ಗುರುವಾರ , ಫೆಬ್ರವರಿ 20, 2020
22 °C

ರಾಯಚೂರು: 16 ರಂದು ಚಿತ್ರಕಲಾ ಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಕಲಾ ಸಂಕುಲ ಸಂಸ್ಥೆಯಿಂದ ಫೆಬ್ರುವರಿ 16 ರಂದು ಚಿತ್ರಕಲಾ ಸಂತೆ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಯೋಜಿಸಿದ್ದ ಚಿತ್ರಕಲಾ ಸಂತೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 60 ಕಲಾವಿದರು ಭಾಗಿಯಾಗಿದ್ದರು. ಈ ವರ್ಷವೂ ವಿವಿಧ ರಾಜ್ಯಗಳಿಂದ ಕಲಾವಿದರು ಭಾಗಿಯಾಗಲಿದ್ದು, ಚಿತ್ರಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.

ರಂಗಮಂದಿರ ಮುಂಭಾಗದಲ್ಲಿರುವ ಸಾರ್ವಜನಿಕ ಉದ್ಯಾನದ ಎದುರು ಮಳಿಗೆಗಳನ್ನು ಹಾಕಲಾಗುವುದು. ದಿ. ಶಂಕರಗೌಡ ಬೆಟ್ಟದೂರು ಅವರ ಹೆಸರಿನಲ್ಲಿ ಚಿತ್ರಸಂತೆ ಆಯೋಜಿಸಲಾಗುತ್ತಿದ್ದು, ಸಂಸದ ರಾಜಾ ಅಮರೇಶ್ವರ ನಾಯಕ ಅವರು ಉದ್ಘಾಟಿಸುವರು. ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಭಾಗವಹಿಸುವರು ಎಂದು ತಿಳಿಸಿದರು.

ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳ ಮುಖ್ಯಸ್ಥರು, ಕಲಾಸಕ್ತರೆಲ್ಲರೂ ಚಿತ್ರಕಲೆ ಸಂತೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕು. ರಾಯಚೂರಿನಲ್ಲಿಯೂ ಸಾಕಷ್ಟು ಸುಪ್ರಸಿದ್ಧ ಕಲಾವಿದರಿದ್ದು, ಅವರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕಿದೆ. ಏಕಕಾಲಕ್ಕೆ ಎಲ್ಲ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ವಿಶೇಷ ದಿನ ಅದಾಗಲಿದೆ ಎಂದು ಹೇಳಿದರು.

ಒಂದು ಕಲಾಕೃತಿಯು ನೂರಾರು ಭಾವನೆಗಳನ್ನು ಹುಟ್ಟುಹಾಕುತ್ತದೆ. ಇಷ್ಟಪಡುವ ಕಲಾಕೃತಿಗಳನ್ನು ಖರೀದಿಸಬಹುದಾಗಿದೆ. ನೂತನ ಕಟ್ಟಡಗಳು, ಕಚೇರಿಗಳಿಗೆ ಸುಂದರ ಚಿತ್ರಕಲಾಕೃತಿಗಳು ಜೀವಂತಿಕೆ ತರುತ್ತದೆ. ಕುಟುಂಬ ಸಮೇತರಾಗಿ ಚಿತ್ರಸಂತೆಗೆ ಬರಬೇಕು ಎಂದು ಮನವಿ ಮಾಡಿದರು.

ಹೊರ ಜಿಲ್ಲೆಗಳಿಂದ ಬರುತ್ತಿರುವ ಚಿತ್ರಕಲಾವಿದರಿಗೆ ರಾಯಚೂರಿನ ಕುರಿತು ಹೊಸ ನಿರೀಕ್ಷೆಗಳಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಮಾತ್ರ ಕಲಾಸಂತೆಗೆ ವಿಶೇಷ ಮೆರುಗು ಎಂದರು.

ಅಮರೇಗೌಡ, ಈರಣ್ಣ ಬೆಂಗಾಲಿ, ದೇವರಾಜ ಕುರ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)