎಂಬುದು ಗ್ರಾಮಸ್ಥರ ಸಾಮೂಹಿಕ ಆರೋಪವಾಗಿದೆ.
ಆನೆಹೊಸೂರು ಸೇರಿದಂತೆ ಕೆಲವೆಡೆ ಸಂಶಯಾಸ್ಪದ ವ್ಯಕ್ತಿ ತಿರುಗಾಡುವ ವಾಹನ ಜಪ್ತಿ ಮಾಡಿ ಗ್ರಾಮಸ್ಥರು ನೀಡಿದ್ದರು. ಠಾಣೆಯಲ್ಲಿ ಗುರುತಿನ ಪತ್ರ ನೀಡಿ ಸಬೂಬು ಹೇಳಿಕೊಂಡು ಹೋಗಿದ್ದರಿಂದ ಮಾಹಿತಿ ನೀಡಲು ಹಿಂದೇಟು ಹಾಕುವಂತಾಗಿದೆ ಎಂಬುದು ಸಂಘ– ಸಂಸ್ಥೆಗಳ ದೂರು.
ನಿಧಿಗಳ್ಳರ ಹಾವಳಿ ಹೆಚ್ಚಿದೆ. ಅಧುನಿಕತೆ ತಂತ್ರಜ್ಞಾನ ಮತ್ತು ಸಂಶಯ ಬಾರದಂತ ಗುರುತಿನ ಕಾರ್ಡ್ ತೋರಿಸಿ ಪುಸಲಾಯಿಸುತ್ತಿದ್ದಾರೆ. ಹಿರೆಉಪ್ಪೇರಿ ಸುತ್ತಮುತ್ತಲ ನಡೆಯುತ್ತಿರುವ ನಿಧಿಗಳ್ಳರ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
‘ತಾಲ್ಲೂಕಿನಲ್ಲಿ ಕಳ್ಳತನ, ನಿಧಿಗಳ್ಳರ ಹಾವಳಿ, ಮಟಕಾ ಜುಜಾಟ ಯಥೇಚ್ಛವಾಗಿ ನಡೆಯುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸದಸ್ಯ ಪ್ರಭುಲಿಂಗ ಮೇಗಳಮನಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.