ಬುಧವಾರ, ಏಪ್ರಿಲ್ 1, 2020
19 °C

ಉದ್ಯೋಗ ಖಾತ್ರಿಯಲ್ಲಿ ಭ್ರಷ್ಟಾಚಾರ ಆರೋಪ; ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಭಾರಿ ಭ್ರಷ್ಟಾಚಾರ ನಡೆದಿದ್ದು, ಕಾರ್ಮಿಕರಿಗೆ ನಿಗದಿತ ಕೂಲಿ ಪಾವತಿಸದೇ ಕಡಿಮೆ ಕೆಲಸದ ನೆಪದಡಿ ₹8ರಿಂದ 12  ಮಾತ್ರ ಕೂಲಿ ಪಾವತಿಸಿ ಜೀತ ಪದ್ದತಿ ರೀತಿಯಲ್ಲಿ ಕೆಲಸ ಮಾಡಿಸಿಕೊಂಡು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಗ್ರಾಮೀಣ ಕೂಲಿಕಾರರ ಸಂಘ (ಗ್ರಾಕೂಸ್) ರಾಜ್ಯ ಕಾರ್ಯದರ್ಶಿ ಆಭಯ ಆರೋಪಿಸಿದರು.

ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಗುಳೆ ಹೋಗುವುದನ್ನು ತಡೆಯಲು ಜಾರಿಗೆ ತರಲಾದ ಉದ್ಯೋಗ ಖಾತ್ರಿ ಯೋಜನೆಯನ್ನು ನಿಯಮಬಾಹಿರವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಯೋಜನೆಯಡಿ ಕಾರ್ಮಿಕರಿಗೆ ಅವರು ವಾಸವಾಗಿರುವ ಗ್ರಾಮದಲ್ಲಿಯೇ ಕೆಲಸ ನೀಡಬೇಕಿದ್ದರೂ ಕೂಡ ಬೇರೆ ಗ್ರಾಮಗಳಲ್ಲಿ ಗುಡ್ಡಗಾಡು ಹಾಗೂ ಇತರೆಡೆ ಕೆಲಸ ನೀಡಲಾಗುತ್ತಿದೆ. ಅಲ್ಲಿಗೆ ಹೋಗುವಷ್ಟರಲ್ಲಿ ಹೆಚ್ಚಿನ ಸಮಯವಾಗುವುದರಿಂದ ಕಡಿಮೆ ಕೆಲಸದ ನೆಪ ನೀಡಿ ನಿಗದಿತ ಕೂಲಿ ಪಾವತಿಸುತ್ತಿಲ್ಲ. ₹8ರಿಂದ ₹12 ಕೂಲಿ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಸಿಇಓ, ಪಿಡಿ ಸೇರಿಕೊಂಡು ಜೀತ ಪದ್ದತಿಯಂತೆ ಕೆಲಸ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಕೆಲಸ ಮಾಡುವ ಸ್ಥಳಗಳಲ್ಲಿ ಕುಡಿಯುವ ನೀರು, ಟೆಂಟ್ ಹಾಕಿ ನೆರಳಿನ ವ್ಯವಸ್ಥೆ ಮಾಡಬೇಕು. ಗಾಯಗೊಂಡವರನ್ನು ಚಿಕಿತ್ಸೆ ನೀಡಿ ನಿರುದ್ಯೋಗ ಭತ್ಯೆ ನೀಡಬೇಕಿದ್ದರೂ ಒದಗಿಸಿಲ್ಲ, ಜಿಲ್ಲೆಯ ಹಲವೆಡೆ ನರೇಗ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಿಲ್ಲ, ಕಾಮಗಾರಿ ಮಾಡಿದ ಬಗ್ಗೆ ನಿಗದಿತ ಅಳತೆ, ಮಾಪನ ಸಂಗ್ರಹಿಸುತ್ತಿಲ್ಲ. ಕನಿಷ್ಟ ಮಾನವ ದಿನಗಳ ಕೆಲಸ ನೀಡಿಲ್ಲ, ಜೆಸಿಬಿಗಳ ಮೂಲಕ ಕೆಲಸ ನಿರ್ವಹಣೆ ಮಾಡಿ ಕಾರ್ಮಿಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭಾರಿ ಭ್ರಷ್ಟಾಚಾರವೆಸಗಿದ್ದಾರೆ ಎಂದರು.

ಪಿಡಿಓ, ತಾಲ್ಲೂಕು ಪಂಚಾಯಿತಿ ಇ.ಓ ಸೇರಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ. ಇವರ ವಿರುದ್ಧ ದೂರು ನೀಡಿದರೂ ಜಿಲ್ಲಾ ಪಂಚಾಯಿತಿಯಿಂದ ಕ್ರಮವಾಗುತ್ತಿಲ್ಲ ಎಂದು ಆರೋಪಿಸಿದರು.

ನ್ಯಾಯಯುತ ಬೇಡಿಕೆಗೆ ಆಗ್ರಹಿಸಿ ಮಂಗಳವಾರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. 144 ಸೆಕ್ಷನ್ ಜಾರಿಯಾದ ಹಿನ್ನೆಲೆಯಲ್ಲಿ ಹೋರಾಟ ಹಿಂಪಡೆಯಲು ಸೂಚಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ನಾವು  ಕೇವಲ ಐದು ಮುಖಂಡರು ಮಾತ್ರ ಅನಿರ್ಧಿಷ್ಟಾ.ವಧಿ ಧರಣಿ ಮಾಡುತ್ತೇವೆಂದು ಮನವಿ ಮಾಡಿದರೂ ಕೂಡ ಅವಕಾಶ ನಿಡದೇ, ಪೊಲೀಸರ ಮೂಲಕ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿದರು.

ಕಾರ್ಮಿಕರ ಬಾಕಿ ವೇತನ ಪಾವತಿ ಹಾಗೂ ನರೇಗಾ ಯೋಜನೆಯಡಿ ಭ್ರಷ್ಠಾಚಾರದ ಕುರಿತು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿದ್ದರ ಪರಿಣಾಮ ಎರಡು ವಾರದೊಳಗೆ ಜಿಲ್ಲಾ ಪಂಚಾಯಿತಿಗೆ ಲಿಖಿತ ಉತ್ತರ ನೀಡಲು ಸೂಚಿಸಿದ್ದು 23ರೊಳಗೆ ಗಡವು ನೀಡಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಸವರಾಜ, ಗುರುರಾಜ ಮಂದಕಲ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು