ಶನಿವಾರ, ಜನವರಿ 16, 2021
18 °C
ಸಾಧನೆ ಮಾಡಿರುವ 49 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ

ರಾಯಚೂರು ಕೃಷಿ ವಿವಿ ಘಟಿಕೋತ್ಸವ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 2018–19 ನೇ ಸಾಲಿನ ಘಟಿಕೋತ್ಸವ ಸಮಾರಂಭವನ್ನು ಜನವರಿ 9ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಆವರಣದ ಪ್ರೇಕಾಗೃಹದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿ ಡಾ. ಕೆ.ಎನ್ ಕಟ್ಟಿಮನಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವಿಯಲ್ಲಿ ಸಾಧನೆ ಮಾಡಿದ 24 ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರದಲ್ಲಿ ಸಾಧನೆ ಮಾಡಿದ 14 ವಿದ್ಯಾರ್ಥಿಗಳಿಗೆ ಹಾಗೂ ಡಾಕ್ಟರೇಟ್‌ ಸಾಧನೆ ಮಾಡಿದ 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಘಟಿಕೋತ್ಸವದ ಮೂಲಕ 496 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಕೃಷಿ ಸಚಿವ ಬಸವನಗೌಡ ಚನ್ನಬಸವನಗೌಡ ಪಾಟೀಲ ಅವರು ಪಾಲ್ಗೊಳ್ಳುವರು. ಕೃಷಿ ಅನುಸಂದಾನ ಪರಿಷತ್ತಿನ ಕೃಷಿ ಶಿಕ್ಷಣ ವಿಭಾಗದ ಉಪ ಮಹಾನಿರ್ದೇಶಕ ಡಾ.ಸಿ.ಆರ್‌.ಅಗರವಾಲ್‌ ಆಗಮಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಿದ್ಯಾ ವಿಷಯಕ ಪರಿಷತ್‌ ಸದಸ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕೋವಿಡ್‌ ಇರುವುದರಿಂದ ಸಮಾರಂಭದಲ್ಲಿ 150 ಜನರು ಮಾತ್ರ ಪಾಲ್ಗೊಳ್ಳುವುದಕ್ಕೆ ಸರ್ಕಾರದಿಂದ ಸೂಚನೆ ಬಂದಿದೆ. ಹೀಗಾಗಿ ಚಿನ್ನದ ಪದಕ ಪಡೆಯುವ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಸಿಮೀತ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ. ಎಲ್ಲರೂ ಅಂತರ ಕಾಯ್ದುಕೊಂಡು ಕೋವಿಡ್‌ ಮುನ್ನಚ್ಚರಿಕೆ ಪಾಲನೆ ಮಾಡುವುದು ಕಡ್ಡಾಯ ಎಂದು ಹೇಳಿದರು.

ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಕಾರ್ಯದಲ್ಲಿ ವಿಶ್ವವಿದ್ಯಾಲಯವು ನಿರಂತರವಾಗಿ ತೊಡಗಿಸಿಕೊಂಡಿದೆ. ಕೋವಿಡ್‌ ಕಾರಣ ರಾಜ್ಯ ಸರ್ಕಾರದಿಂದ ₹12.93 ಕೋಟಿ ಮಾತ್ರ ಅನುದಾನ ಬಂದಿದ್ದರೂ, ಸಂಶೋಧನೆ ಮತ್ತು ವಿಸ್ತರಣೆ ಕಾರ್ಯಗಳಲ್ಲಿ ಹಿಂದೆ ಬಿದ್ದಿಲ್ಲ. ಗಂಗಾವತಿಯಲ್ಲಿ ಈಗಾಗಲೇ ಕೃಷಿ ಮಹಾವಿದ್ಯಾಲಯ ಆರಂಭವಾಗಿದೆ. ಮುಂಬರುವ ದಿಗಳಲ್ಲಿ ಬೀದರ್‌ ಜಿಲ್ಲೆಯ ಔರಾದ್‌ ಹಾಗೂ ಕಲಬುರ್ಗಿಯ ಚಿಂಚೋಳಿಯಲ್ಲಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಈ ಸಂಬಂಧ ಪ್ರಸ್ತಾವನೆಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕಳೆದ ವರ್ಷ 59ನೇ ಸ್ಥಾನದಲ್ಲಿದ್ದ ರಾಯಚೂರು ಕೃಷಿ ವಿಶ್ವವಿದ್ಯಾಲಯವು ಈ ವರ್ಷ 21ನೇ ಸ್ಥಾನಕ್ಕೆ ಬಂದಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೊರರಾಜ್ಯ ಹಾಗೂ ಹೊರದೇಶಗಳಲ್ಲಿ ಸಂಶೋಧನೆಗಳನ್ನು ಕೈಗೊಂಡು ವಿಶ್ವವಿದ್ಯಾಲಯದ ಪ್ರತಿಷ್ಠೆ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಯೋಗಾಲಯದಿಂದ ಕೃಷಿಭೂಮಿಗೆ ಸಂಶೋಧನೆಗಳನ್ನು ತಲುಪಿಸುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡಿಕೊಂಡು ಬರುತ್ತಿದೆ. ‘ಆರ್‌ಪಿ ಬಯೋ–226’ ಹೊಸ ಭತ್ತದ ತಳಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಬ್ಯಾಕ್ಟಿರಿಯಾ ಅಂಗಮಾರಿ ರೋಗ ನಿರೋಧಕ ಶಕ್ತಿ ಹೊಂದಿದೆ. ಅಲ್ಲದೆ, ಪ್ರತಿ ಎಕರೆಗೆ 25 ರಿಂದ 30 ಕ್ವಿಂಟಾಲ್‌ ಇಳುವರಿ ಬರುತ್ತದೆ. ‘ಆರ್‌ಸಿಆರ್‌ಎಂಎಚ್‌–2 ಮೆಕ್ಕೆಜೋಳದ ಸಂಕರಣ ತಳಿ ಬಿಡುಗಡೆ ಮಾಡಿದ್ದು, ಇದು ಬೇಸಿಗೆ ಹಂಗಾಮಿನಲ್ಲಿ ಹೆಚ್ಚು ಶಾಖದ ಒತ್ತಡ ತಡೆಯುವ ಶಕ್ತಿ ಹೊಂದಿದೆ. ಇದಲ್ಲದೆ ‘ಎಂಬಿಪಿ–2 ಸಜ್ಜೆ ತಳಿ ಹಾಗೂ ‘ಬಿಜಿಡಿಎಚ್‌–697’ ಹತ್ತಿ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ, ಸಂಶೋಧನಾ ನಿರ್ದೇಶಕ ಬಿ.ಕೆ.ದೇಸಾಯಿ, ಕೃಷಿ ವಿಜ್ಞಾನಿಗಳಾದ ಡಾ.ಬಿ.ಎಂ.ಚಂದರಗಿ, ಡಾ.ಭೀಮಣ್ಣ, ಡಾ.ಎಂ.ವೀರನಗೌಡ, ಡಾ.ಜೆ.ಅಶೋಕ, ಡಾ.ಸತ್ಯನಾರಾಯಣ, ಡಾ.ನೇಮಿಚಂದ್ರ ಮತ್ತಿತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು