ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಮ್ಸ್‌ ಬೇಡಿಕೆ: ವ್ಯಾಪಕವಾಗುತ್ತಿದೆ ಹೋರಾಟ

ರಾಯಚೂರು ಜಿಲ್ಲೆಯ ವಿವಿಧ ಸಂಘಟನೆಗಳಿಂದ ಬೆಂಬಲ
Last Updated 25 ಮೇ 2022, 4:19 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯ ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂದು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏಮ್ಸ್‌ ಹೋರಾಟ ಸಮಿತಿಯಿಂದ ನಡೆಸುತ್ತಿರುವ ನಿರಂತರ ಧರಣಿಯು ಮಂಗಳವಾರ 12ನೇ ದಿನಕ್ಕೆ ಕಾಲಿರಿಸಿದೆ.

ಜಿಲ್ಲಾ ಜೆಡಿಎಸ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸೇರಿದಂತೆ ಪ್ರತಿದಿನ ವಿವಿಧ ಸಂಘಟನೆಗಳು ಧರಣಿಗೆ ಬೆಂಬಲ ವ್ಯಕ್ತಪಡಿಸಿ, ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಈಗಾಗಲೇ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಜಿಲ್ಲಾ ಸವಿತಾ ಸಮಾಜದಿಂದ ಬೆಂಬಲ ಸೂಚಿಸಲಾಯಿತು. ಸಮಾಜದ ಅಧ್ಯಕ್ಷ ವಿಜಯ ಭಾಸ್ಕರ್, ಬಸವರಾಜ, ಆಂಜನೇಯ, ಅಭಿ, ರಾಜು ಗದ್ವಾಲ್ಕರ್ ,ಮಂಜುನಾಥ್, ವೆಂಕಟಸ್ವಾಮಿ ,ನರಸಿಮ್ಲು, ಮುನಿಸ್ವಾಮಿ, ಸುಧಾಕರ್, ಪಾಂಡು, ಪಾಪಯ್ಯ 'ಆನಂದ್ 'ಸಿ ಸುರೇಶ್, ಜಿ ವೆಂಕಟೇಶ್ ಮತ್ತಿತರರು ಇದ್ದರು.

ರೈತ ಸಂಘಟನೆಗಳು ಹಾಗೂ ವಿವಿಧ ಸಮಾಜದ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದು, ಪ್ರತಿಭಟನೆ ಬಲವನ್ನು ಇಮ್ಮಡಿಗೊಳಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಮೂಲಕ ಪ್ರತಿಭಟನಾಕಾರರು ಮನವಿಯೊಂದನ್ನು ಸಲ್ಲಿಸಿದ್ದಾರೆ. ’ಈ ಬಗ್ಗೆ ನನ್ನದೆ ವಿಧಾನದಲ್ಲಿ ಪ್ರಯತ್ನಿಸಲಾಗುವುದು‘ ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ.

ಕಲ್ಯಾಣ ರ‍್ನಾಟಕ ಭಾಗದ ರಾಯಚೂರು ರಾಜ್ಯದ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಡಾ.ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ ಮಾಡಬೇಕು ಎಂದು ಮಹತ್ವದ ಶಿಫಾರಸು ಮಾಡಲಾಗಿತ್ತು.

ಈ ಕುರಿತು ಹೋರಾಟ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜಿಲ್ಲೆಯ ಹೆಸರು ಶಿಫಾರಸು ಪತ್ರ ಕಳಿಸಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರು ರಾಯಚೂರು, ಧಾರವಾಡ ಹಾಗೂ ಮೈಸೂರಿನ ಹೆಸರು ಶಿಫಾರಸು ಮಾಡಿ ಕಳುಹಿಸಿದರು. ಧಾರವಾಡದ ರಾಜಕೀಯ ನಾಯಕರು ರಾಜಕೀಯ ಶಕ್ತಿಯಿಂದ ಐಐಟಿ ಮಂಜೂರು ಮಾಡಿಕೊಂಡರು. ಜಗದೀಶ ಶೆಟ್ಟರ್ ಅವರ ದ್ವಂದ್ವ ನೀತಿಯಿಂದ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ದೂರಿದರು.

ರಾಯಚೂರು ಏಮ್ಸ್ ಹೋರಾಟ ಸಮಿತಿಯ ನಿಯೋಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು 2021ರ ಮರ‍್ಚ್ 25 ಭೇಟಿ ಮಾಡಿ ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವಂತೆ ಒತ್ತಾಯಿಸಿದಾಗ ಸಕಾರಾತ್ಮಕವಾಗಿ ಸ್ಪಂದಿಸಿ ಐಐಟಿ ವಂಚಿತ ರಾಯಚೂರಿಗೆ ಏಮ್ಸ್ ಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಚೆಗೆ ಬಂದ ಕೇಂದ್ರ ತಂಡಕ್ಕೆ ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಜಿಲ್ಲೆಗೆ ದ್ರೋಹ ಮಾಡಲು ಹೊರಟಿದ್ದಾರೆ.

ಈ ಕುರಿತು ಜಿಲ್ಲೆಯ ಶಾಸಕರು ಸದನದಲ್ಲಿ ಧ್ವನಿ ಎತ್ತದೇ ಮೌನ ವಹಿಸಿದ್ದು ಜಿಲ್ಲೆಯ ಜನತೆಗೆ ಮಹಾದ್ರೋಹ ಮಾಡಿದ್ದಾರೆ. ಜಿಲ್ಲೆಯ ದರ‍್ಬಲ ಸಂಸದ, ಶಾಸಕರ ವಿರುದ್ಧ ಈ ಹಿಂದೆ ಹೋರಾಟ ಮಾಡಿ ಎಚ್ಚರಿಸಿದರೂ ಸ್ಪಂದಿಸಿಲ್ಲ ಎಂಬುದು ಹೋರಾಟಗಾರರ ಆಕ್ರೋಶ.

ಏಮ್ಸ್ ಹೋರಾಟ ಸಮಿತಿಯಿಂದ ಬಸವರಾಜ ಕಳಸ, ಅಶೋಕಕುಮಾರ್ ಜೈನ್, ಎಸ್ ಮಾರೆಪ್ಪ ವಕೀಲರು,ವೆಂಕಟೇಶ್ ಆಚಾರಿ , ತಾಯಣ್ಣ ಯರಗೇರಾ, ಸುಲೋಚನ, ಬಶೀರ್ ಅಹ್ಮದ್ ಹೊಸ್ಮನೆ,ಪ್ರಸಾದ್ ಭಂಡಾರಿ, ಅಕ್ಬರ್ ಹುಸೇನ್ ನಾಗುಂಡಿ , ಬಸವರಾಜ್ ಮಿಮಿಕ್ರಿ ,ಕಾಮ್ ರಾಜ್ ಪಾಟೀಲ್ ,ರಮೇಶ್ ಭಂಡಾರಿ,ನರೇಂದ್ರ ಆರ್ಯ ಅವರು ಸಕ್ರಿಯವಾಗಿ ಧರಣಿಯನ್ನು ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT