ಶನಿವಾರ, ಆಗಸ್ಟ್ 13, 2022
23 °C

ಸೆಸ್‌ ಹೆಚ್ಚಳ: ಹತ್ತಿ ವಹಿವಾಟು ಸ್ಥಗಿತ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆ (ಎಪಿಎಂಸಿ) ವಹಿವಾಟಿನ ಮೇಲಿನ ಸೆಸ್ ಶೇ 1 ರಷ್ಟು ಹೆಚ್ಚು ಮಾಡಿದ್ದನ್ನು ವಿರೋಧಿಸಿ ಡಿಸೆಂಬರ್ 21ರಂದು ರಾಯಚೂರು ಪ್ಯಾಕ್ಟರಿ ಮಾಲೀಕರ ಸಂಘದಿಂದ ಎಪಿಎಂಸಿ ವಹಿವಾಟು ಸ್ಥಗಿತಗೊಳಿಸಿ ಬಂದ್‍ಗೆ ಬೆಂಬಲ ನೀಡಲಾಗುವುದು ಎಂದು ರಾಯಚೂರು ಪ್ಯಾಕ್ಟರಿ ಮಾಲೀಕರ ಅಸೋಸಿಯೇಶನ್ ಸಂಘದ ಅಧ್ಯಕ್ಷ ವಿ.ಲಕ್ಷ್ಮೀರೆಡ್ಡಿ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಚೆಗೆ ಎಪಿಎಂಸಿ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಯುವ ವ್ಯಾಪಾರ ವಹಿವಾಟುಗಳ ಮೇಲೆ ಮಾರುಕಟ್ಟೆ ಶುಲ್ಕವನ್ನು ಏಕಾಏಕಿ ಶೇ 0.35ರಿಂದ ಶೇ 1 ಕ್ಕೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಮಾರುಕಟ್ಟೆ ಶುಲ್ಕ ಹೆಚ್ಚಳದಿಂದ ನೇರವಾಗಿ ರೈತರ ಮೇಲೆ ಹಾಗೂ ಪರೋಕ್ಷವಾಗಿ ವ್ಯಾಪಾರಸ್ಥರ ಮೇಲೆ ಹೊರೆಯಾಗುತ್ತಿದೆ. ಎಲ್ಲಾ ವ್ಯಾಪಾರ ವಹಿವಾಟುಗಳ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿದ್ದು, ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕದಂತಾಗಿದೆ ಎಂದರು.

ಈಗಾಗಲೇ ಕಲಬುರ್ಗಿ, ಬೀದರ್, ವಿಜಯಪುರ, ಗದಗ ಹಾಗೂ ಇನ್ನಿತರ ಎಪಿಎಂಸಿ ವ್ಯಾಪಾರ ವಹಿವಾಟುಗಳನ್ನು ವ್ಯಾಪಾರಸ್ಥರು ಬಂದ್ ಮಾಡಿ ಅನಿರ್ದಿಷ್ಟಾವಧಿವರೆಗೆ ಪ್ರತಿಭಟನೆಗೆ ಮುಂದಾಗಿದ್ದು ಸೋಮವಾರ ಜಿಲ್ಲೆಯ ಎಲ್ಲಾ ಹತ್ತಿ ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳು ವ್ಯಾಪಾರ ವಹಿವಾಟುಗಳನ್ನು ಎಪಿಎಂಸಿ ಮಾರುಕಟ್ಟೆ ಹಾಗೂ ಹೊರಗಡೆ ವ್ಯಾಪಾರ ಬಂದ್ ಮಾಡಲಿದ್ದಾರೆ.

ರೈತರು ನೇರವಾಗಿ ಅಥವಾ ಫ್ಯಾಕ್ಟರಿಗಳಿಗೆ ಮಾರಾಟ ಮಾಡಲು ಹತ್ತಿಯನ್ನು ತರಬಾರದು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಶ್ರೇಣಿಕ್ ಸೇಠ್, ಗೌರವ ಕಾರ್ಯದರ್ಶಿ ಶೈಲೇಶ ಕುಮಾರ ಧೋಕಾ, ನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.