ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನದ ತಲ್ಲಣಗಳಿಗೆ ಕಾವ್ಯ ರೂಪ

‘ಗಿರಿರಾಜನ ಪದ್ಯಗಳು’ ಕೃತಿ ಬಿಡುಗಡೆ: ಪ್ರೊ.ವೆಂಕಟಗಿರಿ ದಳವಾಯಿ ಅಭಿಮತ
Last Updated 28 ಫೆಬ್ರುವರಿ 2021, 6:12 IST
ಅಕ್ಷರ ಗಾತ್ರ

ಸಿಂಧನೂರು: ‘ಪ್ರಸ್ತುತ ಭಾರತವನ್ನಾಳುವ ವರ್ಗ ಜನ ಸಮುದಾಯದ ಮೇಲೆ ಹೇರುತ್ತಿರುವ ಕಾನೂನು ಕಟ್ಟಳೆಗಳನ್ನು ಸೂಕ್ಷ್ಮತೆಯಿಂದ ಎದುರಿಸುತ್ತ, ಆ ತಲ್ಲಣಗಳಿಗೆ ಅಲ್ಲಾಗಿರಿರಾಜರ ಕಾವ್ಯವು ಬದುಕುವ ಹಲವು ದಾರಿಗಳನ್ನು ತೋರಿಸುತ್ತದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ವೆಂಕಟಗಿರಿ ದಳವಾಯಿ ಅವರು ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ ಬಂಡಾರ ಪ್ರಕಾಶನ ಮಸ್ಕಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕವಿ ಅಲ್ಲಾಗಿರಿರಾಜರ ‘ಗಿರಿರಾಜನ ಪದ್ಯಗಳು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕವಿಯು ಕೇವಲ ಆರಾಧನಾ ಸ್ವರೂಪದ, ಆದರ್ಶಗಳ ಪ್ರತಿಪಾದನೆಯಲ್ಲಿರದೆ, ವರ್ತಮಾನದ ತಲ್ಲಣಗಳು, ಜನ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕಾವ್ಯವಿದ್ದರೆ ಸಾರ್ವಕಾಲಿಕವಾಗಿರುತ್ತದೆ. ಅಂತಹ ಶಕ್ತಿ ಗಿರಿರಾಜರ ಪದ್ಯಗಳಲ್ಲಿ ಕಾಣಬಹುದು’ ಎಂದರು.

‘ಧರ್ಮದ ನಶೆ ಏರಿಸುವ ಕಾಣದ ಕೈಗಳ ಬಗ್ಗೆ ಇಂದಿನ ಯುವಕರು ಜಾಗರೂಕತೆಯಿಂದಿರಬೇಕು ಮತ್ತು ದೇಶಪ್ರೇಮವೆಂದು ತಪ್ಪುದಾರಿಗೊಯ್ಯುವ ಬೇಟೆಗಾರರ ಬಗ್ಗೆ ಎಚ್ಚರವಿರಬೇಕು’ ಎಂದು ಕಿವಿಮಾತು ಹೇಳಿದರು.

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಬಸವರಾಜ ಕೋಡಗುಂಟಿ ಮಾತನಾಡಿ,‘ಕವಿಯ ಕಾರ್ಯವು ಕೇವಲ ಮನರಂಜನೆಯಲ್ಲ. ಅದು ಗುರುತರ ಜವಾಬ್ದಾರಿಯನ್ನು ಹೊಂದಿದ ಕೆಲಸ. ಬಹುತ್ವದ ನಾಡಿನಲ್ಲಿ ಧರ್ಮ, ಜಾತಿ, ಲಿಂಗ ತಾರತಮ್ಯಗಳು ಇಂದಿಗೂ ವ್ಯಾಪಿಸುತ್ತ, ಕೌರ್ಯವನ್ನು ಮೆರೆಯುತ್ತಿವೆ. ಅವುಗಳನ್ನು ವಿರೋಧಿಸುತ್ತಲೇ ಪ್ರೀತಿ-ಭಕ್ತಿ, ಧರ್ಮ-ಸಮಾಜ, ಮದಿರೆ-ಮುಕ್ತಿ ಇವುಗಳನ್ನು ಜನಮನದ ಹತ್ತಿರದಲ್ಲಿ ನಿಂತು ಹಾಡುವ ಕವಿ ಅಲ್ಲಾಗಿರಿರಾಜ್ ಕನಕಗಿರಿ’ ಎಂದು ಹೇಳಿದರು.

‘ಗಿರಿರಾಜರ ಪದ್ಯಗಳು’ ಕೃತಿಯನ್ನು ಪರಿಚಯ ಮಾಡುತ್ತ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ,‘ಕನ್ನಡದ ಮಹತ್ವದ ಸಾಹಿತಿಗಳಲ್ಲಿ ಅಲ್ಲಾಗಿರಿರಾಜ್ ಒಬ್ಬರು. ಕನ್ನಡಕ್ಕೆ ಗಜಲಿನ ಘಮಲನ್ನು, ಸುಗಂಧವನ್ನು ಹಬ್ಬಿಸಿದ್ದಾರೆ’ ಎಂದು ವಿವರಿಸಿದರು.

ನಂತರ ಕೃತಿಕಾರ ಅಲ್ಲಾಗಿರಿರಾಜ ಮಾತನಾಡಿ ‘ನನ್ನ ಕುಟುಂಬವು ಬಡತನದ ಬೇಗೆಯಲ್ಲೇ ಬಂದಿದೆ.

ತಂದೆ ಕಟ್ಟಿಗೆ ಸೀಳುತ್ತಲೇ ತನ್ನ ಆಕ್ರೋಶವನ್ನು ಹೊರಹಾಕಿದ, ತಾಯಿ ಸಂಪತ್ತಿನ ಮನೆಯಲ್ಲಿ ಕಾರ ಕುಟ್ಟುತ್ತ ನಮಗಿಷ್ಟು ಬಡಿಸಿ ತಿಂದು ಬೆಳೆಸಿದ ಅವರ ನೋವು ನಲಿವುಗಳೇ ನನ್ನ ಕಾವ್ಯದ ಸತ್ವ’ ಎಂದರು.

ಕಾಲೇಜಿನ ಪ್ರಾಧ್ಯಾಪಕ ಬಸವರಾಜ ತಡಕಲ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಕೆ.ಖಾದರ್‍ಬಾಷ, ಸಂಗನಗೌಡ, ಹನಮನಗೌಡ, ಡಾ.ಸೈಯ್ಯದ್ ಮುಜೀಬ್ ಅಹ್ಮದ್, ಸಾಹಿತಿ ಹೆಚ್.ಜಿ.ಹಂಪಣ್ಣ ಹಾಗೂ ಬಂಡಾರ ಪ್ರಕಾಶನದ ಪರಶುರಾಮ ಕೋಡಗುಂಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT