ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್ ಅಭ್ಯರ್ಥಿ ವಲಸೆ ಹಕ್ಕಿ’

ಜೆಡಿಎಸ್–ಬಿಜೆಪಿ ಸಮನ್ವಯ ಸಭೆಯಲ್ಲಿ ಅಮರೇಶ್ವರ ನಾಯಕ ವ್ಯಂಗ್ಯ
Published 4 ಏಪ್ರಿಲ್ 2024, 7:42 IST
Last Updated 4 ಏಪ್ರಿಲ್ 2024, 7:42 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ‘ವಲಸೆ ಹಕ್ಕಿ, ಜರ್ಸಿ ಎತ್ತು ಇದ್ದಂತೆ’ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಅಭ್ಯರ್ಥಿಗಳ ಕೊರತೆಯಿಂದ ವಲಸಿಗರಿಗೆ ಕಾಂಗ್ರೆಸ್ ಮಣೆ ಹಾಕಿದೆ’ ಎಂದು ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ವ್ಯಂಗ್ಯವಾಡಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ‘ಜಿ.ಕುಮಾರ ನಾಯಕ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದು ಸರಿ ಆದರೆ ಅವರು ಇಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಯಾವವು ಎನ್ನುವ ಪಟ್ಟಿ ನೀಡಲಿ’ ಎಂದರು.

‘ಕಾಂಗ್ರೆಸ್ ಪಕ್ಷ ಸ್ಥಳೀಯರಿಗೆ ಅವಕಾಶ ನೀಡದೆ ವಲಸಿಗರಿಗೆ ಮಣೆ ಹಾಕಿದೆ ಅವರನ್ನು ಗೆಲ್ಲಿಸಿದರೆ ನಿಮಗೆ ಕೈಸಿಗುವುದಿಲ್ಲ. ನಾನು ಸ್ಥಳೀಯ, ಕಲ್ಮಲಾ ಕ್ಷೇತ್ರದಿಂದ ಗೆದ್ದು ಆನಂತರ ಇಲ್ಲಿಯೆ ನೆಲೆಸಿದ್ದೇನೆ. ಜನರು ನನಗೆ ಶಾಸಕ, ಸಂಸದನಾಗಿ ಆಶೀರ್ವದಿಸಿದ್ದಾರೆ. ಈ ಬಾರಿ ಬಿಜೆಪಿ ಜೆಡಿಎಸ್ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತಿರುವ ಕಾರಣ ದುಪ್ಪಟ್ಟು ಕಾರ್ಯಕರ್ತರ ಬೆಂಬಲದೊಂದಿಗೆ ಕಳೆದ ಬಾರಿಗಿಂತ ಅತ್ಯಧಿಕ ಮತಗಳಿಂದ ಜಯ ಗಳಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಿವರಾಜ ಪಾಟೀಲ ಮಾತನಾಡಿ, ‘ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಭಿನ್ನಭಿಪ್ರಾಯ ಬದಿಗಿಟ್ಟು ಕೆಲಸ ಮಾಡಿದರೆ ಕಾಂಗ್ರೆಸ್ ಧೂಳಿಪಟವಾಗಲಿದೆ. ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ಕೆಲಸ ಮಾಡಿದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ. ಸಂಸದರಾಗಿ ರಾಜಾ ಅಮರೇಶ್ವರ ನಾಯಕ ಅವರು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅನೇಕ ಯೋಜನೆಗಳನ್ನು ಜಾರಿ ಮಾಡಿ ಸದನದಲ್ಲಿಯೂ ಹೆಚ್ಚಿನ ಹಾಜರಾತಿಯಿಂದ ದಾಖಲೆ ಮಾಡಿದ್ದಾರೆ’ ಎಂದು ಹೇಳಿದರು.

ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ವೆಂಕಟರಾವ್ ನಾಡಗೌಡ ಮಾತನಾಡಿ, ‘ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಹೆಚ್ಚಿನ ಶಕ್ತಿ ಇದೆ. ಜೆಡಿಎಸ್ ವರಿಷ್ಠ ದೇವೇಗೌಡರು ಈ ಭಾಗದ ನೀರಾವರಿ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಬಿ.ವಿ.ನಾಯಕ ಗೈರು: ಮಾಜಿ ಸಂಸದ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ವಿ ನಾಯಕ ಅವರು ಸಮನ್ವಯ ಸಮಿತಿ ಸಭೆಗೆ ಗೈರಾಗಿದ್ದರು. ಟಿಕೆಟ್ ಘೋಷಣೆಗೂ ಮುನ್ನ ಬಿಜೆಪಿ ಪಕ್ಷದ ಚಟುವಟಿಕೆಗಳಲ್ಲಿ ಬಿರುಸಾಗಿ ತೊಡಗಿಕೊಂಡಿದ್ದ ಬಿ.ವಿ ನಾಯಕ ರಾಜಾ ಅಮರೇಶ್ವರ ನಾಯಕರಿಗೆ ಟಿಕೆಟ್ ಘೋಷಿಸಿದ ನಂತರ ಅಸಮಾಧಾನದಿಂದ ಸಮ್ವಯ ಸಮಿತಿ ಸಭೆಗೆ ಗೈರಾಗಿದ್ದರು.

ಸಭೆಯಲ್ಲಿ ಲೋಕಸಭಾ ಚುನಾವಣೆ ಉಸ್ತುವಾರಿ ಹಾಗೂ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ,  ಶಾಸಕಿ ಕರೆಮ್ಮ ನಾಯಕ, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ಬಿಜೆಪಿ, ಜೆಡಿಎಸ್ ಮುಖಂಡರಾದ ಗಂಗಾಧರ ನಾಯಕ, ರಾಜಾ ವೆಂಕಟಪ್ಪ ನಾಯಕ, ವೆಂಕಟರೆಡ್ಡಿ ಮುದ್ನಾಳ, ಸಿದ್ದು ವೈ. ಬಂಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ,  ಕಾರ್ಯಾಧ್ಯಕ್ಷ ಎನ್.ಶಿವಶಂಕರ, ಯಾದಗಿರಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ರೆಡ್ಡಿ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಮಹಾಂತೇಶ ಪಾಟೀಲ ಅತ್ತನೂರು, ಜೆ.ಶರಣಪ್ಪಗೌಡ, ತಿಮ್ಮಾರೆಡ್ಡಿ, ಸಣ್ಣ ನರಸಿಂಹ ನಾಯಕ, ರವೀಂದ್ರ ಜಲ್ದಾರ್ ಉಪಸ್ಥಿತರಿದ್ದರು.

‘ಬಿ.ವಿ.ನಾಯಕ ಬಂಡಾಯ ಶಮನ ಶೀಘ್ರ’

ಮಾಜಿ ಸಂಸದ ಬಿ.ವಿ.ನಾಯಕ ಅವರನ್ನು ಪಕ್ಷದ ವರಿಷ್ಠರು ಮನ ಒಲಿಸುತ್ತಾರೆ. ಅವರು ಶೀಘ್ರವೇ ಪಕ್ಷದ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಬಿ.ವಿ.ನಾಯಕ, ತಿಪ್ಪರಾಜು ಹವಾಲ್ದಾರ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು ಈಗ, ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಾನು ಸಂಸದನಾಗಿ ಅನೇಕ ಅಭೀವೃದ್ಧಿ ಮಾಡಿದ್ದೇನೆ ರೈಲ್ವೆ ಯೋಜನೆಗಳ ಕಾರ್ಯಗತ, ರೈಲು ಸಂಪರ್ಕ ವಿಸ್ತರಣೆ, ಹೆದ್ದಾರಿಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯ ಕಲ್ಪಿಸಿದ್ದೇನೆ ಜಿಲ್ಲೆಗೆ ಏಮ್ಸ್ ಗಾಗಿ ಪ್ರಯತ್ನಿಸಿದ್ದೇನೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುತ್ತೇನೆ. ಸಣ್ಣ ಪುಟ್ಟ ದೋಷಗಳು ಇದ್ದರೂ ಸರಿಪಡಿಸಿಕೊಳ್ಳುತ್ತೇನೆ’ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ–ಜೆಡಿಎಸ್ ನಾಯಕರ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು
ರಾಯಚೂರಿನ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ–ಜೆಡಿಎಸ್ ನಾಯಕರ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT