ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ: ಕಟ್ಟಡವಿದ್ದರೂ ಕಾಲೇಜು ಇಲ್ಲ!

ಮೆದಿಕಿನಾಳ, ಬಳಗಾನೂರಿಗೆ ಸಿಗದ ಪಿಯು ಕಾಲೇಜು ಭಾಗ್ಯ
Published 16 ಜೂನ್ 2024, 7:20 IST
Last Updated 16 ಜೂನ್ 2024, 7:20 IST
ಅಕ್ಷರ ಗಾತ್ರ

ಮಸ್ಕಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣ ಸಿಗಲಿ ಎನ್ನುವ ಉದ್ದೇಶದಿಂದ ಸರ್ಕಾರ 2022ರಲ್ಲಿ ತಾಲ್ಲೂಕಿನ ಮೆದಿಕಿನಾಳ ಹಾಗೂ ಬಳಗಾನೂರು ಗ್ರಾಮಕ್ಕೆ ಪಿಯು ಕಾಲೇಜು ಮುಂಜೂರು ಮಾಡಿದ್ದರೂ ಪಿಯು ಬೋರ್ಡ್ ಕಾಲೇಜು ಆರಂಭಕ್ಕೆ ಅನುಮತಿ ನೀಡದ ಕಾರಣ ನೂರಾರು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಬಂದಿದೆ.

20/9/2022 ಪದವಿಪೂರ್ವ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಪದ್ಮಿನಿ ಎಸ್.ಎನ್. ಅವರು ಮೆದಿಕಿನಾಳ ಹಾಗೂ ಬಳಗಾನೂರ ಗ್ರಾಮಗಳಲ್ಲಿ ಪದವಿಪೂರ್ವ ಕಾಲೇಜು ಆರಂಭಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಆದೇಶಿಸಿದ್ದರು.

ಎರಡು ವರ್ಷವಾದರೂ ಇನ್ನೂ ಮೆದಿಕಿನಾಳ ಹಾಗೂ ಬಳಗಾನೂರು ಗ್ರಾಮಗಳಲ್ಲಿ ಕಾಲೇಜು ಆರಂಬಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುಮತಿ ನೀಡದ ಕಾರಣ ಪಾಲಕರು ಹಾಗೂ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ವಿರುದ್ಧ ಅಕ್ರೋಶ ಹೊರ ಹಾಕಿದ್ದಾರೆ.

2018 ರಲ್ಲಿ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ ಅವರು ಮೆದಿಕಿನಾಳ ಗ್ರಾಮದಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಕಾಲೇಜು ಆರಂಭವಾಗುತ್ತದೆ ಎಂಬ ಮುಂದಾಲೋಚನೆಯಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ₹2 ಕೋಟಿ ಅನುದಾನ ಬಿಡುಗಡೆಗೊಳಿಸಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದರು.

ಕಟ್ಟಡ ನಿರ್ಮಾಣಗೊಂಡು ಮೂರು ವರ್ಷವಾಗಿದೆ. ಕಾಲೇಜು ಆರಂಭವಾಗದ ಕಾರಣ ಕಟ್ಟಡ ಬಳಕೆಯಾಗದೆ ದುಸ್ಥಿತಿಗೆ ಬಂದಿದೆ. ಕಿಡಿಗೇಡಿಗಳು ಕಟ್ಟಡ ಕಿಟಿಕಿ, ಬಾಗಿಲು ಮುರಿದಿದ್ದಾರೆ. ರಾಯಚೂರಿನ ಕ್ಯಾಷುಟೆಕ್ ಸಂಸ್ಥೆ ಈ ಕಟ್ಟಡ ನಿರ್ಮಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಹಸ್ತಾಂತರ ಮಾಡಿದೆ. ಆದರೆ, ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ, ಹಾಸು ಬಂಡೆಗಳು ಕುಸಿದಿದೆ, ಇದರ ದುರಸ್ತಿಗೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ.

ಕಾಲೇಜು ಆರಂಭವಾಗಿದ್ದರೆ ಮೆದಿಕಿನಾಳ ಗ್ರಾಮದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕೆ ಮಸ್ಕಿಗೆ ಅಲೆದಾಡುವುದು ತಪ್ಪುತಿತ್ತು ಎಂದು ಪಾಲಕರು ತಿಳಿಸಿದ್ದಾರೆ.

ಕೂಡಲೇ ಶಾಸಕರು ಮೆದಿಕಿನಾಳ, ಬಳಗಾನೂರು ಗ್ರಾಮಕ್ಕೆ ಕಾಲೇಜು ಮುಂಜೂರು ಮಾಡಿಸಿ ವಿದ್ಯಾರ್ಥಿಗಳ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT