ರಾಯಚೂರು: ಸರ್ಕಾರಿ ಹುದ್ದೆಗಳಲ್ಲಿ ಶೇ 15 ಮೀಸಲಾತಿ ಕಲ್ಪಿಸಲು ಆಗ್ರಹ

ರಾಯಚೂರು: ರಾಜ್ಯ ಸರ್ಕಾರ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪಿಸಿ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಕೃಷಿ ತಾಂತ್ರಿಕ ಪದವೀಧರರಿಗೆ ಶೇ 5ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪಿಸುವಂತೆ ಆಗ್ರಹಿಸಿ ಅನೇಕ ಬಾರಿ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಕೃಷಿ ತಾಂತ್ರಿಕ ವಿಷಯ ಅಧ್ಯಯನ ಮಾಡುವವರಿಗೆ ಇದರಿಂದ ಉದ್ಯೋಗಾವಕಾಶ ಸೃಜನೆಯಾಗಲಿದೆ. ಸರ್ಕಾರ ಈ ವಿಚಾರದಲ್ಲಿ ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಈಗಾಗಲೇ ಕೃಷಿ ಅಧಿಕಾರಿ, ಸಹಾಯಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯಪತ್ರ ಹೊರಡಿಸಿದ್ದು, ಕೃಷಿ ತಾಂತ್ರಿಕ, ಆಹಾರ ತಂತ್ರಜ್ಞಾನ, ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಅಗ್ರಿ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್, ಜೈವಿಕ ತಂತ್ರಜ್ಞಾನ ಪದವೀಧರರನ್ನು ಶೇ 15ರಷ್ಟು ಪ್ರತಿಶತ ಆದ್ಯತೆಯೊಳಗೆ ಸೇರಿಸಲಾಗಿದೆ. ಆದರೆ, ಕೃಷಿ ಅಧಿಕಾರಿ, ಸಹಾಯಕ ಅಧಿಕಾರಿಗಳ ನೇಮಕಕ್ಕೆ ಶೇ 51ರಷ್ಟು ಮೀಸಲಾತಿ ನೀಡಬೇಕು.
ಕಳೆದ 15 ದಿನಗಳಿಂದ ಈ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ. ಆದರೆ, ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೃಷಿ ಸಚಿವರು ನಮ್ಮ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಇಡೀ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿಯ ಜಿಲ್ಲಾ ಪದಾಧಿಕಾರಿ ಬಸವಪ್ರಭು, ಮಹಾಂತೇಶ, ನವೀನ್, ಸತೀಶ ಲಂಬಾಣಿ, ವಿನಯಕುಮಾರ, ರೇಖಾ, ಸುಮಿತ್ರಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.