ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ್‌ ದೀಕ್ಷೆ ಸ್ವೀಕರಿಸಿದ ಚಂದನಾಳಿಗೆ ಅದ್ದೂರಿ ಮೆರವಣಿಗೆ

Last Updated 19 ನವೆಂಬರ್ 2021, 12:50 IST
ಅಕ್ಷರ ಗಾತ್ರ

ಸಿಂಧನೂರು: ನಗರದ ರಾಜೇಂದ್ರ ಕುಮಾರ ನಾಹರ್ ಅವರ ಪುತ್ರಿ ಚಂದನಾ ನಾಹರ ಅವರು ಡಿಸೆಂಬರ್‌ 2 ರಂದು ಜೈನ್‌ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲು ತೀರ್ಮಾನಿಸಿದ್ದು, ತನಿಮಿತ್ತ ಜೈನ್‌ ಸಮಾಜದಿಂದ ನಗರದಲ್ಲಿ ಶುಕ್ರವಾರ ಬೃಹತ್ ಮೆರವಣಿಗೆ ನಡೆಸಲಾಯಿತು.

ಚಂದನಾ ಅವರನ್ನು ಆನೆಯ ಮೇಲೆ ಕುಳ್ಳಿರಿಸಿ ಸಡಗರ ಸಂಭ್ರಮದಿಂದ ಮೆರವಣಿಗೆ ನಡೆಸಲಾಯಿತು. ಭಗವಾನ್ ಮಹಾವೀರ ರಸ್ತೆಯಿಂದ ಪ್ರಾರಂಭವಾದ ಮೆರವಣಿಗೆ ರಾಯಚೂರು-ಗಂಗಾವತಿ ಮುಖ್ಯ ರಸ್ತೆ, ಗಾಂಧಿವೃತ್ತ, ಬಸ್ ನಿಲ್ದಾಣ ಮುಂಭಾಗದ ರಸ್ತೆ, ಬಸವ ಸರ್ಕಲ್‌ ಮುಖಾಂತರ ಜೈನ್‌ ಕಲ್ಯಾಣ ಮಂಟಪ ತಲುಪಿತು.

ಮೆರವಣಿಗೆಯಲ್ಲಿ ಜೈನ್‌ ಸಮಾಜದ ಬಂಧುಗಳಿಂದ ‘ಬಾಳು ಮತ್ತು ಬಾಳಲು ಬಿಡು’, ‘ಅಹಿಂಸೋ ಪರಮಧರ್ಮ’ ‘ಚಂದನಾ ಸಂಯಮ ಯಾತ್ರೆ ಯಶಸ್ವಿಯಾಗಲಿ’, ‘ದೀಕ್ಷೆ ಪಡೆದ ಚಂದನಾ ಅವರಿಗೆ ಜಯವಾಗಲಿ’, ಎನ್ನುವ ಘೋಷಣೆಗಳು ಮೊಳಗಿದವು. ಬೆಳಗಿನ ಸಮಯದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು.

ಆನೆಯ ಮೇಲೆ ಹೊರಟ ಮೆರವಣಿಗೆಯಲ್ಲಿ ಕುಳಿತ ಚಂದನಾ ಅವರು ವಾದ್ಯ ಮತ್ತು ವಿವಿಧ ಹಾಡುಗಳಿಗೆ ತಕ್ಕಂತೆ ಕುಳಿತಲ್ಲಿಯೆ ನೃತ್ಯ ಮಾಡಿದರು. ಮೆರವಣಿಗೆಯಲ್ಲಿ ಭಾಗವಹಿಸಿದ ತಂದೆ, ತಾಯಿ ಸೇರಿದಂತೆ ನೂರಾರು ಜನರು ವಿವಿಧ ಹಾಡುಗಳಿಗೆ ಹೆಜ್ಜೆ ಹಾಕಿದರು.
ಸಮಾಜದ ಪ್ರಮುಖರಾದ ಶ್ರೇಣಿಕರಾಜಶೆಟ್, ಅಶೋಕ ಕುಮಾರ ಚಲ್ಲಾನಿ, ಸುಜೀತ್ ಕುಮಾರ ಉಸ್ತುವಾಲ್ ಮತ್ತಿತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಚಂದನಾಳ ಜೊತೆಗೆ ಭಾವನಾ ನಾಹರ್ ಅವರನ್ನು ಆನೆಯ ಮೇಲೆ ಕುಳ್ಳಿರಿಸಲಾಗಿತ್ತು. ಹಾದಿಯುದ್ದಕ್ಕೂ ಹೊರಟ ಮೆರವಣಿಗೆ ಮತ್ತು ನೃತ್ಯ ಪ್ರೇಕ್ಷಕರ ಗಮನಸೆಳೆಯಿತು. ನೂರಾರು ಮಹಿಳೆಯರು ಬಂದು ಮೆರವಣಿಗೆಯನ್ನು ವೀಕ್ಷಿಸಿ ಚಂದನಾ ಹಂಚಿದ ಸಿಹಿ ತಿನಿಸುಗಳನ್ನು ಪಡೆದರು.
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಗಣ್ಯರನ್ನು, ಸಮಾಜದ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ದೀಕ್ಷೆ ಪಡೆಯಲು ನಿರ್ಧರಿಸಿರುವ ಚಂದನಾ ಅವರಿಗೆ ಸಮಾಜದ ನೂರಾರು ಮಹಿಳೆಯರು ಗಂಧದ ಮಾಲೆ ಹಾಕಿ ಯಶಸ್ಸು ಕೋರಿದರು.

ಚಂದನಾ ಅವರು ದೀಕ್ಷೆ ಸ್ವೀಕರಿಸಲು ನಿರ್ಧರಿಸಿರುವ ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲರು ನೃತ್ಯ ಮಾಡಿ ಸಂಭ್ರಮಿಸಿರುವುದನ್ನು ಕುರಿತು ಜೈನ ಸಮಾಜದ ಹಿರಿಯರೊಬ್ಬರನ್ನು ಪ್ರಶ್ನಿಸಿದರು

‘ಮಗಳು ತಮ್ಮನ್ನೆಲ್ಲ ಅಗಲಿ ಸನ್ಯಾಸ ದೀಕ್ಷಾ ಪಡೆಯುತ್ತಿರುವ ಸಂಗತಿ ಆಂತರಿಕವಾಗಿ ನೋವುಂಟು ಮಾಡುತ್ತದೆ. ಅದನ್ನು ಮರೆಯಲು ಮತ್ತು ಮಗಳನ್ನು ಸಂತೋಷ ಪಡಿಸಲು ನೃತ್ಯ ಮಾಡಿ ಸಂತೋಷ ವ್ಯಕ್ತಪಡಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ರಾಜೇಂದ್ರ ಕುಮಾರ ಅವರ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕನಕಗಿರಿ ಶಾಸಕ ಬಸವರಾಜ ದಢೆಸುಗೂರು, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಸೇರಿದಂತೆ ವಿವಿಧ ಪಕ್ಷಗಳ ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭೇಟಿನೀಡಿ ಶುಭಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT