ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಮಿಕರ ಪರವಾದ ಕಾನೂನು ಜಾರಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

Published 24 ಜನವರಿ 2024, 15:22 IST
Last Updated 24 ಜನವರಿ 2024, 15:22 IST
ಅಕ್ಷರ ಗಾತ್ರ

ರಾಯಚೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಪಾವತಿ, ಕಾರ್ಖಾನೆ ಕಾರ್ಮಿಕರಿಗೆ ಕನಿಷ್ಠ ವೇತನ ಹಾಗೂ ಕಾನೂನು ಬದ್ಧ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಜಿಲ್ಲಾ ಘಟಕದ ವತಿಯಿಂದ ಬುಧವಾರ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಸಿಐಟಿಯು ಜಿಲ್ಲಾ ಘಟಕದ ನೇತೃತ್ವದಲ್ಲಿ ವಿವಿಧ ಕಾರ್ಖಾನೆಯ ಕಾರ್ಮಿಕರು, ಸಂಘದ ಪದಾಧಿಕಾರಿಗಳು ನಗರದ ಸಾರ್ವಜನಿಕ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆನಂತರ ಸಂಸದರ ಕಚೇರಿಯ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ನೀತಿಗಳು, ಕಾರ್ಮಿಕ ವಿರೋಧಿ ಕಾನೂನುಗಳಿಂದ ದುಡಿಯುವ ಜನರ ಮೇಲೆ ತೀವ್ರ ಸಮಸ್ಯೆ ಉಂಟಾಗಿದೆ. ಕಾರ್ಪೋರೇಟ್, ಬಂಡವಾಳದಾರರ ಪರವಾದ ಆಡಳಿತವನ್ನು ನಡೆಸುತ್ತಿರುವ ಪರಿಣಾಮವಾಗಿ ಕೋಟ್ಯಂತರ ಕಾರ್ಮಿಕರ ಮತ್ತು ಜನರ ಬದುಕಿನ ಮೇಲೆ ದುಷ್ಪರಿಣಾಮ ಬೀರಿದೆ ಎಂದು ದೂರಿದರು.

ಕಾರ್ಮಿಕರ ಕೆಲಸದ ಅವಧಿಯನ್ನು ವಾರಕ್ಕೆ 36 ಗಂಟೆಗಳು ಹಾಗೂ ದಿನದ ಪಾಳೆಯನ್ನು 6 ಗಂಟೆಗಳಿಗೆ ಮಿತಿಗೊಳಿಸಬೇಕು. ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಗಮನ ನೀಡಬೇಕು. ನಮ್ಮ ಸಂವಿಧಾನದ ಪರಿಚ್ಚೇದ 39 (ಡಿ) ನಲ್ಲಿ ಪ್ರತಿಪಾದಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಬೇಕು. ಕಡಿಮೆ ವೇತನ ನೀಡುವ ಗುತ್ತಿಗೆ, ಹೊರಗುತ್ತಿಗೆ ಹಾಗೂ ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಪಂಚಾಯಿತಿ ನೌಕರರಿಗೆ ಸೇವಾ ಹಿರಿತನ ಪರಿಶೀಲಿಸಿ ವೇತನ ಹೆಚ್ಚಳ ಮಾಡಬೇಕು.  ತೀವ್ರ ಅನಾರೋಗ್ಯಕ್ಕೆ ಒಳಗಾದ ಪಂಚಾಯಿತಿ ನೌಕರರಿಗೆ ಆಸ್ಪತ್ರೆ ವೆಚ್ಚ ಸರ್ಕಾರವೇ ಭರಿಸಬೇಕು. ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡುವ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ವಿರೋಧಿಯಾದ 4 ಕಾರ್ಮಿಕ ಸಂಹಿತೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಕೆಲಸದ ಅವಧಿ ಹೆಚ್ಚಿಸುವ, ಮಹಿಳೆಯರನ್ನು ರಾತ್ರಿ ಪಾಳೆಯದಲ್ಲಿ ದುಡಿಸಿಕೊಳ್ಳಲು ಅವಕಾಶ ನೀಡುವುದು ಸೇರಿದಂತೆ ಎಲ್ಲ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು. ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ತಡೆಗಟ್ಟಲು ಅನುಷ್ಠಾನ ಸಮಿತಿ ಸ್ಥಾಪಿಸಬೇಕು. ಶಿಶು ಪಾಲನಾ ಕೇಂದ್ರಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು. 

ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗ ತರಬೇಕು.  ಕೈಗಾರಿಕಾ ವಿವಾದಗಳನ್ನು ನಿಧಿಷ್ಟವಾಗಿ ಕಾಲಮಿತಿ ಒಳಗೆ ಇತ್ಯರ್ಥಗೊಳ್ಳಲು ಸೂಕ್ತ ಕಾನೂನು ತಿದ್ದುಪಡಿಗಾಗಿ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಆಸ್ತಿ ಹಾಗೂ ಹಣವನ್ನು ಲೂಟಿ ಮಾಡಲು ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ನೀಡುವ ಎನ್.ಸಿ.ಎಲ್.ಟಿ ಮತ್ತು ಐ ಮತ್ತು ಬಿ ಕೋಡ್‍ಗಳಲ್ಲಿನ ಜನವಿರೋಧಿ ಕಾರ್ಪೋರೇಟ್ ಪರವಾದ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

 ದೇಶದ ಐಕ್ಯತೆಯನ್ನು ಚಿದ್ರಗೊಳಿಸುವ, ಸೌಹಾರ್ದತೆಯನ್ನು ಹಾಳು ಮಾಡುವ ಕೃತ್ಯಗಳನ್ನು ಹಾಗೂ ಶಕ್ತಿಗಳನ್ನು ನಿಗ್ರಹಿಸಬೇಕು. ಸಂವಿಧಾನ ಧರ್ಮ ನಿರಪೇಕ್ಷ ಮೌಲ್ಯಗಳನ್ನು ಸಂರಕ್ಷಿಸಬೇಕು.

ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ  ಖಾಸಗೀಕರಣ ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು. ಗ್ರಾಮ ಪಂಚಾಯಿತಿ ನೌಕರರು, ಕಾರ್ಖಾನೆಗಳ ಕಾರ್ಮಿಕರು ಹಾಗೂ ಔಷಧ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.

 ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್ ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಕೆ.ಜಿ ವೀರೇಶ, ಶಬ್ಬೀರ್ ಅಲಿ, ರಮೇಶ ವೀರಾಪುರ, ಅನ್ವರ್ ಪಾಶ, ಗಿರಿಯಪ್ಪ ಪೂಜಾರಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT