ಶನಿವಾರ, ಜನವರಿ 18, 2020
26 °C
ಬಿಜೆಪಿಯಿಂದ ರಾಷ್ಟ್ರಧ್ವಜ ಮೆರವಣಿಗೆ, ಸಾರ್ವಜನಿಕ ಸಭೆ

'ಸಿಎಎ, ನಾರಿಕತ್ವ ಕಸಿಯುವ ಕಾಯ್ದೆಯಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: 'ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಮುಸಲ್ಮಾನರೂ ಸೇರಿದಂತೆ ದೇಶದಲ್ಲಿರುವ ಯಾವುದೇ ನಾಗರಿಕರ ಪೌರತ್ವ ಕಸಿದುಕೊಳ್ಳುವ ಉದ್ದೇಶ ಇಲ್ಲ'  ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿಬ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ಮಹಾತ್ಮ ಗಾಂಧಿ ಜಿಲ್ಲಾ‌ ಕ್ರೀಡಾಂಗಣದಲ್ಲಿ ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಸಿಎಎ ಬೆಂಬಲಿಸಿ ರಾಷ್ಟ್ರಧ್ವಜ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ವೈಚಾರಿಕ ದಿವಾಳಿಗೆ ಒಳಗಾಗಿರುವ ಕಾಂಗ್ರೆಸ್ ನಾಯಕರು ದೇಶದ್ರೋಹದ ಹೇಳಿಕೆಗಳನ್ನು ನೀಡುತ್ತಿದ್ದಾರೆ. 1970 ರ ಪೂರ್ವದಲ್ಲಿ ಬೇರೆ ದೇಶಗಳಿಂದ ವಲಸೆ ಬಂದಿವವರಿಗೆ ನಾಗರಿಕತ್ವ ನೀಡುವ ಉದ್ದೇಶದಿಂದ ಸಿಎಎ ಜಾರಿಗೊಳಿಸಲಾಗಿದೆ. ಆದರೆ, ಕಾಂಗ್ರೆಸ್ ಮುಖಂಡರು ಜನರ ದಾರಿ ತಪ್ಪಿಸಲು ಏನೆನೋ ತಪ್ಪು ಸಂದೇಶಗಳನ್ನು ನೀಡುತ್ತಿದ್ದಾರೆ ಎಂದರು.

ದೇಶದಲ್ಲಿರುವ ಮುಸಲ್ಮಾನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆದರೆ, ಪಾಕಿಸ್ತಾನದಲ್ಲಿರುವ ಹಿಂದುಗಳಿಗೆ ನೀರು ಸಹ ಕೊಡದಂತೆ ಚಿತ್ರಹಿಂಸೆ ನೀಡಲಾಗುತ್ತಿದೆ. ಅಂಥವರಿಗೆ ನಮ್ಮ ದೇಶದಲ್ಲಿ ವಾಸಿಸುವ ಹಕ್ಕು ನೀಡುವುದ ಬೇಡವೆ? ಪೌರತ್ವ ಕಾಯ್ದೆಯ ಹೆಸರಿನಲ್ಲಿ ಅಶಾಂತಿಯನ್ನು ಮೂಡಿಸುವ ಕೆಲಸವನ್ನು ಕಾಂಗ್ರೆಸ್‌ ಸೇರಿದಂತೆ ಕೆಲವು ಪಕ್ಷಗಳು ಮಾಡುತ್ತಿವೆ. ಸಿಎಎ ಕಾಯ್ದೆ ಬಗ್ಗೆ ಮೊಟ್ಟಮೊದಲು ದೇಶದಲ್ಲಿ ಲೋಕಸಭೆಯಲ್ಲಿ ಮಾತನಾಡಿದ್ದು, ಪ್ರಧಾನಿಯಾಗಿದ್ದ ಮನ್‌ಮೋಹನ್‌ ಸಿಂಗ್‌ ಅವರು ಎಂದು ತಿಳಿಸಿದರು.

ವ್ಯವಸ್ಥಿತ ಪಿತೂರಿ ಮೂಲಕ ಹಿಂದೂ–ಮುಸಲ್ಮಾನರ ಸಂಬಂಧವನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದು, ಇದರ ವಿರುದ್ಧ ಎಚ್ಚರಿಕೆಯಿಂದ ಇರಬೇಕು. ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್‌ ಮತ್ತು ಎಡಪಕ್ಷಗಳ ನಾಯಕರು ಏನೆನೋ ಹೇಳಿಕೆ ನೀಡುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್‌ ಕಾಯ್ದೆಗಳನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕೋರಿದರು.

ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿರುವ ಯಾವ ನಾಗರಿಕರಿಗೂ ತೊಂದರೆಯಿಲ್ಲ. ಆದರೆ, ಕಾನೂನು ಬಾಹಿರವಾಗಿ ನುಸುಳಿಕೊಂಡು ಬಂದು, ಕಣ್ಣು ತಪ್ಪಿಸಿಕೊಂಡು ಇರುವವರಿಗೆ ತೊಂದರೆ ತಪ್ಪಿದ್ದಲ್ಲ’ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ದೇಶ ವಿಭಜನೆಯಿಂದಾಗಿ ದೇಶದೊಳಗೆ ಸಂಕಷ್ಟ ಅನುಭವಿಸುತ್ತಾ ಬಂದಿರುವವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಬಹಳ ಅನುಕೂಲವಾಗಿದೆ. ಸಿಂಧನೂರು ತಾಲ್ಲೂಕಿನಲ್ಲಿರುವ ಬೆಂಗಾಲಿ ಕ್ಯಾಂಪ್‌ ಜನರಿಗೆ ಬಹಳ ಖುಷಿಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೇವರ ಸ್ವರೂಪದಲ್ಲಿ ಕಾಣುತ್ತಿದ್ದಾರೆ. ತೊಂದರೆಯಲ್ಲಿರುವ ಜನರಿಗೆ ಈ ಕಾಯ್ದೆಯ ಮಹತ್ವ ಅರ್ಥವಾಗಿದೆ. ಬೇರೆಯವರಿಗೆ ಇದು ತಿಳಿಯುವುದಿಲ್ಲ. ದೇಶದಲ್ಲಿರುವ 130 ಕೋಟಿ ಜನರಿಗೆ ಇದರಿಂದ ಸಮಸ್ಯೆಯಿಲ್ಲ. ಆದರೆ, ಕಾನೂನು ಬಾಹಿರ ನುಸುಳಿ ಬಂದವರಿಗೆ ಮಾತ್ರ ತೊಂದರೆ ಇದೆ’ ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಶರಣಪ್ಪಗೌಡ, ಶಾಸಕರಾದ ಡಾ.ಶಿವರಾಜ ಪಾಟೀಲ, ಶಿವನಗೌಡ ನಾಯಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಮುಖಂಡರಾದ ಎನ್‌.ಶಂಕ್ರಪ್ಪ, ಬಸನಗೌಡ ಬ್ಯಾಗವಾಟ, ಅಶೋಕ ಗಸ್ತಿ, ಆರ್‌.ತಿಮ್ಮಯ್ಯ, ಸುಮತಿ, ಸುಶೀಲಾ ಗಣೇಶ, ಎನ್‌.ಕೇಶವ ರೆಡ್ಡಿ, ಶ್ರೀನಿವಾಸರೆಡ್ಡಿ, ಕಡಗೋಳ ಆಂಜೀನೇಯ್ಯ, ತ್ರಿವಿಕ್ರಮ ಜೋಶಿ, ಗಂಗಾಧರ ನಾಯಕ ನೇತೃತ್ವ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಂ.ಪಾಟೀಲ ನಿರೂಪಿಸಿದರು. ಶಾಸಕ ಡಾ.ಶಿವರಾಜ ಪಾಟೀಲ ಸ್ವಾಗತಿಸಿದರು.

ರಾಷ್ಟ್ರಧ್ವಜ ಮೆರವಣಿಗೆ: ಕರ್ನಾಟಕ ಸಂಘದಿಂದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೂ ಬೃಹತ್‌ ರಾಷ್ಟ್ರಧ್ವಜ ಮೆರವಣಿಗೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರು ಭಾಗಿಯಾಗಿ, ಕಾರ್ಯಕರ್ತರು ದೇಶದ ಪರವಾಗಿ ಘೋಷಣೆಗಳನ್ನು ಕೂಗಿದರು. ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಮೆರವಣಿಗೆ ನಡೆಯಿತು. ಸುಮಾರು 300 ಮೀಟರ್‌ ಉದ್ದದ ರಾಷ್ಟ್ರಧ್ವಜವನ್ನು ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಹಿಡಿದುಕೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು