ಶುಕ್ರವಾರ, ನವೆಂಬರ್ 27, 2020
19 °C
ದಿಢೀರ್‌ ಏರಿಕೆಯಾದ ಹೂವು, ಹಣ್ಣುಗಳ ದರ

ರಾಯಚೂರು: ಪೂಜಾ ಸಾಮಗ್ರಿಗಳ ಖರೀದಿ ಭರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೀಪಾವಳಿ ಹಬ್ಬ ಆರಂಭವಾಗುತ್ತಿದ್ದಂತೆ ನರಕ ಚತುರ್ದಶಿ ದಿನದಂದು ಶನಿವಾರ, ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಮುಗಿಬಿದ್ದಿರುವುದು ಕಂಡುಬಂತು.

ನಗರದ ಜನರು ಕುಟುಂಬ ಸಮೇತ ಬೈಕ್‌ ಹಾಗೂ ಕಾರುಗಳಲ್ಲಿ ಮಾರುಕಟ್ಟೆಗೆ ಬಂದಿದ್ದರು. ಗ್ರಾಮೀಣ ಭಾಗದ ಜನರು ಕೂಡಾ ದೀಪಾವಳಿ ಸಂತೆಗಾಗಿ ನೆರೆದಿದ್ದರು. ಭಂಗಿಕುಂಟಾ ರಸ್ತೆ ಹಾಗೂ ಸರಾಫ್‌ ಬಜಾರ್‌ ರಸ್ತೆಯುದ್ದಕ್ಕೂ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವವರು. ಹಣತೆ ಮಾರಾಟ ಮಾಡುವವರು ಕುಳಿತಿದ್ದರು. ಆಕಾಶ ಬುಟ್ಟಿಗಳ ಮಾರಾಟ ಭರಾಟೆ ಜೋರಾಗಿತ್ತು.

ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಜನರು ಬಾಳೆದಿಂಡು, ಚೆಂಡು ಹೂವು ಗಿಡಗಳನ್ನು ಕೈಯಲ್ಲಿ ಹಿಡಿದು ಹೊರಟಿದ್ದು ವಿಶೇಷವಾಗಿತ್ತು. ತೆಂಗಿನಕಾಯಿ, ಅರಿಷಿಣ, ಇತರೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವುದಕ್ಕೆ ವಿಶೇಷ ಮಳಿಗೆಗಳನ್ನು ತೆರೆದುಕೊಂಡಿದ್ದವು. ಹೂವು, ಹಣ್ಣುಗಳ ದರ ಭಾರಿ ಏರಿಕೆಯಾಗಿದೆ. ಸಾಮಾನ್ಯ ದಿನಗಳಲ್ಲಿ ಒಂದು ಮೊಳ ಸೇವಂತಿ ಹೂವು ₹20. ಹಬ್ಬದ ನಿಮಿತ್ತ ಒಂದು ಮೊಳ ಸೇವಂತಿ ₹40 ಕ್ಕೆ ಏರಿಕೆಯಾಗಿತ್ತು.

ಭಂಗಿಕುಂಟಾ ರಸ್ತೆ, ಗಂಜ್‌ ರಸ್ತೆ, ಸರಾಫ್‌ ಬಜಾರ್‌, ಗಾಂಧಿ ಚೌಕ್‌ನಿಂದ ಮಹಾವೀರ ವೃತ್ತ, ತೀನ್‌ ಕಂದಿಲ್‌, ಹರಿಹರ ರಸ್ತೆ ಹಾಗೂ ಪಟೇಲ್‌ ರಸ್ತೆಯಲ್ಲಿ ಜನಸಂಚಾರ ಹೆಚ್ಚಾಗಿತ್ತು. ಇದರಿಂದ ವಾಹನಗಳು ಸುಗಮವಾಗಿ ಸಂಚರಿಸುವುದಕ್ಕೆ ಸಾಧ್ಯವಾಗಲಿಲ್ಲ. ವಾಹನದಟ್ಟಣೆ, ಜನದಟ್ಟಣೆಯನ್ನು ನಿಯಂತ್ರಿಸುವುದಕ್ಕಾಗಿ ಸಂಚಾರ ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬಂತು.

ರಸ್ತೆಗಳು ಸಂದಿಸುವ ಪ್ರತಿ ಮಾರ್ಗದಲ್ಲೂ ಪೊಲೀಸರು ಸಿಳ್ಳೆ ಹಾಕುತ್ತಾ ದಟ್ಟಣೆ ನಿಯಂತ್ರಿಸುತ್ತಿದ್ದರು. ವಾಹನಗಳ ನಿಲುಗಡೆ ಇಲ್ಲದ ಕಡೆಗೆ ವಾಹನ ನಿಲ್ಲಿಸಿದವರನ್ನು ಮನವೊಲಿಸಿ, ಗದರಿಸುತ್ತಿರುವುದು ಸಾಮಾನ್ಯವಾಗಿತ್ತು.

ದೀಪಾವಳಿ ಪೂರ್ವ ಹೊಸ ಬಟ್ಟೆ, ವಾಹನಗಳು ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳ ಖರೀದಿಯಿಲ್ಲದೆ ಭಣಗುಡುತ್ತಿದ್ದ ಮಾರುಕಟ್ಟೆಗೆ ಶನಿವಾರ ಹಬ್ಬದ ಸಡಗರ ಬಂದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು