ಮಂಗಳವಾರ, ಡಿಸೆಂಬರ್ 1, 2020
17 °C
ಮನೆ, ಅಂಗಡಿಗಳಿಗೆ ದೀಪಗಳ ಅಲಂಕಾರ, ಲಕ್ಷ್ಮಿ ದೇವಿ ಪೂಜೆ

ಎಲ್ಲೆಡೆ ದೀಪಾವಳಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೀಪಾವಳಿಯ ಹಬ್ಬದ ಮೂರನೆಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯನ್ನು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಬಲಿಪಾಡ್ಯಮಿ ನಿಮಿತ್ತ ವಿವಿಧ ಅಂಗಡಿಗಳಿಗೆ ಪೂಜೆ ಮಾಡಲಾಯಿತು. ನಗರದ ಮಾರುಕಟ್ಟೆಯಲ್ಲಿ ಬಾಳೆ ಎಲೆ, ಚೆಂಡು ಹೂ, ಬೂದು ಕುಂಬಳ ಕಾಯಿ ಖರೀದಿಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಜನ ತಂಡೋಪ ತಂಡವಾಗಿ ಸೇರಿದ್ದು ಕಂಡು ಬಂತು.

ವಿವಿಧ ಅಂಗಡಿ ಹಾಗೂ ಮನೆಗಳಲ್ಲಿ ಆಕಾಶ ಬುಟ್ಟಿ, ಹಣತೆ, ದೀಪದಿಂದ ಅಲಂಕಾರಗೊಂಡು ಆಕರ್ಷವಾಗಿ ಕಾಣುತ್ತಿತ್ತು. ಕೋವಿಡ್ ನಡುವೆಯೂ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣುಗಳು, ಬಟ್ಟೆ ಹಾಗೂ ಇತರೆ ವಸ್ತುಗಳ ಖರೀದಿ ನಡೆಯಿತು. ಈ ಬಾರಿ ಕೋವಿಡ್ ಎದುರಿಸಿದ ಜನರು ಹಬ್ಬವನ್ನು ಸರಳವಾಗಿ ಆಚರಣೆಗೆ ಮೋರೆ ಹೋಗಿದ್ದು ಮತ್ತೊಂದೆಡೆ ಅತಿವೃಷ್ಠಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ರೈತರು ಅನಿವಾರ್ಯವಾಗಿ ಸಾಂಪ್ರದಾಯವನ್ನು ಪಾಲನೆ ಮಾಡುವಂತಹ ಪರಿಸ್ಥಿತಿಗೆ ಒಳಗಾದರು.

ಮನೆಗಳಲ್ಲಿ ದೇವರಿಗೆ ಪೂಜೆ ಮುಗಿಸಿ ವಿವಿಧ ಬಗೆಯ ಸಿಹಿ ತಿಂಡಿಗಳನ್ನು ಮಾಡಿ ನೆರೆಹೊರೆ ಯವರು, ಸಂಬಂಧಿಕರು ಪರಸ್ಪರ ಶುಭಾಶಯ ವಿನಿಮಯ ಮಾಡಿ ಕೊಂಡರು. ಸರ್ಕಾರ ಈ ಬಾರಿ ಪಟಾಕಿ ಸಿಡಿಸುವುದನ್ನು ನಿಷೇಧ ಮಾಡಿ ಹಸಿರು ಪಟಾಕಿ ಮಾತ್ರ ಉಪಯೋಗಿಸಬೇಕು ಎಂದು ಆದೇಶ ನೀಡಿರುವ ಮಧ್ಯೆಯೂ ಕೆಲವು ಬಡಾವಣೆಗಳಲ್ಲಿ ಪಟಾಕಿಗಳ ಶಬ್ದ ಕೇಳಿ ಬಂತು.

ಮನೆಗಳಲ್ಲಿ ಕುಟುಂಬ ಸದಸ್ಯರಿಗೆ ಮಹಿಳೆಯರು ಆರತಿ ಬೆಳಗಿದರು. ನಗರ ದ ಕೆಲ ದೇವಸ್ಥಾನಗಳಲ್ಲಿ ದೀಪಾವಳಿಯ ಹಬ್ಬದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ಮೂರು ದಿನಗಳ ಕಾಲ ಸರದಿ ರಜೆಗಳು ಬಂದಿರುವುದರಿಂದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಬಂದು ಶ್ರೀ ರಾಯರ ದರ್ಶನ ಪಡೆದರು. ಕಲ್ಲೂರು ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೂ ಭಕ್ತರ ದಂಡೇ ಆಗಮಿಸಿ ದೇವಿಯ ದರ್ಶನ ಪಡೆದುಕೊಂಡರು. ಅಲ್ಲದೇ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರು ಭೇಟಿ ಕೊಡುತ್ತಿರುವುದು ಕಂಡು ಬಂತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.