ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಅಹವಾಲು ಸ್ವೀಕರಿಸಲು ಕೌಂಟರ್ ವ್ಯವಸ್ಥೆ

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ಪೂರ್ಣ– ಜಿಲ್ಲಾಧಿಕಾರಿ ಬಿ.ಶರತ್‌
Last Updated 24 ಜೂನ್ 2019, 14:21 IST
ಅಕ್ಷರ ಗಾತ್ರ

ರಾಯಚೂರು: ಮಾನ್ವಿ ತಾಲ್ಲೂಕಿನ ಕರೇಗುಡ್ಡದಲ್ಲಿ ಜೂನ್ 26ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಜನರ ಅಹವಾಲು ಸ್ವೀಕರಿಸಲು 14 ಕೌಂಟರ್ ತೆರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದರು.

ಸೋಮವಾರ ಜಿಲ್ಲಾಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂಕುನುಗ್ಗಲು ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜನರಿಂದ ಅಹವಾಲು ಪಡೆದು ಅವರಿಗೆ ಟೋಕನ್‌ ನೀಡಲಾಗುತ್ತದೆ. ಆದ್ದರಿಂದ ಜನರು ಮುಂಚಿತವಾಗಿಯೇ ಟೋಕನ್ ಪಡೆದುಕೊಳ್ಳಬೇಕು. ಆನಂತರ ಮುಖ್ಯಮಂತ್ರಿ ಭೇಟಿಗೆ ಅವಕಾಶ ನೀಡಲಾಗುತ್ತದೆ ಎಂದರು.

ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್‌ ತೆರೆದು ಅರ್ಜಿಗಳನ್ನು ಪಡೆಯಲಾಗುತ್ತದೆ. ಜನರಿಗೆ ಮಿತ ಆಹಾರದ ಪೊಟ್ಟಣ ಹಾಗೂ ನೀರು ನೀಡಲು ಕ್ರಮ ಜರುಗಿಸಲಾಗಿದೆ. ಅಂಗವಿಕಲರ ಅರ್ಜಿಗಳನ್ನು ಮೊದಲು ಪಡೆದು ಆಲಿಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದು ಹೇಳಿದರು.

ಜೂನ್‌ 26 ರಂದು ಉದ್ಯಾನ ರೈಲಿನ ಮೂಲಕ ಮುಖ್ಯಮಂತ್ರಿಗಳು ನಗರಕ್ಕೆ ಬರುವರು. ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಆನಂತರ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಅಧಿಕಾರಿಗಳೊಂದಿಗೆ ವೇದಿಕೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಲಿದ್ದಾರೆ. ಅಲ್ಲಿ ಪಾರ್ಕಿಂಗ್ ಹಾಗೂ ಭದ್ರತೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆ ಕ್ರಮ ಜರುಗಿಸಲಿದೆ ಎಂದರು.

ಗ್ರಾಮ ವಾಸ್ತವ್ಯದ ಕಾರ್ಯಕ್ರಮದ ಯಶಸ್ವಿಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಲಾಗಿದೆ. ವೇದಿಕೆ ಹಾಗೂ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಶಾಲೆಯಲ್ಲಿನ ವ್ಯವಸ್ಥೆಗೆ ಪಂಚಾಯತ್ ರಾಜ್‌ ವಿಭಾಗಕ್ಕೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರತ್ಯೇಕವಾಗಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ವಸತಿಯ ಹಕ್ಕುಪತ್ರ ಹಾಗೂ ಮಾಸಾಶನದ ಪ್ರಮಾಣ ಪತ್ರಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಗುತ್ತದೆ. ಮುಖ್ಯಮಂತ್ರಿಯ ಸಮಯಾವಕಾಶವನ್ನು ನೋಡಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ರೈತರು ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಬೇಕು. ಮೂರು ಕಂತುಗಳಲ್ಲಿ ಒಟ್ಟು ₹6 ಸಾವಿರ ರೈತರ ಖಾತೆಗೆ ಹಣ ಹಾಕಲಾಗುತ್ತದೆ. ಗ್ರಾಮ ಲೆಕ್ಕಾಧಿಕಾರಿಗೆ ಅಗತ್ಯ ದಾಖಲೆ ಒದಗಿಸಬೇಕು ಎಂದು ಹೇಳಿದರು.

ತುಂಗಭದ್ರಾ ವಲಯ ಹಂಗಾಮಿ ಕಾರ್ಮಿಕರು ಗ್ರಾಮ ವಾಸ್ತವ್ಯ ಮಾಡಲು ಹಾಗೂ ವೈಟಿಪಿಎಸ್‌ ಕಾರ್ಮಿಕರು ಬೈಕ್‌ ರ್‍ಯಾಲಿ ನಡೆಸಲು ಭದ್ರತೆಯ ಕಾರಣದಿಂದ ಅನುಮತಿ ನೀಡಲಾಗಿಲ್ಲ. ದೇವದುರ್ಗ ಶಾಸಕರ ಪಾದಯಾತ್ರೆ ಬಗ್ಗೆಯೂ ಚರ್ಚಿಸಲಾಗಿದೆ. ಬೇಡಿಕೆಗಳ ಬಗ್ಗೆ ಕ್ರಮ ಜರುಗಿಸಲು ಸಂಬಂಧಿಸಿದವರ ಜೊತೆ ಚರ್ಚೆ ನಡೆದಿದೆ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT