ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾಪ್ರಭುತ್ವ ದಿನ: ಜಿಲ್ಲೆಯಲ್ಲಿ ಸಕಲ ಸಿದ್ಧತೆ

Published : 14 ಸೆಪ್ಟೆಂಬರ್ 2024, 15:38 IST
Last Updated : 14 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ರಾಯಚೂರು: ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಉದ್ದೇಶದಿಂದ ರಾಜ್ಯ ಸರ್ಕಾರ ಸೆ. 15ರ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜನ ಸಾಮಾನ್ಯರೊಂದಿಗೆ ಸೇರಿ ಜಗತ್ತಿನ ಅತಿ ಉದ್ದದ ಮಾನವ ಸರಪಳಿ ರಚಿಸುವ ಮಹತ್ವದ ಕಾರ್ಯಕ್ರಮ ರೂಪಿಸಿದೆ.

ಈ ಮಾನವ ಸರಪಳಿಯು ಬೀದರ್‌ನಿಂದ ಚಾಮರಾಜನಗರ ವರೆಗೆ ಎಲ್ಲ 31 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಇದು ಸುಮಾರು 2500ಕಿಲೋಮೀಟರ್ ಉದ್ದ ಇರಲಿದ್ದು, ಜಗತ್ತಿನ ಅತಿ ಉದ್ದದ ಮಾನವ ಸರಪಳಿ ಆಗಲಿದೆ. ಇದರಲ್ಲಿ ಸುಮಾರು 25ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಪ್ರತಿ ಕಿಲೋಮೀಟರ್‌ಗೆ 1,000 ಜನರು ಇರಲಿದ್ದಾರೆ. ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜನರ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸಂದೇಶವನ್ನು ಬಿತ್ತರಿಸಲಿದ್ದಾರೆ. ಇದೇ ಅವಧಿಯಲ್ಲಿ ರಾಜ್ಯಾದ್ಯಂತ 10ಲಕ್ಷ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ ಮೂಲಕ ನಮ್ಮ ಪರಿಸರವನ್ನು ರಕ್ಷಿಸುವಂತಹ ಕಾಳಜಿಯನ್ನೂ ತೋರಲಾಗಿದೆ.

ಸೆಪ್ಟೆಂಬರ್ 15ರಂದು ಬೆಳಿಗ್ಗೆ 9ಗಂಟೆಗೆ ಮಾನವ ಸರಪಳಿ ರಚನೆ ಆಗಲಿದೆ. ಬೆಳಗ್ಗೆ 10ಕ್ಕೆ ಮಾನವ ಸರಪಳಿ ಬಿಡುವ ಮುನ್ನ ಸಂವಿಧಾನ ಪೀಠಿಕೆ ವಾಚನ ನಡೆಯಲಿದೆ. ಬೆಳಗ್ಗೆ 10ರಿಂದ 10.30ರವರೆಗೆ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಯಚೂರು ಜಿಲ್ಲೆಯಲ್ಲಿ ನಡೆಯುವ ಈ ಮಾನವ ಸರಪಳಿ ಕಾರ್ಯಕ್ರಮವು ಯಾದಗಿರಿ ಜಿಲ್ಲೆಯಿಂದ ಜಿಲ್ಲೆಗೆ ಮುಂದುವರೆಯಲಿದ್ದು, ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ನಿಂದ ಕೊಪ್ಪರ, ಗುಂಡುಗುರ್ತಿ, ದೇವದುರ್ಗ, ಕರಿಗುಡ್ಡ, ಅಮರಾಪುರ ಕ್ರಾಸ್, ಜಾಲಹಳ್ಳಿ, ಚಿಂಚೋಡಿ, ಬುಂಕಲದೊಡ್ಡಿ, ತಿಂಥಣಿ ಬ್ರಿಡ್ಜ್ ನಿಂದ ಲಿಂಗಸೂಗೂರು ತಾಲ್ಲೂಕಿನ ಗುರುಗುಂಟಾ, ಲಿಂಗಸೂಗೂರು, ಈಚನಾಳ ತಾಂಡಾ, ಈಚನನಾಳ, ಸುಂಕನಾಳ ಮೂಲಕ ರೋಡಲಬಂಡಾದ ವರೆಗೂ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ 16 ಗ್ರಾಮಗಳ ಮೂಲಕ 109ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲು ಎಲ್ಲ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಈ ಮಾನವ ಸರಪಳಿಯಲ್ಲಿ ಪ್ರತೀ ಕಿಮೀ ಗೆ 700 ರಿಂದ 800 ಜನ ಭಾಗವಹಿಸಲಿದ್ದು, ಜಿಲ್ಲೆಯಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾನವ ಸರಪಳಿಯಲ್ಲಿ ಜನಪ್ರತಿನಿಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.


ರೋಟರಿ ಸಂಸ್ಥೆ ಸಹಾಯ ಶಾಘನೀಯ: ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯ ಗೂಗಲ್ ನಿಂದ ಮಾನವ ಸರಪಳಿ ಪ್ರಾರಂಭವಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ರೋಟರಿ ಸಂಸ್ಥೆ

ಬಿಸ್ಕತ್ ವಿತರಿಸಲು ವ್ಯವಸ್ಥೆಯ ಮಾಡಿದ್ದು ಶ್ಲಾಘನೀಯ‘ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ ಬಣ್ಣಿಸಿದರು.

ನಗರದಲ್ಲಿ ಬಿಸ್ಕತ್ ವಿತರಣೆ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿ, ಅಪ್ಪಿಕೊಂಡಿರುವ ನಾಡಿನ ಜನರಿಂದ ಯಶಸ್ವಿಯಾಗಿ ಈ ಕಾರ್ಯ ನಡೆಸಲು ಯೋಜನೆ ರೂಪಿಸಲಾಗಿದೆ. ಇದು ಜಗತ್ತಿನಲ್ಲಿಯೇ ಅತಿ ಉದ್ದದ ಮಾನವ ಸರಪಳಿ ಎನಿಸಿಕೊಳ್ಳಲಿದೆ. ರೋಟರಿ ಇಂಟರ್ ನಾಷನಲ್ ಸಹಯೋಗದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಜಿಲ್ಲೆಯ ಎಲ್ಲ ರೋಟರಿ ಕ್ಲಬ್ ಗಳು ಮಾನವ ಸರಪಳಿಯಲ್ಲಿ ಭಾಗವಹಿಸುವ ಮಕ್ಕಳಿಗೆ ಬಿಸ್ಕೆಟ್ ವ್ಯವಸ್ಥೆಯನ್ನು ಮಾಡಿವೆ’ ಎಂದು ತಿಳಿಸಿದರು.

ರೋಟರಿ ಸಹಾಯಕ ಗೌರ್ನರ್ ಎನ್. ಶಿವಶಂಕರ ಮಾತನಾಡಿದರು.

ರೋಟರಿ ಕ್ಲಬ್ ಕಾಟನ್ ಸಿಟಿ ಅಧ್ಯಕ್ಷ ಪ್ರವೀಣ್ ಗೌಡ, ಈಸ್ಟ್ ಕ್ಲಬ್ ಅಧ್ಯಕ್ಷ ಹನುಮಂತ ರೆಡ್ಡಿ, ಯಶವಂತ ಗೌರ್ವ್, ಈಸ್ಟ್ ಕ್ಲಬ್ ನಿರ್ದೇಶಕ ಚಂದ್ರಕಾಂತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT