ಭಾನುವಾರ, ಜುಲೈ 25, 2021
28 °C

ಕೋವಿಡ್-19 ಹಿನ್ನೆಲೆ: ರಾಯಚೂರು ಜಿಲ್ಲೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಜಿಲ್ಲೆಯಲ್ಲಿ ರಾಯಚೂರು ಹಾಗೂ ಸಿಂಧನೂರು ನಗರಗಳ ವ್ಯಾಪ್ತಿಯಲ್ಲಿ ಜುಲೈ 15 ರಿಂದ ಲಾಕ್‌ಡೌನ್ ಜಾರಿ ಮಾಡಿದ್ದರೂ, ಜಿಲ್ಲೆಯಾದ್ಯಂತ ಅನ್ವಯಿಸುವಂತೆ ಸರ್ಕಾರಿ ಮತ್ತು ಖಾಸಗಿ ವಾಹನಗಳ ಸಂಚಾರವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಜುಲೈ 15 ರ ಬೆಳಿಗ್ಗೆ 5 ಗಂಟೆಯಿಂದ ಜುಲೈ 22 ರ ಮಧ್ಯರಾತ್ರಿವರೆಗೂ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ, ಉಳಿದೆಲ್ಲ ವಾಹನಗಳ ಸಂಚಾರ ರದ್ದು ಮಾಡಲಾಗಿದೆ. ವಾಹನ ಸಂಚಾರ ರದ್ದುಗೊಳಿಸುವ ಬಗ್ಗೆ ಒಂದು ದಿನವೂ ಪೂರ್ವ ಮಾಹಿತಿ ಕೊಡದೆ ಇರುವುದರಿಂದ ಜಿಲ್ಲೆಯ ವಿವಿಧ ತಾಲ್ಲೂಕುಗಳು ಮತ್ತು ಲಾಕ್‌ಡೌನ್ ಇಲ್ಲದ ಜಿಲ್ಲೆಗಳಲ್ಲಿ ಉಳಿದಿರುವ ಜನರು ರಾಯಚೂರಿನಲ್ಲಿ ಲಾಕ್ ಡೌನ್ ಇಲ್ಲದ ತಾಲ್ಲೂಕಿಗೆ ಬರಲು ಪರದಾಡುವ ಪರಿಸ್ಥಿತಿ ಉದ್ಭವಿಸಿದೆ.

ಬುಧವಾರ ಬೆಳಿಗ್ಗೆಯಿಂದ ಸಿಂಧನೂರು ಮತ್ತು ರಾಯಚೂರು ನಗರಗಳು ಮತ್ತೆ ಮೌನಕ್ಕೆ ಶರಣಾಗಿವೆ.

ಅಗತ್ಯ ವಸ್ತುಗಳಾದ ಕಿರಾಣಿ, ತರಕಾರಿ, ಹಾಲು, ವೃತ್ತ ಪತ್ರಿಕೆಗಳು, ಆಹಾರ ಪಾರ್ಸಲ್ ನೀಡುವ ಮಳಿಗೆಗಳು, ಔಷಧಿ, ಆಸ್ಪತ್ರೆ ಹಾಗೂ ಪೆಟ್ರೊಲ್ ಪಂಪ್‌ಗಳು ಮಾತ್ರ ತೆರೆದುಕೊಂಡಿದ್ದವು. ನಿತ್ಯ ಕನಿಷ್ಠ ಜನಸಂಚಾರದಿಂದ ಕೂಡಿರುತ್ತಿದ್ದ ಸರ್ಕಾರಿ ಬಸ್ ನಿಲ್ದಾಣಗಳು ಬಿಕೋ‌ ಎನ್ನುತ್ತಿವೆ.

ಲಾಕ್ ಡೌನ್ ಇಲ್ಲದ ಮಾನ್ವಿ, ದೇವದುರ್ಗ, ಸಿರವಾರ, ಮಸ್ಕಿ, ದೇವದುರ್ಗ ಹಾಗೂ ಲಿಂಗಸುಗೂರುಗಳಲ್ಲಿಯೂ ವಾಹನಗಳ ಸಂಚಾರ ಬಹುತೇಕ ಸ್ಥಗಿತವಾಗಿವೆ. ಕೆಲವು ಖಾಸಗಿ ವಾಹನಗಳು ಮಾತ್ರ ಸಂಚರಿಸುತ್ತಿವೆ. ಮಳಿಗೆಗಳನ್ನು ಮಧ್ಯಾಹ್ನ 2 ಗಂಟೆವರೆಗೂ  ತೆರೆದುಕೊಳ್ಳಲು ಅನುಮತಿ ನೀಡಲಾಗಿದೆ.

ಪೊಲೀಸರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ಆರಂಭಿಸಿದ್ದಾರೆ. ಸಿಂಧನೂರು ಮತ್ತು ರಾಯಚೂರು ‌ನಗರಗಳಲ್ಲಿ ನಾಕಾಬಂದಿ ಮಾಡಿದ್ದು, ಬೈಕ್, ಕಾರು ಹಾಗೂ ನಡೆದುಕೊಂಡು ಬರುವ ಜನರಿಗೆ ಕಾರಣ ವಿಚಾರಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು