ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತಾಂತ್ರಿಕ ವಿದ್ಯಾರ್ಥಿಗಳಿಂದ ರ‍್ಯಾಲಿ

ಕೃಷಿ ಹುದ್ದೆಗಳಲ್ಲಿ ಶೇ 15 ರಷ್ಟು ಮೀಸಲಾತಿಗೆ ಒತ್ತಾಯ
Last Updated 23 ಜನವರಿ 2023, 15:42 IST
ಅಕ್ಷರ ಗಾತ್ರ

ರಾಯಚೂರು: ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ಕೃಷಿ ತಾಂತ್ರಿಕ (ಬಿಟೆಕ್‌) ಪದವೀಧರರಿಗೆ ಮಾತ್ರ ಶೇ 15 ರಷ್ಟು ಮೀಸಲಾತಿ ಕಲ್ಪಿಸಬೇಕು ಹಾಗೂ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪಿಸುವಂತೆ ಒತ್ತಾಯಿಸಿ ಕೃಷಿ ತಾಂತ್ರಿಕ ವಿದ್ಯಾರ್ಥಿಗಳು ನಡೆಸುತ್ತಿರುವ ಅಹೋರಾತ್ರಿ ಧರಣಿ ಸೋಮವಾರ ಒಂದು ವಾರ ಪೂರ್ಣಗೊಂಡಿದೆ.

ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಕೃಷಿ ವಿಶ್ವವಿದ್ಯಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಸೋಮವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು. ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಕೆಲಕಾಲ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಕೃಷಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಮತ್ತೆ ರ‍್ಯಾಲಿ ಮೂಲಕ ವಾಪಸ್ಸಾಗಿದ್ದು, ಧರಣಿ ಆರಂಭಿಸಿದ್ದಾರೆ. ರಾಜ್ಯದಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪಿಸುವಂತೆ ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಕಳೆದ ವರ್ಷ ಜೂನ್‌ನಲ್ಲಿ ಆದೇಶ ನೀಡಿದೆ. ಭಾರತೀಯ ಕೃಷಿ ಎಂಜಿನಿಯರುಗಳ ಸೊಸೈಟಿ (ಐಎಸ್‌ಎಇ) ಕೂಡಾ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯದ ಕೃಷಿ ಸಚಿವರಿಗೆ ಪತ್ರ ರವಾನಿಸಿದೆ. ಇದುವರೆಗೂ ಕೃಷಿ ತಾಂತ್ರಿಕ ಪದವೀಧರಿಗೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪಿಸುವುದಕ್ಕೆ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು..

ಕೃಷಿ ತಾಂತ್ರಿಕ ಪದವೀಧರರಿಗೆ ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಸಲಾಗುವುದು. ಕೂಡಲೇ ಮುಖ್ಯಮಂತ್ರಿ ಅವರು ಬೇಡಿಕೆಯನ್ನು ಪರಿಶೀಲಿಸಿ ಈಡೇರಿಸಬೇಕು. ಈ ಬೇಡಿಕೆಗೆ ಸ್ಪಂದನೆ ಸಿಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕವೊಂದನ್ನು ಹೊರತುಪಡಿಸಿ ಇನ್ನುಳಿದ ರಾಜ್ಯಗಳಲ್ಲಿ ಕೃಷಿ ತಾಂತ್ರಿಕ ಪದವೀಧರರಿಗೆ ಪ್ರತ್ಯೇಕ ಮೀಸಲಾತಿ ನೀಡಲಾಗಿದೆ. ಕೃಷಿ ತಾಂತ್ರಿಕ ನಿರ್ದೇಶನಾಲಯ ಕೂಡಾ ಸ್ಥಾಪಿಸಲಾಗಿದೆ. ಬೇರೆ ರಾಜ್ಯಗಳಲ್ಲಿರುವ ಓದುವ ಕೃಷಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ವ್ಯಾಪಕವಾದ ಅಧ್ಯಯನ ಮಾಡುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರವು ಅವಕಾಶ ವಂಚಿತರನ್ನಾಗಿ ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

2016–17 ರಲ್ಲಿ ಕೃಷಿ ತಾಂತ್ರಿಕ ವಿದ್ಯಾರ್ಥಿಗಳು ನಿರಂತರ ಪ್ರತಿಭಟನೆ ಮಾಡಿದ್ದರಿಂದ ರಾಜ್ಯ ಸರ್ಕಾರವು ಕೃಷಿ ಇಲಾಖೆಯ ನೇಮಕಾತಿ ಹುದ್ದೆಗಳಲ್ಲಿ ಶೇ 15 ರಷ್ಟು ಮೀಸಲಾತಿಗೆ ಆದೇಶ ಹೊರಡಿಸಿತ್ತು. ಇದೀಗ ಈ ಮೀಸಲಾತಿಯಲ್ಲಿ ಇನ್ನೂ ನಾಲ್ಕು ವಿಭಾಗಗಳ ಪದವೀಧರರನ್ನು ಸೇರ್ಪಡೆ ಮಾಡಿರುವುದರಿಂದ ಮೀಸಲಾತಿಯು ಅರ್ಥ ಕಳೆದುಕೊಂಡಿದೆ. ಈ ಮೀಸಲಾತಿಯು ಕೃಷಿ ತಾಂತ್ರಿಕ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಿಡಬೇಕು ಎನ್ನುವುದು ಈ ಧರಣಿಯ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸಿದ್ದಾರೂಢ ಪಾಟೀಲ, ಮಹಾಂತೇಶ ಗಾಣಿಗಿ, ಬಸವಚೇತನ ಮಹಾಜನ, ಮಲ್ಲೇಶ, ಪಿ.ದಿವ್ಯಾ, ಶ್ರಮೋದಯ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT