ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮನ ಸೆಳೆಯುವ ಅಮರೇಶ್ವರ ದೈವಿ ವನ

ಪಂಚವಟಿವನ, ಸಂತಾನ ವನ, ರಾಶಿವನ, ಬೃಂದಾವನ ನಿರ್ಮಾಣ
ಅಕ್ಷರ ಗಾತ್ರ

ಲಿಂಗಸುಗೂರು: ದೇವಸ್ಥಾನ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವ ‘ದೈವಿ ವನ’ ಮಹತ್ವಾಕಾಂಕ್ಷಿ ಯೋಜನೆ ಸುಕ್ಷೇತ್ರ ಗುರುಗುಂಟಾ ಅಮರೇಶ್ವರದಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಧಾರ್ಮಿಕ ಮೌಲ್ಯಗಳನ್ನು ಹೆಚ್ಚಿಸುವ, ವೈಜ್ಞಾನಿಕ ಮಹತ್ವ ಪಡೆದಿರುವಂತಹ ಗಿಡ ಮರಗಳು, ಔಷಧಿ ಸಸಿಗಳ ಸಂರಕ್ಷಣೆ ಜೊತೆಗೆ ಭಕ್ತರು, ಪ್ರವಾಸಿಗರು ವಿಶ್ರಾಂತಿ ಪಡೆಯುವ ಸದುದ್ದೇಶ ಈಡೇರಿದೆ. ದೈವಿವನ ಯೋಜನೆ ಅನುಷ್ಠಾನಕ್ಕೆ ನೂರು ಹೆಕ್ಟೇರ್‌ ಪ್ರದೇಶ ಗುರುತಿಸಲಾಗಿದೆ. ಈ ಪೈಕಿ ಹತ್ತು ಹೆಕ್ಟೇರ್‌ ಪ್ರದೇಶದಲ್ಲಿ ನಿರ್ಮಿಸಿದ ಉದ್ಯಾನ ಒಮ್ಮೆ ನೋಡಬೇಕು ಎಂದೆನ್ನಿಸುತ್ತದೆ.

ತಾಲ್ಲೂಕಿನ ಸುಕ್ಷೇತ್ರ ಗುರುಗುಂಟಾ ಅಮರೇಶ್ವರದ ಪಶ್ಚಿಮ ದಿಕ್ಕಿನಲ್ಲಿ ತಲೆ ಎತ್ತಿ ನಿಂತಿರುವ ದೈವಿವನ ಭಕ್ತಿ ಭಾವದಿಂದ ಕ್ಷೇತ್ರಕ್ಕೆ ಬಂದ ಭಕ್ತರಿಗೆ ಹಸಿರುಮಯ ವಾತಾವರಣ ವಿಶ್ರಾಂತಿಗೆ ಹೆಚ್ಚು ಅನುಕೂಲವಾಗಿದೆ. ದೈವಿವನ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಗಿಡ ಮರಗಳ ಮಧ್ಯೆ ಬೃಹದಾಕಾರದ ಶಿವನ ಮೂರ್ತಿ ಕಾಣಸಿಗುತ್ತದೆ.

ಅನತಿ ದೂರದಲ್ಲಿ ಪೌರಾಣಿಕ ಸಂದೇಶ ಸಾರುವ ಸೀತಾದೇವಿ, ಮಹರ್ಷಿ ವಾಲ್ಮೀಕಿ, ಲವ, ಕುಶರಿಗೆ ವಿದ್ಯಾರ್ಜನೆ ಮಾಡುವಂತ ಲವಕುಶ ಆಶ್ರಮ ಕಾಣಸಿಗುತ್ತದೆ. ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಬಳಸುವ ಹಾಗೂ ವಿವಿಧ ಬಗೆಯ ಔಷಧಿ ಸಸಿಗಳನ್ನು ಬಳಸಿ ಪಂಚವಟಿವನ, ಸಂತಾನ ವನ, ರಾಶಿವನ, ಬೃಂದಾವನ, ತುಳಸಿ ವನ, ತ್ರಿಫಲನ ವನಗಳನ್ನು ವೀಕ್ಷಿಸಬಹುದಾಗಿದೆ.

ಅರಣ್ಯ ಮತ್ತು ವನ್ಯಜೀವಿ ಮಾಹಿತಿ ಕೇಂದ್ರ, ವಾಹು ವಿಹಾರಕ್ಕೆಂದು ಪಾದಚಾರಿ ರಸ್ತೆ, ಶುದ್ಧ ಕುಡಿವ ನೀರು, ಅಲ್ಲಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳ ಮನೋರಂಜನೆಗೆ ವಿವಿಧ ಬಗೆಯ ಕ್ರೀಡಾ ಸಾಮಗ್ರಿಗಳ ಜೋಡಣೆ, ತೂಗುಸೇತುವೆ ಉದ್ಯಾನ ವೀಕ್ಷಣಾ ಗೋಪುರ, ಪರಗೋಲ್, ಮರಗಳ ಸುತ್ತ ಕಟ್ಟೆ ನಿರ್ಮಾಣ, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾವಿರಕ್ಕೂ ಹೆಚ್ಚು ಧಾರ್ಮಿಕ ಮಹತ್ವವುಳ್ಳ ವಿವಿಧ ಬಗೆಯ ಗಿಡ–ಮರಗಳು, ಔಷಧಿ ಗುಣಗಳ ಸಸಿಗಳ ನಾಟಿ ಮಾಡಲಾಗಿದೆ. ಅಲಂಕಾರಿಕ ಬಳಿ, ಗಿಡಗಳ ನಾಟಿಯಿಂದ ಉದ್ಯಾನ ಆಕರ್ಷಕವಾಗಿದೆ.

‘ಗುರುಗುಂಟಾ ಅಮರೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಅರಣ್ಯ ಇಲಾಖೆ ಧಾರ್ಮಿಕ ಮಹತ್ವವುಳ್ಳ ಗಿಡ–ಮರಗಳು, ವನೌಷಧಿ ಸಸಿ ಬೆಳೆಸಿ ಸುಂದರ ಉದ್ಯಾನ ನಿರ್ಮಿಸಿದೆ. ಈಗಾಗಲೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು, ಪ್ರವಾಸಿಗರು, ಅಧ್ಯಯನ ಮಾಡುವವರು ಬಂದು ಹೋಗುತ್ತಿದ್ದಾರೆ’ ಎಂದು ವಲಯ ಅರಣ್ಯಾಧಿಕಾರಿ ಚೆನ್ನಬಸವರಾಜ ಕಟ್ಟಿಮನಿ ಹೇಳುತ್ತಾರೆ.

ಹೇಳಿಕೆ...

ರಾಜ್ಯ ಸರ್ಕಾರದ ದೈವಿವನ ಯೋಜನೆಯಡಿ ನಿರ್ಮಾಣಗೊಂಡ ದೈವಿವನ ಉದ್ಯಾನಕ್ಕೆ ಬರುವ ಭಕ್ತರು, ಪ್ರವಾಸಿಗರು ಖುದ್ದು ಭೇಟಿ ಮಾಡಿ ಅಥವಾ ದೂರವಾಣಿ ಮೂಲಕ ಹರ್ಷ ಹಂಚಿಕೊಳ್ಳುತ್ತಿದ್ದಾರೆ.
ಚೆನ್ನಬಸವರಾಜ ಕಟ್ಟಿಮನಿ, ವಲಯ ಅರಣ್ಯಾಧಿಕಾರಿ, ಲಿಂಗಸುಗೂರು ವಲಯ

ಸುಕ್ಷೇತ್ರದ ಜಾತ್ರೆ ಸೇರಿದಂತೆ ವರ್ಷಪೂರ್ತಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ದೇವರ ದರ್ಶನಕ್ಕೆ ಬಂದು ಹೋಗುವ ಭಕ್ತರಿಗೆ ದೈವಿವನ ಹೆಚ್ಚು ಆಕರ್ಷಿತವಾಗಿದೆ. ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡಿದೆ
ಅಭಿನವ ಗಜದಂಡ ಶಿವಾಚಾರ್ಯರು, ತೋಪಿನಕಟ್ಟಿ ಬೃಹನ್ಮಠ, ದೇವರಭೂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT